ಲಿಂಗಾಯತ ಧರ್ಮಕ್ಕೂ ಸರ್ಕಾರಕ್ಕೂ ಯಾವುದೇ ಸಂಬಂಧ ಇಲ್ಲ : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

Cm-Sidad

ಚಿತ್ರದುರ್ಗ, ಸೆ.24- ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟಕ್ಕೂ, ಸರ್ಕಾರಕ್ಕೂ ಯಾವುದೇ ಸಂಬಂಧ ವಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಇಂದಿಲ್ಲಿ ಸ್ಪಷ್ಟಪಡಿಸಿದರು. ಚಿತ್ರದುರ್ಗ ತಾಲೂಕು ಸಿರಿಗೆರೆಯ ಶ್ರೀಮಠದಲ್ಲಿ ಏರ್ಪಡಿಸಿದ್ದ ತರಳಬಾಳು ಜಗದ್ಗುರು ಶ್ರೀ ಶಿವಕುಮಾರ ಸ್ವಾಮೀಜಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟದಲ್ಲಿ ಸಚಿವರು ಪಾಲ್ಗೊಳ್ಳುತ್ತಿರುವುದು ಅವರ ವೈಯಕ್ತಿಕ ವಿಷಯ. ಅದಕ್ಕೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದರು. ಧರ್ಮದ ವಿಚಾರದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ಪ್ರತ್ಯೇಕ ಧರ್ಮದ ವಿಚಾರವನ್ನು ಸರ್ಕಾರದಿಂದ ಹೊರಗಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಉತ್ತರ ಕರ್ನಾಟಕದ ಕಲಬುರಗಿಯಲ್ಲಿ ಇಂದು ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಆಗ್ರಹಿಸಿ ನಡೆಯುತ್ತಿರುವ ಸಮಾವೇಶಕ್ಕೂ, ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಅದರಲ್ಲಿ ಸಚಿವರು ಪಾಲ್ಗೊಳ್ಳುತ್ತಿರುವುದು ವೈಯಕ್ತಿಕ ವಿಷಯ. ಈ ವಿಷಯದಲ್ಲಿ ನಾವು ಮಧ್ಯಪ್ರವೇಶಿಸುವುದಿಲ್ಲ. ರ್ಯಾಲಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಅವರು ಸ್ವತಂತ್ರರು ಎಂದು ಹೇಳಿದರು.

ಶಿವಮೊಗ್ಗದಲ್ಲಿ ಈಶ್ವರಪ್ಪನವರು ನಿಮ್ಮನ್ನು ಬುರುಡೆ ದಾಸಯ್ಯ ಎಂದು ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮತಭಿಕ್ಷೆ ಕೇಳುವವರೆಲ್ಲ ದಾಸಯ್ಯರೇ. ಇನ್ನು ಬುರುಡೆ ಬಿಡುವವರು ಬಿಜೆಪಿಯವರೆ ಹೊರತು ನಾವಲ್ಲ ಎಂದು ಹೇಳಿದರು. ಈ ಬಗ್ಗೆ ಹೇಳಿಕೆ ನೀಡಿರುವ ಈಶ್ವರಪ್ಪನವರಿಗೆ ತಲೆ ಸರಿಯಿಲ್ಲ ಎಂದು ತಿರುಗೇಟು ನೀಡಿದರು.

Facebook Comments

Sri Raghav

Admin