ಲಿಂಗಾಯಿತ ಪ್ರತ್ಯೇಕ ಧರ್ಮ ಶಿಫಾರಸು ಕುರಿತು ಸಂಪುಟ ಸಭೆಯಲ್ಲಿ ಸಚಿವರ ನಡುವೆ ವಾಗ್ವಾದ

ಈ ಸುದ್ದಿಯನ್ನು ಶೇರ್ ಮಾಡಿ

Cabinet--01

ಬೆಂಗಳೂರು, ಮಾ.19-ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ ತಾರಕಕ್ಕೇರಿದೆ. ಈ ವಿವಾದಕ್ಕೆ ಸಂಬಂಧಪಟ್ಟಂತೆ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಲಿಂಗಾಯತ ಸಮುದಾಯದ ಸಚಿವರ ನಡುವೆ ತೀವ್ರ ಜಟಾಪಟಿಯೇ ನಡೆದಿದೆ.
ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್, ಈಶ್ವರ್ ಖಂಡ್ರೆ ಅವರು ಸಂಪುಟ ಸಭೆಯಲ್ಲಿ ಲಿಂಗಾಯತ ಧರ್ಮ ಪ್ರತ್ಯೇಕ ಶಿಫಾರಸನ್ನು ವಿರೋಧಿಸಿ ದನಿ ಎತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಸರ್ಕಾರಕ್ಕೆ ಈ ಉಸಾಬರಿ ಏಕೆ ಬೇಕಿತ್ತು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಸಚಿವರಾದ ಎಂ.ಬಿ.ಪಾಟೀಲ್, ವಿನಯ್‍ಕುಲಕರ್ಣಿ, ಶರಣಪ್ರಕಾಶ್ ಪಾಟೀಲ್ ಅವರು ಲಿಂಗಾಯತ ಧರ್ಮದ ಪ್ರತ್ಯೇಕದ ಪರ ವಾದಿಸಿದ್ದಾರೆ. ನಿಮ್ಮಿಬ್ಬರಿಂದ ಎಲ್ಲಾ ವ್ಯವಸ್ಥೆ ಹಾಳಾಯಿತು ಎಂದು ರೇಗಿದ್ದಾರೆ.

ಸಂಪುಟದಲ್ಲಿ ಮಾತಿಗೆ ಮಾತು ಬೆಳೆದಿದೆ. ಆಗ ಮಧ್ಯಪ್ರವೇಶಿಸಿದ ಮುಖ್ಯಮಂತ್ರಿಗಳು ನೀವು ಸಲಹೆ ಕೊಡಿ ಎಂದು ಕೇಳಿದರೆ ಜಗಳಕ್ಕಿಳಿದಿದ್ದೀರಿ. ಎಲ್ಲಾ ನೀವೇ ಮಾತನಾಡುವುದಾದರೆ ಇಲ್ಲಿ ನಾನೇಕೆ ಇರಬೇಕು ಎಂದು ಸಚಿವರನ್ನು ಸಮಾಧಾನ ಪಡಿಸಲು ಯತ್ನಿಸಿದ್ದಾರೆ. ಜಗಳ ತಾರಕಕ್ಕೇರಿದಾಗ ವಿನಯ್‍ಕುಲಕರ್ಣಿ ಅವರನ್ನು ಸಮಾಧಾನ ಪಡಿಸಿ ಕೆಲ ಕಾಲ ಸಭೆಯಿಂದ ಹೊರಕಳುಹಿಸಿದ್ದಾರೆ. ಈ ಸಂದರ್ಭದಲ್ಲಿ ವಿನಯ್‍ಕುಲಕರ್ಣಿ ಕೆಲ ಕಾಲ ಹೊರ ಬಂದು ಮತ್ತೆ ಸಭೆಗೆ ತೆರಳಿದರು. ಆಗಲೂ ಕೂಡ ಮಾತಿನ ಜಟಾಪಟಿ ನಡೆಯಿತು.

ಮೌನವಾಗಿಯೇ ಇದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಪ್ರತ್ಯೇಕ ಧರ್ಮ ಶಿಫಾರಸಿಗೆ ಸಂಬಂಧಿಸಿದಂತೆ ಕಾನೂನು ತೊಡಕಿನ ಕುರಿತು ಅಡ್ವೊಕೇಟ್ ಜನರಲ್ ಅವರ ಸಲಹೆ ಪಡೆಯಲು ಮಧುಸೂದನ್ ಅವರನ್ನು ಸಂಪುಟ ಸಭೆಗೆ ಕರೆಸಿಕೊಂಡಿದ್ದಾರೆ. ಹೊರಗೆ ಸಂಪುಟ ಸಭೆಯಲ್ಲಿ ನಡೆಯುತ್ತಿರುವ ಎಲ್ಲಾ ವಿಷಯಗಳು ಮಾಧ್ಯಮದಲ್ಲಿ ಚರ್ಚೆಯಾಗುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸಿಬ್ಬಂದಿಯನ್ನು ಸಂಪುಟದಿಂದ ಹೊರಕಳುಹಿಸಿ ಲಿಂಗಾಯತ ಧರ್ಮದ ಬಗ್ಗೆ ಚರ್ಚಿಸಲು ಪ್ರಾರಂಭಿಸಿದ್ದಾರೆ.

ಆಗ ಕೆಲ ಸಚಿವರು ತಟಸ್ಥವಾಗಿದ್ದು, ನಿಮ್ಮ ವಿವೇಚನೆಗೆ ಬಿಟ್ಟಿದ್ದೇವೆ. ನೀವು ಕೈಗೊಳ್ಳುವ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದ್ದಾರೆ.
ವೀರಶೈವ ಮತ್ತು ಲಿಂಗಾಯತ ಸಮುದಾಯದ ಸಚಿವರು ತಮ್ಮ ಹೇಳಿಕಗೆ ಅಂಟಿಕೊಂಡಿದ್ದಾರೆ. ಸುದೀರ್ಘ ಎರಡು ಗಂಟೆಗೂ ಹೆಚ್ಚು ಕಾಲ ಇದೇ ವಿಷಯದ ಬಗ್ಗೆ ಚರ್ಚೆ ಮುಂದುವರೆದಿತ್ತು.ಹೊರಗಡೆ ನಮ್ಮ ಪರವಾಗಿ ತೀರ್ಪು ಬರುತ್ತದೆ ಎಂದು ಹಲವರು ಪತ್ರಿಕಾಗೋಷ್ಠಿ ನಡೆಸಲು ಕಾಯುತ್ತಿದ್ದರು, ಮಧ್ಯಾಹ್ನ ಎರಡು ಗಂಟೆಯಾದರೂ ಸಂಪುಟದಿಂದ ಯಾವುದೇ ತೀರ್ಮಾನ ಹೊರಬೀಳಲಿಲ್ಲ.

Facebook Comments

Sri Raghav

Admin