ವಕೀಲ ಅಮಿತ್‍ನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದು ಶೃತಿ ಪತಿ ರಾಜೇಶ್ : 4 ದಿನ ಪೊಲೀಸ್ ವಶಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Amith-Shruthi-Murder-Love

ಬೆಂಗಳೂರು, ಜ.15– ವಕೀಲ ಅಮಿತ್‍ನನ್ನು ಗುಂಡಿಟ್ಟು ಕೊಲೆ ಮಾಡಿದ ಪ್ರಕರಣದಲ್ಲಿ ಆರೋಪಿ ರಾಜೇಶ್‍ನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ.
ಪ್ರಕರಣದಲ್ಲಿ ಬಂಧಿತರಾಗಿರುವ ಅಪ್ಪ ಗೋಪಾಲಕೃಷ್ಣ ಹಾಗೂ ಮಗ ರಾಜೇಶ್‍ನನ್ನು ನಿನ್ನೆ ತಡರಾತ್ರಿ ಸೋಲದೇವನಹಳ್ಳಿ ಠಾಣೆ ಪೊಲೀಸರು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದರು.
ಈ ವೇಳೆ ಹೆಚ್ಚಿನ ತನಿಖೆ ಅಗತ್ಯವಿರುವ ಹಿನ್ನೆಲೆಯಲ್ಲಿ ರಾಜೇಶ್‍ನನ್ನು ನಾಲ್ಕು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದ್ದಾರೆ. ಗೋಪಾಲಕೃಷ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಸೋಲದೇವನಹಳ್ಳಿ ಸಮೀಪದ ಆಚಾರ್ಯ ಎಂಜಿನಿಯರಿಂಗ್ ಕಾಲೇಜು ಬಳಿ ವಕೀಲ ಅಮಿತ್ ಜತೆ ಪತ್ನಿ ಶೃತಿ ಇರುವುದನ್ನು ಕಂಡ ಪತಿ ರಾಜೇಶ್ ವಕೀಲನಿಗೆ ಗುಂಡಿಟ್ಟು ಹತ್ಯೆ ಮಾಡಿದ್ದರು.

ಗುಂಡು ತಗುಲಿ ಗಾಯಗೊಂಡ ಅಮಿತ್‍ನನ್ನು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ ಪಿಡಿಒ ಶೃತಿಗೌಡ ಅವರು ಸಮೀಪದ ಲಾಡ್ಜ್‍ಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಘಟನೆ ನಂತರ ರಾಜೇಶ್ ಮತ್ತು ಅವರ ತಂದೆ ಗೋಪಾಲಕೃಷ್ಣ ಪೊಲೀಸರಿಗೆ ಶರಣಾಗಿ ವಕೀಲ ಅಮಿತ್‍ಗೆ ಗುಂಡು ಹಾರಿಸಿದ್ದು ತಾನೆ ಎಂದು ಹೇಳಿ ಗೊಂದಲ ಸೃಷ್ಟಿಸಿದ್ದರು. ತಂದೆ ಮಗನನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಿದ ಪೊಲೀಸರಿಗೆ ಗುಂಡು ಹಾರಿಸಿದ್ದು, ಪಿಡಿಒ ಶೃತಿಗೌಡ ಅವರ ಪತಿ ರಾಜೇಶ್ ಎಂಬುದು ಖಚಿತವಾಗಿತ್ತು.

ಅಮಿತ್ ಮೃತದೇಹ ಹಸ್ತಾಂತರ :

ಹತ್ಯೆಯಾದ ವಕೀಲ ಅಮಿತ್ ಅವರ ಮೃತದೇಹವನ್ನು ಪೊಲೀಸರು ಇಂದು ಕುಟುಂಬಸ್ಥರಿಗೆ ಹಸ್ತಾಂತರಿಸಿದರು. ಸಪ್ತಗಿರಿ ಆಸ್ಪತ್ರೆಯಲ್ಲಿ ನಿನ್ನೆ ಮರಣೋತ್ತರ ಪರೀಕ್ಷೆ ನಡೆದಿತ್ತು. ಆದರೆ, ಸಂಬಂಧಿಗಳು ವಿದೇಶದಿಂದ ಬರಬೇಕಾಗಿದ್ದ ಕಾರಣ ಅವರ ಶವವನ್ನು ಆಸ್ಪತ್ರೆಯಲ್ಲೇ ಇಡಲಾಗಿತ್ತು. ಮೃತದೇಹವನ್ನು ಪಡೆದ ಕುಟುಂಬಸ್ಥರು ಹೆಸರಘಟ್ಟದ ಎಂಇಐ ಲೇಔಟ್‍ನಲ್ಲಿರುವ ಅಮಿತ್ ಅವರ ಮನೆ ಬಳಿ ಅಂತಿಮ ದರ್ಶನಕ್ಕೆ ಇಟ್ಟು ನಂತರ ಹುಟ್ಟೂರು ನೆಲಮಂಗಲದ ಜಕ್ಕನಹಳ್ಳಿ ಬಳಿಯ ಕೆಆರ್ ಪಾಳ್ಯದಲ್ಲಿ ಅಂತ್ಯಕ್ರಿಯೆ ನಡೆಸಿದರು. ಸಂಸದ ವೀರಪ್ಪಮೊಯ್ಲಿ, ಆದಿಚುಂಚನಗಿರಿ ಮಠಾಧೀಶರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು, ವಕೀಲರು ಮೃತ ಅಮಿತ್ ಅವರ ನಿವಾಸಕ್ಕೆ ತೆರಳಿ ಅಂತಿಮ ನಮನ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin