ಲೋಕಸಭೆಯಲ್ಲಿ ಖರ್ಗೆ – ಅನಂತ್ ಜಟಾಪಟಿ

ಈ ಸುದ್ದಿಯನ್ನು ಶೇರ್ ಮಾಡಿ

Kharge-vs-Anantkumar

ನವದೆಹಲಿ, ಏ.10- ದಕ್ಷಿಣ ಭಾರತದ ಜನರು ಕಪ್ಪು ವರ್ಣೀಯರು ಎಂಬ ಬಿಜೆಪಿ ಸಂಸದ ತರುಣ್ ವಿಜಯ್‍ರ ವಿವಾದಾತ್ಮಕ ಹೇಳಿಕೆ ಲೋಕಸಭೆಯಲ್ಲಿಂದು ಪ್ರತಿಧ್ವನಿಸಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು. ಶೂನ್ಯವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಖರ್ಗೆ, ತರುಣ್ ವಿಜಯ್ ದಕ್ಷಿಣ ಭಾರತದ ಭಾರತೀಯರು ಕಪ್ಪು ವರ್ಣೀಯರು ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ನಾವು ಕಪ್ಪಾದರೂ ಭಾರತೀಯರಲ್ಲವೆ ಎಂದು ಪ್ರಶ್ನಿಸಿದರು. ತರುಣ್ ವಿಜಯ್ ಅವರ ಹೇಳಿಕೆ, ದೇಶವನ್ನು ವಿಭಜನೆ ಮಾಡುವಂತಹ ಪ್ರಚೋದನಾಕಾರಿ ಹೇಳಿಕೆಯಾಗಿದೆ. ನಿಮಗೆ ವಿಭಜನೆ ಆಗಬೇಕಾ ಎಂದು ಬಿಜೆಪಿ ಸಂಸದರತ್ತ ತಿರುಗಿ ಪ್ರಶ್ನಿಸಿದರು. ಈ ವಿಷಯದ ಬಗ್ಗೆ ಸದನದಲ್ಲಿ ಮತ್ತು ಸಂಸತ್‍ನ ಹೊರಗೆ ಪ್ರತಿಭಟನೆ ಮುಂದುವರಿಸುವುದಾಗಿ ಖರ್ಗೆ ಹೇಳಿದರು.

ಮಧ್ಯದಲ್ಲಿ ಎದ್ದುನಿಂತು ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್, ತರುಣ್ ವಿಜಯ್ ಉದ್ದೇಶಪೂರ್ವಕವಾಗಿ ಈ ಹೇಳಿಕೆ ನೀಡಿಲ್ಲ. ಅಚಾತುರ್ಯದಿಂದ ಈ ಮಾತು ಹೊರಬಿದ್ದಿದೆ ಎಂದು ಹೇಳಿದಾಗ, ಅದಕ್ಕೆ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.

ನಾನು ಕೂಡ ದಕ್ಷಿಣ ಭಾರತದವನು. ಬಿಜೆಪಿಗೆ ದೇಶದ ಎಲ್ಲ ಜನರ ಬಗ್ಗೆ ಮತ್ತು ಎಲ್ಲ ವರ್ಣೀಯರ ಬಗ್ಗೆ ಅಪಾರ ಗೌರವವಿದೆ ಎಂದು ಈ ವಿವಾದವನ್ನು ತಿಳಿಗೊಳಿಸಲು ಯತ್ನಿಸಿದರು. ಇದಕ್ಕೂ ಮುನ್ನ ಪ್ರಶ್ನೋತ್ತರ ವೇಳೆಯಲ್ಲಿ ದಕ್ಷಿಣ ಭಾರತದ ಕಾಂಗ್ರೆಸ್ ಸದಸ್ಯರು ತರುಣ್ ವಿಜಯ್ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಕಾರಣ ಸಭಾಧ್ಯಕ್ಷೆ ಸುಮಿತ್ರ ಮಹಾಜನ್ ಸದನವನ್ನು ಕೆಲಕಾಲ ಮುಂದೂಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin