ವರಮಹಾಲಕ್ಷ್ಮಿ ಹಬ್ಬದ ಎಫೆಕ್ಟ್ : ಗಬ್ಬೆದ್ದು ನಾರುತ್ತಿದೆ ಬೆಂಗಳೂರು

ಈ ಸುದ್ದಿಯನ್ನು ಶೇರ್ ಮಾಡಿ

Bengaluru

ಬೆಂಗಳೂರು, ಆ.13-ನಿನ್ನೆ ರಾಜ್ಯಾದ್ಯಂತ ವರಮಹಾಲಕ್ಷ್ಮಿ ವ್ರತವನ್ನು ಸಂಭ್ರಮದಿಂದ ಆಚರಿಸಲಾಯಿತು. ನಮ್ಮ ಉದ್ಯಾನನಗರಿಯಲ್ಲೂ ಸಂಭ್ರಮಕ್ಕೇನೂ ಕಡಿಮೆಯಿರಲಿಲ್ಲ. ಆದರೆ ಹಬ್ಬಕ್ಕಾಗಿ ಮಾರಲು ತಂದಿದ್ದ ಬಾಳೆಕಂದು, ಮಾವಿನ ಸೊಪ್ಪು, ಕೊಳೆತ ಹಣ್ಣು ಹೂ-ಹಣ್ಣು ರಾಶಿ ರಾಶಿ ಬಿದ್ದಿವೆ. ನಿನ್ನೆ ಹಬ್ಬದ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆ, ಮಾರುಕಟ್ಟೆಗಳಲ್ಲಿ ವ್ಯಾಪಾರಕ್ಕಾಗಿ ಬೇರೆಡೆಯಿಂದ ಬಂದ ವ್ಯಾಪಾರಸ್ಥರು ತಂದಿದ್ದ ಬಾಳೆಕಂದು, ಮಾವಿನ ಸೊಪ್ಪು ಸಂಜೆಯವರೆಗೂ ಮಾರಾಟ ಮಾಡಿ ಜೇಬು ತುಂಬಿಸಿಕೊಂಡು,ಉಳಿದ ತ್ಯಾಜ್ಯಗಳನ್ನೆಲ್ಲಾ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.  ಇದರಿಂದ ಎಲ್ಲಿ ನೋಡಿದರೂ ತ್ಯಾಜ್ಯ ರಾಶಿಗಳೇ ಗೋಚರಿಸುತ್ತಿದ್ದು, ನಗರದ ಸೌಂದರ್ಯಕ್ಕೆ ಕುಂದುಂಟು ಮಾಡುತ್ತಿರುವುದಲ್ಲದೆ, ಜಿಟಿ ಜಿಟಿ ಮಳೆಯಿಂದ ತ್ಯಾಜ್ಯವೆಲ್ಲ ಕೊಳೆತು ಗಬ್ಬು ನಾರುತ್ತಿದೆ. ಇದರಿಂದ ಪಾದಚಾರಿಗಳಿಗೆ ತೀವ್ರ ಕಿರಿ ಕಿರಿ ಉಂಟಾಗಿದೆ.

ಬೀಡಾಡಿ ದನಗಳ ಹಾವಳಿ:

ಬಾಳೆ ಕಂದು, ಮಾವಿನ ಸೊಪ್ಪು ತಿನ್ನಲು ಜಾನುವಾರುಗಳು ಮಾರುಕಟ್ಟೆ ಸುತ್ತಮುತ್ತ ಅಡ್ಡಾಡುತ್ತಿದ್ದು, ಇದರಿಂದ ವಾಹನ ಸವಾರರು, ಪಾದಚಾರಿಗಳಿಗೆ ತುಂಬಾ ಅನುಭವಿಸುವಂತಾಗಿದೆ.  ನಗರದ ಪ್ರಮುಖ ಕಡೆ ಇಂದು ಬೆಳಗ್ಗೆಯೇ ಬಿಬಿಎಂಪಿ ಪೌರಕಾರ್ಮಿಕರು ಹಬ್ಬದ ತ್ಯಾಜ್ಯವನ್ನು ವಿಲೇವಾರಿ ಮಾಡುತ್ತಿರುವ ದೃಶ್ಯ ಕಂಡು ಬಂತು. ಇನ್ನೂ ಎರಡು ದಿನ ವಿಲೇವಾರಿ ಮಾಡಿದರೂ ಕಸದ ರಾಶಿ ಮಾತ್ರ ಖಾಲಿಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಅಷ್ಟರ ಮಟ್ಟಿಗೆ ತ್ಯಾಜ್ಯದ ರಾಶಿ ಬಿದ್ದಿವೆ. ಮುಂದಿನ ದಿನಗಳಲ್ಲಿ ಬರುವ ಸಾಲು ಸಾಲು ಹಬ್ಬಗಳಿಗೆ ವ್ಯಾಪಾರಸ್ಥರು ತಮ್ಮ ವಹಿವಾಟು ಮುಗಿದ ನಂತರ ಉಳಿದ ವಸ್ತುಗಳನ್ನು ವಾಪಸ್ ಕೊಂಡೊಯ್ದರೆ ತ್ಯಾಜ್ಯದ ಸಮಸ್ಯೆ ಕಾಡುವುದಿಲ್ಲ ಎಂದು ಪ್ರಜ್ಞಾವಂತ ನಾಗರಿಕರು ಅಭಿಪ್ರಾಯಪಟ್ಟಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin