ಲೈಫ್ ಸ್ಟೈಲ್ : ಸೌಂದರ್ಯದ ಆಂತರ್ಯ

ಈ ಸುದ್ದಿಯನ್ನು ಶೇರ್ ಮಾಡಿ

Soudarya

ಹಿಂದೆಂದಿಗಿಂತಲೂ ಈಗ ನಮಗೆಲ್ಲರಿಗೂ ಸುಂದರವಾಗಿ ಕಾಣಬೇಕು ಅನ್ನೋದು ಅತಿಯಾಗಿ ಕಾಡುತ್ತಿದೆ. ಹೀಗಾಗಿ ಪ್ರತಿ ಗಲ್ಲಿ ಗಲ್ಲಿಯಲ್ಲೂ ಬ್ಯೂಟಿ ಪಾರ್ಲರ್‍ಗಳು ತಲೆ ಎತ್ತುತ್ತಿವೆ. ಬಟ್ಟೆ ಕಾಸ್ಮೆಟಿಕ್ಸ್ ಅಂಗಡಿಗಳ ಸಂಖ್ಯೆಗಳು ಶೀಘ್ರ ಗತಿಯಲ್ಲಿ ಹೆಚ್ಚುತ್ತಿವೆ. ಎಲ್ಲರ ನಡುವೆ ಸುಂದರವಾಗಿ ಚಿರ ಯೌವನಿಗಳಂತೆ ಎಂದು ತೋರಿಸಿಕೊಳ್ಳುವ ಬಯಕೆ ತಪ್ಪೇನಲ್ಲ ಹಾಗಂತ ಅದಕ್ಕೆ ಎಲ್ಲಿಲ್ಲದ ಕಸರತ್ತು ನಡೆಸೋದು ಅದಕ್ಕೆಂತಲೇ ಅತಿಯಾದ ಸಮಯ ಹಣ ಬಳಿಸುವದು ಶುದ್ಧ ತಪ್ಪು.

ಜನ ನಮ್ಮ ಬಾಹ್ಯ ಸೌಂದರ್ಯವನ್ನು ಕಂಡು ಮೆಚ್ಚುವುದು ನಿಜವಾದರೂ ಆಂತರಿಕ ಸೌಂದರ್ಯ ಕಂಡು ನಮ್ಮೆಡೆ ಸ್ನೇಹದ ಹಸ್ತ ಚಾಚುವರು ನಮ್ಮೊಂದಿಗೆ ಬೇರೆಯವರು ನಮ್ಮ ಒಡನಾಟದಲ್ಲಿರಲು ಬಯಸುವರು ಎನ್ನುವುದೂ ಅಷ್ಟೇ ದಿಟ. ನಮ್ಮ ವೇಷ ಭೂಷಣದಷ್ಟೇ ಪ್ರಾಮುಖ್ಯತೆ ನಮ್ಮ ನಡೆ ನುಡಿಗೂ ಇದೆ. ನಮ್ಮ ನಡತೆ ಗುಣ ಸ್ವಭಾವ ಇತರರ ಸನ್ನಡತೆಗೆ ಪ್ರಭಾವ ಬೀರುವಂತಿರಬೇಕು. ಜಗತ್ಪ್ರಸಿದ್ಧ ಗ್ರೀಕ್ ತತ್ವ ಜ್ಞಾನಿಯಾದ ಪ್ಲೇಟೋ ಪ್ರಕಾರ ಸೌಂದರ್ಯ ನೋಡುವ ಕಣ್ಣಲ್ಲಿದೆ. ಸೌಂದರ್ಯ ದೃಷ್ಟಿಗೋಚರವಾದುದಲ್ಲ. ಮನೋಹರವಾದುದು ಎಂಬುದನ್ನು ಗಮನಿಸಬೇಕು.

ಆಂತರಿಕ ಸೌಂದರ್ಯಕ್ಕೆ ಎಲ್ಲರ ಗಮನವನ್ನು ನಮ್ಮತ್ತ ಸೆಳೆಯುವ ದಿವ್ಯಶಕ್ತಿಯಿದೆ. ನಮ್ಮ ಕ್ರಿಯೆಗಳು ಪ್ರತಿಕ್ರಿಯೆಗಳು ನಮ್ಮ ಆಲೋಚನೆಗಳನ್ನು ಪ್ರತಿಬಿಂಬಿಸುತ್ತವೆ. ಹೀಗೆ ಸದಾ ಸಕಾರಾತ್ಮಕವಾದ ಚಿಂತನೆ ಒಳಿತು. ಸದ್ಗುಣಗಳನ್ನು ಮೈಗೂಡಿಸಿಕೊಳ್ಳಲು ಪ್ರತಿದಿನವೂ ಪ್ರಯತ್ನಿಸುವುದರಿಂದÀ ಆಂತರಿಕ ಸೌಂದರ್ಯ ವರ್ಧಿಸುತ್ತದೆ. ಆದರೆ ಹೇಳೋದು ಒಂದು ಮಾಡೋದು ಇನ್ನೊಂದಾದರೆ ಜನರು ನಮ್ಮನ್ನು ನಂಬುವುದಿಲ್ಲ. ಆಚಾರ-ವಿಚಾರಗಳಲ್ಲಿ ಮೇಳವಿರಬೇಕು. ನಡೆ ನುಡಿ ಒಂದಾಗಿರಬೇಕು. ಸದಾಚಾರವೆನ್ನುವುದು ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿಯಿದ್ದಂತೆ.

ಹಲ್ಲು ಹೋಗಿ ಬೆನ್ನು ಬಾಗುವ ಮುನ್ನ, ದೇಹ ಸುಕ್ಕುಗಟ್ಟುವ ಮುನ್ನ, ಕೈಗೆ ಕೋಲು ಬರುವ ಮುನ್ನ, ಜಾಗೃತರಾಗಿ ಆಂತರಿಕ ಸೌಂದರ್ಯದಿಂದ ಸಾರ್ಥಕಗೊಳಿಸಿಕೊಳ್ಳುವದೇ ಅತ್ಯುತ್ತಮ ನಡೆ. ಸಿಂಹಾವಲೋಕನದ ಕ್ರಮವನ್ನು ಅನುಸರಿಸುತ್ತ ಭೂತಕಾಲದ ತಪ್ಪುಗಳಿಂದ ಪಾಠ ಕಲಿತು ಭವಿಷ್ಯತ್ತಿನ ಬಗ್ಗೆ ಅತಿಯಾಗಿ ವಿಚಾರಿಸದೇ ವರ್ತಮಾನದಲ್ಲಿ ಜೀವಿಸುವದನ್ನು ರೂಢಿಸಿಕೊಳ್ಳುವದು ಇಂದಿನ ಅನಿವಾರ್ಯ.

ಪ್ರತಿದಿನ ಬೆಳಿಗ್ಗೆ ಒಂದು ನಗು ಅಥವಾ ಮಂದಹಾಸದಿಂದ ಏಳುವ ಹವ್ಯಾಸ ಹೊಂದಿದ್ದರೆ ಆ ದಿ£ದ ಕಾರ್ಯಗಳು ಮತ್ತು ಆಲೋಚನೆಗಳ ಮೇಲೆ ಈ ಸಣ್ಣ ಕಾರ್ಯ ಎಂಥ ಪರಿಣಾಮ ಬೀರುತ್ತದೆಂಬುದು ಆಶ್ಚರ್ಯಕರ. ಚಿನ್ನದಿಂದ ಯಾವುದೇ ಆಭರಣಗಳನ್ನು ಮಾಡಬೇಕಾದರೆ ಅದನ್ನು ಬಿಸಿ ಮಾಡಿ ಕಾಯಿಸಿ ಹೊಡೆದು ಬೇಕಾದ ಆಕೃತಿಗೆ ತರಬೇಕಾಗುತ್ತದೆ. ಉಕ್ಕು ಉತ್ಕøಷ್ಟವೆನಿಸಿಕೊಳ್ಳ ಬೇಕಾದರೆ ಅದು ಗರಿಷ್ಠ ಮಟ್ಟದ ಶಾಖದ ಜ್ವಾಲೆಯಲ್ಲಿ ಹಾಯ್ದು ಬರಬೇಕು ಎಂದು ರಿಚರ್ಡ್ ನಿಕ್ಸನ್ ಸಮಂಜಸವಾಗಿಯೇ ಹೇಳಿದ್ದಾರೆ.
ಅಷ್ಟೇ ಏಕೆ ನಾವು ದಿನ ನಿತ್ಯ ಬಳಿಸುವ ಕಾಳು ಕಡಿಗಳನ್ನು ಅಕ್ಕಿ ಬೇಳೆಗಳನ್ನು ಅವುಗಳ ಮೂಲ ರೂಪದಲ್ಲಿ ಬಳಸಲು ಸಾಧ್ಯವಿಲ್ಲ. ಅವುಗಳನ್ನು ಶುಚಿಗೊಳಿಸಿ ಬೇಯಿಸಿ ಉಪಯೋಗಿಸಿದರೆ ಆರೋಗ್ಯಕ್ಕೆ ಒಳಿತು.ಹಾಗೆಯೇ ನಮ್ಮ ನಡೆ-ನುಡಿಗಳನ್ನು ಸದ್ವಿಚಾರ ಹೊಂದಿದ ಪುಸ್ತಕ ಮತ್ತು ಸಜ್ಜನರ ಕುಲುಮೆಯಲ್ಲಿ ಕಾಯಿಸಿ ಬೇಯಿಸಿದಾಗ ಆಂತರಿಕ ಮನಸ್ಸು ಸೌಂದರ್ಯದಿಂದ ಮಿರಿಮಿರಿ ಮಿಂಚುತ್ತದೆ.

ಜೀವನವು ಸಾಕಷ್ಟಿಲ್ಲದ ಆವರಣದಿಂದ ಸಾಕಾದಷ್ಟು ತೀರ್ಮಾನಗಳನ್ನು ಮಾಡುವ ಒಂದು ಕಲೆ. ಜೀವನವು ಜೇಡನ ಬಲೆ ಇದ್ದಂತೆ. ಆಂತರಿಕ ಸೌಂದರ್ಯ ಅದರ ಮೂಲಕ ಹಾದು ಹೋಗುತ್ತದೆ. ಆದರೆ ಬಾಹ್ಯ ಸೌಂದರ್ಯ ಕಾಲಕ್ಕೆ ಸೀಮಿತವಾಗಿ ಅದರಲ್ಲಿ ಸಿಕ್ಕಿಹಾಕಿಕೊಳ್ಳುತ್ತದೆ. ಗುರುಹಿರಿಯರ, ಆತ್ಮೀಯರ, ಹಿತೈಷಿಗಳ ಮಾತುಗಳನ್ನು ಕೇಳುವುದನ್ನು ಕಲಿಯಿರಿ ಅವಕಾಶಗಳು ಹಲವುಬಾರಿ ಬಹು ಮೃದುವಾಗಿ ಬಾಗಿಲನ್ನು ತಟ್ಟುತ್ತವೆ. ನಿಮ್ಮನ್ನು ಪ್ರಗತಿಯತ್ತ ಕೊಂಡೊಯ್ಯುತ್ತವೆ. ಅನಿರೀಕ್ಷಿತಗಳಿಗೆ ಅವಕಾಶ ಕೊಡಿ. ಅಧಿಕಾರ, ಹಣ, ತೊಳ್ಬಲದ ಪ್ರಬಾವ ಬಳಸಿ ಕೆಲಸ ಮಾಡಿಸಿಕೊಳ್ಳಲು ನೋಡಬೇಡಿ. ಪ್ರಭಾವ ಎನ್ನುವುದು ಉಳಿತಾಯ ಖಾತೆ ಇದ್ದಂತೆ. ಅದನ್ನು ಕಡಿಮೆ ಉಪಯೋಗಿದಷ್ಟು ಅದರ ಉಪಯೋಗ ಜಾಸ್ತಿ. ಅವಮಾನ ಮತ್ತು ಮಾತ್ರೆಗಳನ್ನು ನುಂಗಬೇಡಿ. ಒಂದು ಸಾವಿರ ಯುದ್ದಗಳನ್ನು ಗೆಲ್ಲುವುದಕ್ಕಿಂತ ನಿಮ್ಮನ್ನು ನೀವು ಗೆಲ್ಲುವುದು ಒಳ್ಳೆಯದು.

ಆಂತರಿಕ ಸೌಂದರ್ಯವೂ ಕೂಡ. ನೀವು ಕುಂಟರಾಗಿರುವವರೊಡನೆ ವಾಸಿಸುತ್ತಿದ್ದರೆ ನೀವೂ ಸಹ ಕುಂಟುತ್ತೀರಿ. ನಮ್ಮ ನಾಲಿಗೆಗಳನ್ನು ಎಷ್ಟು ಚುರುಕಾಗಿ ಚಾಲನೆ ಮಾಡುತ್ತೇವೆಯೋ ಅಷ್ಟೇ ಚುರುಕಾಗಿ ನಮ್ಮ ಒಳ ಮನಸ್ಸನ್ನು ಚಾಲನೆ ಮಾಡಿದರೆ ಎಂಥಹ ಆಶ್ಚರ್ಯಗಳನ್ನೂ ಸಾಧಿಸಬಹುದು. ಆಂತರಿಕ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದೇ ಸೌಂದರ್ಯದಿಂದ ಜೀವನ ಸಾರ್ಥಕವಾಗಿಸಿಕೊಳ್ಳಬಹುದು.

– ಜಯಶ್ರೀ ಜೆ.ಅಬ್ಬಿಗೇರಿ

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin