ಲೋಕಾಯುಕ್ತವನ್ನು ಜಾರಿಗೆ ತಂದಿದ್ದೇ ನಾವು, ನಿರ್ನಾಮ ಮಾಡಿದ್ದು ಕಾಂಗ್ರೆಸ್‍ನವರು : ಗೌಡರು

ಈ ಸುದ್ದಿಯನ್ನು ಶೇರ್ ಮಾಡಿ

Devegowda--01

ಹಾಸನ, ಏ.28-ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತವನ್ನು ಜಾರಿಗೆ ತಂದಿದ್ದೇ ನಾವು. ಅದೇ ಲೋಕಾಯುಕ್ತವನ್ನು ನಿರ್ನಾಮ ಮಾಡಿದವರು ಕಾಂಗ್ರೆಸ್‍ನವರು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಇಂದಿಲ್ಲಿ ಗುಡುಗಿದರು. ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜನರ ವಿರೋಧ ತಪ್ಪಿಸಿಕೊಳ್ಳಲು ಲೋಕಾಯುಕ್ತವನ್ನು ಬಲಗೊಳಿಸುವ ಭರವಸೆ ನೀಡುತ್ತಿದ್ದಾರೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಾದೇಶಿಕ ಪಕ್ಷವನ್ನು ತುಳಿಯಲು ಹವಣಿಸುತ್ತಿದೆ. ಕೀಳುಮಟ್ಟದ ರಾಜಕೀಯ ಮಾಡುತ್ತಿದೆ. ಕುಮಾರಸ್ವಾಮಿ ಅವರ ಏಳಿಗೆ ಕಂಡು ಬಿಜೆಪಿ, ಜೆಡಿಎಸ್ ಜೊತೆ ಮೃದು ಧೋರಣೆ ತಾಳುತ್ತಿದೆ ಎಂದು ಹೇಳುತ್ತಿದೆ ಎಂದು ಗೌಡರು ತಿಳಿಸಿದರು. ಗೌರಿಬಿದನೂರಿನಲ್ಲಿ ಜೆಡಿಎಸ್ ಕಾರ್ಯಕರ್ತನ ಕೊಲೆಯಾದ ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಅವರು, ಇದೊಂದು ಹೇಯ ಕೃತ್ಯ. ಈ ಘಟನೆಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ಹೇಳಿದ್ದೇನೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಈ ಘಟನೆ ಸಾಕ್ಷಿ ಎಂದು ಆರೋಪಿಸಿದರು.

ಪಕ್ಷದ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ರಾಜ್ಯದ 40 ಕಡೆ ಚುನಾವಣಾ ಪ್ರಚಾರ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ರಾಜ್ಯ ಪ್ರವಾಸಕ್ಕೆ ನಾನೂ ಹೋಗುತ್ತೇನೆ. ಜಿಲ್ಲೆಯ ರಾಜಕೀಯ ಬೆಳವಣಿಗೆಗಳ ಬಗ್ಗೆ ನನಗೆ ಅರಿವಿದೆ. ಬಿಎಸ್‍ಪಿ ನಾಯಕರಾದ ಮಾಯಾವತಿ ಅವರು ಮೇ 5 ಮತ್ತು 6 ರಂದು ರಾಜ್ಯಕ್ಕೆ ಆಗಮಿಸಲಿದ್ದಾರೆ. ಈಗಾಗಲೇ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್‍ರಾವ್, ಒವೈಸಿ ನಾಯಕರ ಜೊತೆ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದರು.

ಎರಡೂ ರಾಷ್ಟ್ರೀಯ ಪಕ್ಷಗಳು ಆರೋಪಗಳ ಪಟ್ಟಿ ಬಿಡುಗಡೆ ಮಾಡಿವೆ. ಆದರೆ ನಮ್ಮ ವಿರುದ್ಧ ಯಾವ ಪಟ್ಟಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ರಾಜ್ಯದಲ್ಲಿ ಗುಪ್ತದಳ ಚುರುಕಾಗಿದ್ದು, ಅವರ ವರದಿಯನ್ವಯ ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂ ಕಡೆ ಸ್ಪರ್ಧಿಸುತ್ತಿರಬಹುದು. ಇದರ ಅರ್ಥ ಚಾಮುಂಡೇಶ್ವರಿಯಲ್ಲಿ ಅವರ ಬಲವಿಲ್ಲ ಎಂದಲ್ಲವೆ ಎಂದು ಪ್ರಶ್ನಿಸಿದರು. ಜಮೀರ್ ಅಹಮ್ಮದ್ ಬಗ್ಗೆ ಮಾತನಾಡಿದರೆ ಅದು ಉಚಿತವಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಕೆ.ಆರ್.ನಗರದಲ್ಲಿ ಸೊಸೆ ಭವಾನಿ ಅವರ ಹೇಳಿಕೆ ಹಿಂದೆ ಕಾಣದ ಕೈಗಳ ಸಂಚು ಅಡಗಿದಂತಿದೆ ಎಂದು ಆರೋಪಿಸಿದ ಅವರು, ವ್ಯಕ್ತಿಯ ತೇಜೋವಧೆ ಮಾಡುವುದು ಸರಿಯಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಜೆಡಿಎಸ್ ಮುಗಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ಮುಸ್ಲಿಂರನ್ನು ದತ್ತು ತೆಗೆದುಕೊಂಡಿದ್ದಾರೆಯೇ? ಈಗಾಗಲೇ ಭಾಗ್ಯಗಳ ಸರಮಾಲೆ ಸುರಿಸಿದ್ದಾರೆ. ಇಂತಹ ಪ್ರಣಾಳಿಕೆ ಎಷ್ಟು ನೋಡಿಲ್ಲ. ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದ ವರ್ಚಸ್ಸು ಈಗ ಇಲ್ಲ. ಈ ಚುನಾವಣೆಯಲ್ಲಿ ಜನರೇ ತೀರ್ಮಾನಿಸಲಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಸಿದ್ದರಾಮಯ್ಯನವರು ದೇವೇಗೌಡರ ಕುಟುಂಬ ಮುಗಿಸಲು ಕಾಂಗ್ರೆಸ್ ಅಭ್ಯರ್ಥಿ ಮೂಲಕ ಕರೆ ನೀಡಿದ್ದಾರೆ. ಇಂತಹ ಕೀಳು ರಾಜಕೀಯ ಬೇಡ. ಅವರ ಮಗ ಕಾಲವಾದಾಗ ಸ್ವತಃ ನಾನೇ ಭೇಟಿ ನೀಡಿದ್ದೆ ಎಂದರು.

Facebook Comments

Sri Raghav

Admin