ಲೋಕಾಯುಕ್ತಕ್ಕೆ ಶಾಸಕರ ಆಸ್ತಿ ವಿವರ ಸಲ್ಲಿಸಲು ಜೂನ್ 30 ಕೊನೆ ದಿನ

ಈ ಸುದ್ದಿಯನ್ನು ಶೇರ್ ಮಾಡಿ

MLA-assets

ಬೆಂಗಳೂರು, ಏ.25-ರಾಜ್ಯ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸದಸ್ಯರು ಜೂನ್ 30ರೊಳಗೆ 2016-17ನೆ ಸಾಲಿನ ತಮ್ಮ ಆಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದೆ. ಉಭಯ ಸದನಗಳ ಸದಸ್ಯರು ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಜೂ.30ರೊಳಗೆ ಲೋಕಾಯುಕ್ತಕ್ಕೆ ಸಲ್ಲಿಸಲು ಗಡುವು ನೀಡಲಾಗಿದೆ. ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಕಲಂ 22ರಡಿಯಲ್ಲಿ ಆಸ್ತಿ ಮತ್ತು ದಾಯಿತ್ವದ ಪಟ್ಟಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕಾಗಿದೆ. ಈ ಕಾಯ್ದೆಯ ಕಲಂ 7ರ ಉಪಕಲಂ(1)ರಲ್ಲಿ ಉಲ್ಲೇಖಿಸಿರುವಂತೆ ಸರ್ಕಾರಿ ನೌಕರರಲ್ಲದ ಪ್ರತಿಯೊಬ್ಬ ಸಾರ್ವಜನಿಕ ನೌಕರನೂ ತನ್ನ ಮತ್ತು ತನ್ನ ಕುಟುಂಬದ ಸದಸ್ಯರ ಆಸ್ತಿ ಮತ್ತು ದಾಯಿತ್ವಗಳ ಪಟ್ಟಿಯನ್ನು ಸಲ್ಲಿಸಬೇಕಾಗಿದೆ.


ನಿಗದಿತ ನಮೂನೆಯಲ್ಲಿ ಅಸ್ತಿ ವಿವರಗಳನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದ್ದು, ಎಲ್ಲಾ ಶಾಸಕರು 2016-17ನೆ ಸಾಲಿನ ಆಸ್ತಿ ವಿವರಗಳನ್ನು ನಿಗದಿತ ನಮೂನೆಯ ಪ್ರತಿ ಪುಟಕ್ಕೂ ಸಹಿ ಮಾಡಿ ಲೋಕಾಯುಕ್ತಕ್ಕೆ ಸಲ್ಲಿಸಬೇಕಾಗಿದೆ. ಈ ಸಂಬಂಧ ತುರ್ತು ಮಾಹಿತಿ ನೀಡುವಂತೆ ಲೋಕಾಯುಕ್ತ ನಿಬಂಧಕರು ಕರ್ನಾಟಕ ವಿಧಾನಸಭೆ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಪತ್ರದ ಹಿನ್ನೆಲೆಯಲ್ಲಿ ವಿಧಾನಸಭೆಯ ಉಸ್ತುವಾರಿ ಕಾರ್ಯದರ್ಶಿ ಎಸ್.ಮೂರ್ತಿ ಎಲ್ಲಾ ಶಾಸಕರಿಗೆ ಮಾಹಿತಿ ನೀಡಿ ನಿಗದಿತ ಅವಧಿಯೊಳಗೆ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಆಸ್ತಿ ವಿವರ ಸಲ್ಲಿಸುವಂತೆ ಕೋರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin