ಲಿಂಗಾಯಿತ ಧರ್ಮಕ್ಕೆ ಸಿದ್ದಗಂಗಾ ಶ್ರೀ ಸಮ್ಮತಿ, ಇಕ್ಕಟ್ಟಿಗೆ ಸಿಲುಕಿದ ಬಿಜೆಪಿ

ಈ ಸುದ್ದಿಯನ್ನು ಶೇರ್ ಮಾಡಿ

Siddaganga-Swamiji--01

ಬೆಂಗಳೂರು, ಸೆ.11- ಪ್ರತ್ಯೇಕ ಲಿಂಗಾಯಿತ ಧರ್ಮಕ್ಕೆ ನಾಡಿನ ಹಿರಿಯ ಧಾರ್ಮಿಕ ಗುರುಗಳಾದ ತುಮಕೂರಿನ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಗಳು ಬೆಂಬಲ ಸೂಚಿಸಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕಳೆದ ಮೂರು ತಿಂಗಳಿನಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿರುವ ಪ್ರತ್ಯೇಕ ಲಿಂಗಾಯಿತ ಧರ್ಮ ಕುರಿತಂತೆ ಬಿಜೆಪಿ ನಾಯಕರು ಈವರೆಗೂ ತುಸು ಅಂತರವನ್ನೇ ಕಾಪಾಡಿಕೊಂಡು ಬಂದಿದ್ದಾರೆ. ಈ ವಿಷಯದ ಬಗ್ಗೆ ಪಕ್ಷದ ಯಾವುದೇ ನಾಯಕರು ತುಟಿ ಬಿಚ್ಚದಂತೆ ಎಚ್ಚರ ವಹಿಸಬೇಕೆಂದು ಬಿಜೆಪಿ ವರಿಷ್ಠರು ಕಟ್ಟಪ್ಪಣೆ ನೀಡಿದ್ದರು. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಒಬ್ಬರು ಮಾತ್ರ ಒಂದು ಬಾರಿ ವೀರಶೈವ-ಲಿಂಗಾಯಿತ ಬೇರೆ ಬೇರೆಯಲ್ಲ ಎಂದು ಹೇಳಿದ್ದನ್ನು ಹೊರತುಪಡಿಸಿದರೆ ಉಳಿದ ಯಾವುದೇ ನಾಯಕರು ಮೌನಕ್ಕೆ ಶರಣಾಗಿದ್ದರು.

ವಿಧಾನಸಭೆ ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್, ಮುಖಂಡರಾದ ಸೊಗಡು ಶಿವಣ್ಣ, ಉಮೇಶ್‍ಕತ್ತಿ, ಬಸವರಾಜಬೊಮ್ಮಾಯಿ, ಎಸ್.ಎ.ರವೀಂದ್ರನಾಥ್ ಸೇರಿದಂತೆ ಯಾವುದೇ ಮುಖಂಡರು ಪ್ರತಿಕ್ರಿಯೆ ನೀಡುವ ಗೋಚಿಗೆ ಹೋಗಿರಲಿಲ್ಲ. ಬದಲಿಗೆ ಜೆಡಿಎಸ್, ಕಾಂಗ್ರೆಸ್‍ನಲ್ಲಿರುವ ನಾಯಕರೇ ಜಿದ್ದಿಗೆ ಬಿದ್ದವರಂತೆ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟಕ್ಕೆ ದುಮುಕ್ಕಿದ್ದರು. ಇದೀಗ ಬಿಜೆಪಿ ನಾಡಿನ ಪ್ರಮುಖ ಮೂರು ಮಠಾಧೀಶರಾದ ಸಿದ್ದಗಂಗಾ ಮಠದ ಡಾ.ಶ್ರೀ ಶಿವಕುಮಾರಸ್ವಾಮೀಜಿ, ಸುತ್ತೂರಿನ ಡಾ.ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಹಾಗೂ ಸಿರಿಗೆರೆಯ ತರಳಬಾಳು ಮಠದ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡುವುದಿಲ್ಲ ಎಂಬುದು ಬಿಜೆಪಿ ನಾಯಕರ ವಾದವಾಗಿತ್ತು.

ಆದರೆ, ಸ್ವತಃ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಈ ಮೂವರು ಮಠಾಧೀಶರನ್ನು ಖುದ್ದು ಭೇಟಿ ಮಾಡಿ ಪ್ರತ್ಯೇಕ ಧರ್ಮಕ್ಕೆ ಬೆಂಬಲ ನೀಡಬೇಕೆಂದು ಕೋರಿದ್ದರು. ಎಂ.ಬಿ.ಪಾಟೀಲ್ ಹೇಳಿರುವಂತೆ ಪ್ರತ್ಯೇಕ ಧರ್ಮಕ್ಕೆ ಮಠಾಧೀಶರು ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿರುವುದು ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಪ್ರತ್ಯೇಕ ಧರ್ಮಕ್ಕೆ ಬೆಂಬಲವಾಗಿ ನಿಂತರೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಹೊಡೆತ ಬೀಳಬಹುದೆಂಬ ಆತಂಕ. ಮತ್ತೊಂದೆಡೆ ಬೆಂಬಲ ನೀಡದಿದ್ದರೆ ಸಮುದಾಯದ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ ಎಂಬ ಅಳುಕು. ಹೀಗೆ ಇಕ್ಕಟ್ಟಿನಲ್ಲಿ ಸಿಲುಕಿರುವ ಕಮಲ ಪಡೆ ನಾಯಕರು ಮುಂದೆ ಏನು ಮಾಡಬೇಕೆಂಬ ಜಿಜ್ಞಾಸೆಗೆ ಸಿಲುಕಿದ್ದಾರೆ.

Facebook Comments

Sri Raghav

Admin