ಲಿಂಗಾಯತ ಧರ್ಮ ಒಡೆದರೆ ಉಗ್ರ ಹೋರಾಟ ಮಾಡುವುದಾಗಿ ಸಿಎಂ ಮೇಲೆ ಮಠಾಧೀಶರ ಒತ್ತಡ

ಈ ಸುದ್ದಿಯನ್ನು ಶೇರ್ ಮಾಡಿ

CM--1

ಬೆಂಗಳೂರು, ಮಾ.15- ತಜ್ಞರ ಸಮಿತಿ ವರದಿ ಆಧರಿಸಿ ಪ್ರತ್ಯೇಕ ಲಿಂಗಾಯತ ಧರ್ಮ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು, ರಾಜ್ಯ ಸರ್ಕಾರ ಅಂತಹ ನಿರ್ಧಾರ ತೆಗೆದುಕೊಂಡರೆ ಉಗ್ರ ಸ್ವರೂಪದ ಹೋರಾಟ ನಡೆಸುವುದಾಗಿ ವೀರಶೈವ ಲಿಂಗಾಯತ ಸಮುದಾಯದ ಮಠಾಧೀಶರ ನಿಯೋಗ ಮುಖ್ಯಮಂತ್ರಿ ಅವರ ಮೇಲೆ ಒತ್ತಡ ಹೇರಿದೆ. ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಸುಮಾರು 32ಕ್ಕೂ ಹೆಚ್ಚು ಸ್ವಾಮೀಜಿಗಳ ನಿಯೋಗ ಸಮಾಜವಾದಿ ಹಿನ್ನೆಲೆಯಿಂದ ಬಂದಂತಹ ಸಿದ್ದರಾಮಯ್ಯ ಅವರು ಸಮಾಜವನ್ನು ವಿಂಗಡಿಸುವ ಕೆಲಸ ಮಾಡಬಾರದು.  ಒಂದು ವೇಳೆ ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ ಉಗ್ರ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.

ರಾಜ್ಯದಲ್ಲಿ ಸುಮಾರು 2950 ಮಠಗಳಿವೆ. ಆ ಮಠಗಳ ಪೈಕಿ 2900 ಸಾವಿರ ಮಠಗಳು ಲಿಂಗಾಯತ ಮತ್ತು ವೀರಶೈವ ವಿಭಜನೆಯಾಗಬಾರದೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದ 50 ಮಠಗಳು ಸಮಾಜ ಒಡೆಯುವ ಕೆಲಸಕ್ಕೆ ಕೈ ಹಾಕಿವೆ. ಅದರಲ್ಲಿ ಐದಾರು ಮಂದಿ ಮಾತ್ರ ಪ್ರಮುಖ ಮಠಾಧೀಶರಿದ್ದಾರೆ. 2900 ಜನ ಮಠಾಧೀಶರ ಅಭಿಪ್ರಾಯವನ್ನು ಸರ್ಕಾರ ಗಣನೆಗೆ ತೆಗೆದುಕೊಳ್ಳಬೇಕು ಎಂದು ನಿಯೋಗ ಒತ್ತಾಯಿಸಿದೆ. ನಿಯೋಗದ ಅಹವಾಲನ್ನು ಸಾವಧಾನದಿಂದ ಆಲಿಸಿದ ಮುಖ್ಯಮಂತ್ರಿಯವರು, ಸರ್ಕಾರ ದುಡುಕಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತಜ್ಞರ ವರದಿಯನ್ನು ಇನ್ನೂ ಸಂಪೂರ್ಣ ಅಧ್ಯಯನ ಮಾಡಿಲ್ಲ, ಮೊದಲು ಅದನ್ನು ಸಂಪೂರ್ಣ ಅಧ್ಯಯನ ಮಾಡುತ್ತೇವೆ. ನಂತರ ಬುದ್ಧಿಜೀವಿಗಳ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದ್ದಾರೆ.

ವೀರಶೈವ ಲಿಂಗಾಯತ ಧರ್ಮವು ಅತ್ಯಂತ ಪ್ರಾಚೀನವಾದುದು. ಇದು ಶಿವಲಿಂಗ ಸ್ಥಾಪನೆಗೊಂಡು ವೀರಭದ್ರ ದೇವರು, ರೇಣುಕಾದಿ ಪಂಚಾಚಾರ್ಯರು ಹಾಗೂ ಬಸವಾದಿ ಶರಣರಿಂದ ಹಿಡಿದು ಇಂದಿನ ಮಠಾಧಿಪತಿಗಳವರೆಗೆ ಪುನರುಜ್ಜೀವನಗೊಳ್ಳುತ್ತಾ ಬಂದಿದೆ. ಎಲ್ಲ ವರ್ಗದ ಜನರನ್ನು ಪ್ರೀತಿಸಿ, ಪೆÇ್ರೀತ್ಸಾಹಿಸಿ, ಶಿಕ್ಷಣ, ಸಂಸ್ಕಾರ ಇತ್ಯಾದಿಗಳನ್ನು ಕೊಡುತ್ತಾ ಬಂದಿದೆ. ಜಾತ್ಯತೀತ ನಿಲುವನ್ನು, ಸಿದ್ಧಾಂತಗಳನ್ನು ಮುನ್ನಡೆಸಿಕೊಂಡು ಬರಲಾಗಿದೆ. ಇಂತಹ ಸನಾತನ ಧರ್ಮದ ವಿಚಾರದಲ್ಲಿ ಗೊಂದಲ ಉಂಟಾಗಿರುವುದು ಸರ್ವ ಜನಾಂಗಕ್ಕೂ ಮತ್ತು ಸಮಾಜದ ಮಠಾಧಿಪತಿಗಳಿಗೂ ನೋವುಂಟು ಮಾಡಿದೆ. ಧರ್ಮ ಕಾರ್ಯ, ಸಮಾಜ ಮಠಗಳ ಪ್ರಗತಿಯನ್ನು ಬಿಟ್ಟು ಒಡೆದು ಹೋಗಲಿರುವ ಧರ್ಮವನ್ನು ರಕ್ಷಣೆ ಮಾಡುವಲ್ಲಿ ಆರ್ಥಿಕ, ದೈಹಿಕ, ಮಾನಸಿಕ ನೋವನ್ನು ಅನುಭವಿಸುತ್ತಿದ್ದೇವೆ. ಇಂತಹ ಪ್ರಸಂಗದಲ್ಲಿ ವಿಚಾರವಾದಿಗಳು, ಬುದ್ಧಿಜೀವಿಗಳು ಆದ ತಾವು ಸರ್ಕಾರಕ್ಕೆ ತಜ್ಞರ ಸಮಿತಿ ನೀಡಿರುವ ವರದಿಯನ್ನು ಅಂಗೀಕರಿಸಬಾರದು. ತಜ್ಞರ ವರದಿಯನ್ನು ಅಂಗೀಕರಿಸದೆ ನಮ್ಮ ಸಮಾಜದ ಹಿತರಕ್ಷಣೆಗಾಗಿ ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಲಾಗಿದೆ.

ಒಂದು ವೇಳೆ ನಮ್ಮ ಮನವಿಗೆ ಸ್ಪಂದಿಸದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಸದಾಕಾಲ ಹೋರಾಟ ಮಾಡುವ ನಿರ್ಣಯವನ್ನು ಸಮಾಜದ ಮುಖಂಡರು, ಮಠಾಧಿಪತಿಗಳು, ಸಾಹಿತಿಗಳು, ನ್ಯಾಯವಾದಿಗಳು ಕೈಗೊಂಡಿದ್ದಾರೆ. ಇದನ್ನು ತಾವು ಬೆದರಿಕೆ ಎಂದು ತಿಳಿಯದೆ ಸಮಾಜದ ಮನವಿಯೆಂದು ಪರಿಗಣಿಸಬೇಕು. ಸಮಾಜ ಸಂತೋಷ ಪಡುವ ವಿಚಾರವನ್ನು ಘೋಷಿಸಬೇಕು ಎಂದು ಮನವಿ ಮಾಡಲಾಗಿದೆ.
ಒಂದು ವೇಳೆ ಸಮಾಜಕ್ಕೆ ಸರ್ಕಾರದ ಸೌಲಭ್ಯಗಳನ್ನು ಕೊಡಿಸುವ ಇಚ್ಛೆ ತಮಗಿದ್ದರೆ ವೀರಶೈವ ಲಿಂಗಾಯತ ಧರ್ಮ ಎಂದು ಘೋಷಿಸಿ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಲಾಗಿದೆ.
ಮುಖ್ಯಮಂತ್ರಿಗಳ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಗದಗದ ಬಾಳೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ವೀರಶೈವ ಲಿಂಗಾಯತ ಧರ್ಮ ಒಟ್ಟಾಗಿರಬೇಕು ಎಂದು 2900 ಮಠಗಳ ಮಠಾಧೀಶರು ಒಮ್ಮತ ಅಭಿಪ್ರಾಯ ಹೊಂದಿದ್ದಾರೆ. ಸರ್ಕಾರ 50 ಮಂದಿ ಮಠಾಧೀಶರ ಮನವಿಗೆ ಸ್ಪಂದಿಸದೆ ಬಹುಸಂಖ್ಯಾತರ ಧ್ವನಿಗೆ ಓಗೊಡಬೇಕು ಎಂದು ಮನವಿ ಮಾಡಿದರು. ವಾರಣಾಸಿ ಕಾಶಿ ಪೀಠದ ಶ್ರೀ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸದಿದ್ದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು.  ಸಮಾಜ ಒಡೆಯುವ ಕೆಲವು ಕುತಂತ್ರಿಗಳ ಮನವಿಗೆ ಸರ್ಕಾರ ಕಿವಿಗೊಡಬಾರದು ಎಂದು ಹೇಳಿದರು.

ರಾಜ್ಯಸರ್ಕಾರ ಯಾವುದೇ ಕಾರಣಕ್ಕೂ ತಜ್ಞರ ವರದಿ ಆಧರಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬಾರದು. ಒಂದು ವೇಳೆ ಮುಖ್ಯಮಂತ್ರಿ ಅವರು ಶಿಫಾರಸು ಮಾಡಿದ್ದೇ ಆದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುವ ಜೊತೆಗೆ ಕೇಂದ್ರ ಸರ್ಕಾರದ ಬಳಿ ನಿಯೋಗ ಕೊಂಡೊಯ್ಯುವ ಪ್ರಯತ್ನವನ್ನು ನಾವು ಮಾಡುವುದಾಗಿ ಅವರು ತಿಳಿಸಿದರು. ಶ್ರೀ ಬಸವರಾಜೇಂದ್ರ ಸ್ವಾಮೀಜಿ, ಹಿರೇಮಠ, ಗೋಕಾಕ್, ಶ್ರೀ ಸಿದ್ಧಪ್ರಭು ಶಿವಾಚಾರ್ಯ ಸ್ವಾಮೀಜಿ, ಶ್ರೀ ಗುರುಈರಲಿಂಗೇಶ್ವರ ಹಿರೇಮಠ ಸ್ವಾಮೀಜಿ, ಶ್ರೀ ಶಿವಲಿಂಗ ಮುರುಘಾರಾಜೇಂದ್ರ ಸ್ವಾಮೀಜಿ, ಹಿರೇಮಠ, ಬಾಗೋಜಿಕೊಪ್ಪ, ಶ್ರೀ ಮಲಯ ಶಾಂತಮುನಿ ಶಿವಾಚಾರ್ಯಸ್ವಾಮೀಜಿ ಶಿವಗಂಗಾ ಕ್ಷೇತ್ರ, ಸಿದ್ಧಗಂಗಾ ಶಿವಾಚಾರ್ಯ ಸ್ವಾಮೀಜಿ, ಡೋಣೂರು, ಶ್ರೀ ಹುಚ್ಚೇಶ್ವರ ಸ್ವಾಮೀಜಿ, ಹುಚ್ಚೇಶ್ವರ ಮಠ, ಶ್ರೀ ಡಾ.ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ, ರಾಜಾಪುರ ಸಂಸ್ಥಾನ ಮಠ, ಆನೇಕಲ್, ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ಗದ್ಗಿ ಮಠ, ವಿಜಯಪುರ ಸೇರಿದಂತೆ 32ಕ್ಕೂ ಹೆಚ್ಚು ಮಠಾಧೀಶರು ನಿಯೋಗದಲ್ಲಿದ್ದರು.

Facebook Comments

Sri Raghav

Admin