ಲಿಂಗಾಯಿತ ಪ್ರತ್ಯೇಕ ಧರ್ಮ ವರದಿ ಸ್ವಾಗತಾರ್ಹ : ಚಂಪಾ

ಈ ಸುದ್ದಿಯನ್ನು ಶೇರ್ ಮಾಡಿ

champa

ಬೆಂಗಳೂರು, ಮಾ.5- ಲಿಂಗಾಯಿತ ಪ್ರತ್ಯೇಕ ಧರ್ಮದ ಸಂಬಂಧ ನ್ಯಾಯಮೂರ್ತಿ ನಾಗಮೋಹನದಾಸ್ ನೇತೃತ್ವದ ಸಮಿತಿ ನೀಡಿರುವ ವರದಿ ಸ್ವಾಗತಾರ್ಹ. ಸರ್ಕಾರ ಕೇಂದ್ರಕ್ಕೆ ಶೀಘ್ರ ಶಿಫಾರಸು ಮಾಡಬೇಕೆಂದು ಸಾಹಿತಿ ಡಾ.ಚಂಪಾ ಆಗ್ರಹಿಸಿದ್ದಾರೆ. ಜಾಗತಿಕ ಲಿಂಗಾಯಿತ ಮಹಾಸಭಾ ಅಸ್ಥಿತ್ವಕ್ಕೆ ಬಂದಿದ್ದು, ಮಾರ್ಗದರ್ಶಕ ಮಂಡಳಿ ಮುಖ್ಯಸ್ಥರಾಗಿರುವ ಡಾ.ಚಂಪಾ ಹಾಗೂ ಅಧ್ಯಕ್ಷರಾಗಿರುವ ಡಾ.ಜಯಣ್ಣ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗಮೋಹನದಾಸ್ ವರದಿ ಸ್ವಾಗತಾರ್ಹವಾಗಿದ್ದು, ಆ ವರದಿ ತರಾತುರಿಯಲ್ಲಿ ರೂಪಿತವಾಗಿಲ್ಲ. ಎಲ್ಲಾ ಆಯಾಮಗಳನ್ನು ಅಧ್ಯಯನ ನಡೆಸಿಯೇ ಸಮಿತಿ ವರದಿ ನೀಡಿದೆ. ಅದನ್ನು ಶೀಘ್ರ ಜಾರಿಗೆ ತರಬೇಕೆಂಬುದು ಮಹದಾಸೆಯಾಗಿದೆ ಎಂದು ಹೇಳಿದರು.

ಲಿಂಗಾಯಿತ ತುಂಬ ಹಳೆಯ ಸ್ವತಂತ್ರ ಧರ್ಮ ಎಂದು ಡಾ.ಎಂ.ಎಂ.ಕಲಬುರ್ಗಿ ಅವರು ದಾಖಲೆ ಸಮೇತ ಸಾಬೀತು ಪಡಿಸಿದ್ದರು. ಈಗ ಸರ್ಕಾರ ಅದಕ್ಕೆ ಮಾನ್ಯತೆ ನೀಡಬೇಕಾಗಿದೆ ಎಂದು ಚಂಪಾ ಹೇಳಿದರು. ನಾಗಮೋಹನದಾಸ್ ಅವರ ಸಮಿತಿ ನೀಡಿರುವ ವರದಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂಬ ಮಾಹಿತಿ ಇದೆ. ಸಾಧಕ-ಬಾಧಕಗಳನ್ನು ಚರ್ಚಿಸಿ ಕೇಂದ್ರಕ್ಕೆ ಶೀಘ್ರ ಶಿಫಾರಸು ಮಾಡುವ ಮೂಲಕ ಲಿಂಗಾಯಿತ ಧರ್ಮಕ್ಕೆ ಪ್ರತ್ಯೇಕ ಮಾನ್ಯತೆ ನೀಡಬೇಕೆಂದು ಆಗ್ರಹಿಸಿದರು.

ನಮ್ಮ ಧರ್ಮದ ವಿಷಯದಲ್ಲಿ ಅನ್ಯ ಧರ್ಮೀಯರು ಅನಗತ್ಯವಾಗಿ ಹಸ್ತಕ್ಷೇಪ ಮಾಡುವುದು ಸಮಂಜಸವಲ್ಲ. ಇಂತಹ ವೃತ್ತಿಗಳು ನಿಲ್ಲಬೇಕೆಂದು ಅವರು ಹೇಳಿದರು. ಸಮಿತಿ ತರಾತುರಿಯಲ್ಲಿ ವರದಿ ತಯಾರಿಸಿದೆ ಎಂದು ನನಗೇನು ಅನ್ನಿಸುವುದಿಲ್ಲ. ಅದರಲ್ಲಿ ಸಾಕಷ್ಟು ತಜ್ಞರಿದ್ದಾರೆ. ಅಧ್ಯಯನ ನಡೆಸಿಯೇ ವರದಿ ರೂಪಿಸಿದೆ. ಅದರ ಜಾರಿಗೆ ನಾವು ಯಾವುದೇ ಕಾಲ ಮಿತಿಯನ್ನು ನಿಗದಿಪಡಿಸುವುದಿಲ್ಲ. ಶೀಘ್ರವಾಗಿ ಆಗಲಿ ಎಂಬುದು ನಮ್ಮ ಆಶಯ. ಸಮಿತಿಯ ಔಚಿತ್ಯವನ್ನು ಪ್ರಶ್ನಿಸಿ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಆ ಸಂಬಂಧ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಚಂಪಾ ಹೇಳಿದರು.

ಜಾಗತಿಕ ಲಿಂಗಾಯಿತ ಮಹಾಸಭಾದ ನೂತನ ಅಧ್ಯಕ್ಷ ಡಾ.ಜಯಣ್ಣ ಮಾತನಾಡಿ,ಲಿಂಗಾಯಿತ ಪ್ರತ್ಯೇಕ ಧರ್ಮದ ವಿಷಯದಲ್ಲಿ ವೀರಶೈವರು ತಟಸ್ಥವಾಗಿದ್ದರು. ಈಗಲೂ ತಟಸ್ಥವಾಗಿದ್ದಾರೆ. ಮುಂದೆಯೂ ತಟಸ್ಥವಾಗಿರುವುದು ಉತ್ತಮ ಎಂದು ಹೇಳಿದರು. ಲಿಂಗಾಯಿತ ಎಂಬುದು ಒಂದು ಹೋರಾಟ. ಯಾವುದೇ ರಾಜಕೀಯ ಪಕ್ಷದವರು ಅದನ್ನು ಅಸ್ತ್ರವಾಗಿ, ವಸ್ತುವಾಗಿ ಬಳಸಿಕೊಳ್ಳಬಾರದು ಎಂದು ಹೇಳಿದರು.

Facebook Comments

Sri Raghav

Admin