ಲೆಫ್ಟಿನೆಂಟ್ ಗೌರ್ನರ್ ಕಚೇರಿಯಲ್ಲಿ ಧರಣಿಗೆ ಅಧಿಕಾರ ಕೊಟ್ಟವರ್‍ಯಾರು..? : ಕೇಜ್ರಿಗೆ ಕೋರ್ಟ್ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

Kejriwal--01

ನವದೆಹಲಿ, ಜೂ.18-ಲೆಫ್ಟಿನೆಂಟ್ ಗೌರ್ನರ್ ಅವರ ಕಾರ್ಯಾಲಯದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳಿಗೆ ಅಧಿಕಾರ ಕೊಟ್ಟವರು ಯಾರು ಎಂದು ಎಎಪಿ ಸರ್ಕಾರವನ್ನು ದೆಹಲಿ ಹೈಕೋರ್ಟ್ ಇಂದು ಪ್ರಶ್ನಿಸಿದೆ. ಯಾವುದೇ ಸರ್ಕಾರಿ ಕಚೇರಿ ಅಥವಾ ಸಂಸ್ಥೆಗಳ ಹೊರಗೆ ನಡೆಸುವುದು ಸಾಮಾನ್ಯ. ಆದರೆ ಕಾರ್ಯಾಲಯದ ಒಳಗೆ ಧರಣಿ ನಡೆಸುವುದು ಸರಿಯಲ್ಲ. ಈ ರೀತಿ ಧರಣಿ ನಡೆಸಲು ಮುಖ್ಯಮಂತ್ರಿ ಮತ್ತು ಸಚಿವರಿಗೆ ಅನುಮತಿ ನೀಡಿದವರು ಯಾರು ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದ್ದು, ಆಪ್ ಸರ್ಕಾರಕ್ಕೆ ಮುಖಭಂಗವಾಗಿದೆ.

ಎಎಪಿ ಅಧ್ಯಕ್ಷರೂ ಆದ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ನಡೆಸುತ್ತಿರುವ ಧರಣಿ ವಿರುದ್ಧ ಹಾಗೂ ದೆಹಲಿ ಸರ್ಕಾರದ ಐಎಎಸ್ ಅಧಿಕಾರಿಗಳು ನಡೆಸುತ್ತಿದ್ದಾರೆನ್ನಲಾದ ಮುಷ್ಕರದ ವಿರುದ್ಧ ಸಲ್ಲಿಸಲಾಗಿದ್ದ ಎರಡು ಅರ್ಜಿಗಳ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ.ಕೆ.ಚಾವ್ಲಾ ಹಾಗೂ ನವೀನ್ ಚಾವ್ಲಾ ಅವರನ್ನು ಒಳಗೊಂಡ ಪೀಠವು ಲೆಫ್ಟಿನೆಂಟ್ ಗೌರ್ನರ್‍ಗಳ ಕಚೇರಿ ಒಳಗೆ ಧರಣಿ ಸಡೆಸುತ್ತಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು.

ಧರಣಿ ನಡೆಸಲು ಲಿಖಿತ ಅನುಮತಿ ಪಡೆಯಬೇಕು. ಮುಷ್ಕರ/ಧರಣಿ ನಡೆಸಲು ಅವರಿಗೆ (ಕೇಜ್ರಿವಾಲ್) ಅಧಿಕಾರ ಕೊಟ್ಟವನ್ನು ಯಾರು ? ನೀವು ಲೆ.ಜಿ. ಕಾರ್ಯಾಲಯದ ಒಳಗೆ ಧರಣಿ ನಡೆಸುತ್ತಿದ್ದೀರಿ. ನೀವು ಧರಣಿ ಮಾಡಬೇಕಾದರೆ ಕಚೇರಿಯ ಹೊರಗೆ ಮಾಡಬೇಕು ಎಂದು ಈ ಎರಡೂ ಪ್ರಕರಣಗಳಲ್ಲಿ ದೆಹಲಿ ಸರ್ಕಾರದ ಪರವಾಗಿ ವಕಾಲತ್ತು ವಹಿಸಿದ್ದ ವಕೀಲರಿಗೆ ಕೋರ್ಟ್ ತಿಳಿಸಿತು. ಈ ಪ್ರಕರಣದ ಮುಂದಿನ ವಿಚಾರಣೆ ಜೂನ್ 22ರಂದು ನಡೆಯಲಿದೆ.

ಐಎಎಸ್ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಇದನ್ನು ನಿಲ್ಲಿಸಬೇಕೆಂದು ಕೋರಿ ಲೆಫ್ಟಿನೆಂಟ್ ಗೌರ್ನರ್ ಅನಿಲ್ ಬೈಜಾಲ್ ಅವರ ಭೇಟಿಗೆ ಯತ್ನಿಸಿದರೂ ಅವಕಾಶ ದೊರೆತಿಲ್ಲ ಎಂದು ಆರೋಪಿಸಿ ಕೇಜ್ರಿವಾಲ್, ಉಪ ಮುಖ್ಯಮಂತ್ರಿ ಮನಿಷ್ ಸುಸೋಡಿಯಾ, ಸಚಿವರಾದ ಸತ್ಯೇಂದ್ರ ಜೈನ್ ಮತ್ತು ಗೋಪಾಲ್ ರಾಯ್ ಧರಣಿ ಮುಂದುವರಿಸಿದ್ದಾರೆ. ಈ ಮಧ್ಯೆ ಅನಿದಿಷ್ಠಾವಧಿ ಉಪವಾಸ ಸತ್ಯಗ್ರಹದಿಂದ ಅಸ್ವಸ್ಥರಾಗಿರುವ ಎಲ್‍ಎನ್‍ಜೆಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆರೋಗ್ಯ ಸಚಿವ ಜೈನ್ ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Facebook Comments

Sri Raghav

Admin