ಲೈಂಗಿಕ ದೌರ್ಜನ್ಯ ಕುರಿತು ವಿವಾದಾತ್ಮಕ ಹೇಳಿಕೆ : ಗೃಹ ಸಚಿವರಿಗೆ ಮಹಿಳಾ ಆಯೋಗ ಮತ್ತೊಂದು ನೊಟೀಸ್

ಈ ಸುದ್ದಿಯನ್ನು ಶೇರ್ ಮಾಡಿ

New-Year-Bengaluru

ಬೆಂಗಳೂರು, ಜ.5 – ಹೊಸ ವರ್ಷಾಚರಣೆ ಸಂದರ್ಭದಲ್ಲಿ ಯುವತಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳಕ್ಕೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ್‍ಗೆ ಕೇಂದ್ರ ಮಹಿಳಾ ಆಯೋಗ ಮತ್ತೊಂದು ನೊಟೀಸ್ ಜಾರಿ ಮಾಡಿದೆ. ನಿಮ್ಮ ಮೇಲೆ ನಾವು ಏಕೆ ಕ್ರಮ ಜರುಗಿಸಬಾರದು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ಲಲಿತಾಕುಮಾರ ಮಂಗಳಂ ಎರಡನೆ ನೋಟಿಸ್ ಜಾರಿ ಮಾಡಿದ್ದಾರೆ. ಎರಡು ದಿನಗಳ ಹಿಂದೆ ನೀಡಿದ್ದ ನೋಟಿಸ್‍ಗೆ ಯಾವುದೇ ರೀತಿಯ ಉತ್ತರ ನೀಡಿಲ್ಲ. ಹೀಗಾಗಿ ಆಯೋಗದಿಂದ ಎರಡನೆ ನೋಟಿಸ್ ನೀಡುತ್ತಿದ್ದೇವೆ. ಒಂದು ವೇಳೆ ಇದಕ್ಕೂ ಪ್ರತಿಕ್ರಿಯೆ ಬಾರದಿದ್ದರೆ ಆಯೋಗ ತನ್ನದೇ ಆದ ಕ್ರಮ ಕೈಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದೆ.

ರಾಷ್ಟ್ರದಲ್ಲಿ ಮಹಿಳೆಯರಿಗೆ ರಕ್ಷಣೆ ಕೊಡುವುದು ಪ್ರತಿಯೊಂದು ಸರ್ಕಾರಗಳ ಆದ್ಯ ಕರ್ತವ್ಯ. ಕೇಂದ್ರವೇ ಇರಲಿ ಇಲ್ಲವೇ ರಾಜ್ಯ ಸರ್ಕಾರವೇ ಇರಲಿ ಮಹಿಳೆಯರ ರಕ್ಷಣೆ ಪ್ರಥಮ ಆದ್ಯತೆಯಾಗಬೇಕು.  ಅದರಲ್ಲೂ ಬೆಂಗಳೂರು ಇಂದು ವಿಶ್ವದ ಪ್ರಮುಖ ನಗರವಾಗಿ ಬೆಳೆಯುತ್ತಿದೆ. ಡಿ.31ರ ರಾತ್ರಿ ಬ್ರಿಗೇಡ್ ರಸ್ತೆ ಮತ್ತು ಕಮ್ಮನಹಳ್ಳಿಯಲ್ಲಿ ದುಷ್ಕರ್ಮಿಗಳು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಲ್ಲದೆ ಕಿರುಕುಳವನ್ನು ನೀಡಿದ್ದಾರೆ.

ಇಂತಹ ಘಟನೆಗಳು ಸರ್ವೇ ಸಾಮಾನ್ಯ. ಪಾಶ್ಚಿಮಾತ್ಯ ಸಂಸ್ಕøತಿ, ಉಡುಗೆ-ತೊಡುಗೆಗಳೇ ಕಾರಣ ಎಂದು ಹೇಳಿರುವುದು ನಿಮ್ಮ ಘನತೆಗೆ ತಕ್ಕುದ್ದಲ್ಲ. ಅದರಲ್ಲೂ ನೀವು ರಾಜ್ಯದ ಗೃಹ ಸಚಿವರು ಎಂಬುದನ್ನು ಮರೆಯಬಾರದು. ಇಂತಹ ಹೇಳಿಕೆಗಳಿಂದಲೇ ನಾಗರಿಕ ಸಮಾಜದಲ್ಲಿ ಘಟನೆಗಳು ಹೆಚ್ಚಾಗುತ್ತವೆ ಎಂದು ಆಯೋಗ ಕಿಡಿಕಾರಿದೆ. ನಮ್ಮ ನೋಟಿಸ್‍ಗೆ ಉತ್ತರ ನೀಡದಿದ್ದರೆ ಕಾನೂನು ಹೋರಾಟ ಪ್ರಾರಂಭಿಸುತ್ತೇವೆ ಎಂದು ಎಚ್ಚರಿಸಲಾಗಿದೆ. ಡಾ.ಜಿ.ಪರಮೇಶ್ವರ್ ಅವರು ನಗರದಲ್ಲಿ ನಡೆದ ಘಟನೆಗೆ ಪಾಶ್ಚಿಮಾತ್ಯ ಸಂಸ್ಕøತಿ ಹಾಗೂ ಉಡುಗೆ-ತೊಡುಗೆಗಳೇ ಕಾರಣ ಎಂದು ಹೇಳಿದ್ದು ಭಾರೀ ವಿವಾದ ಸೃಷ್ಟಿಸಿತ್ತು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin