ವರಮಹಾಲಕ್ಷ್ಮಿ ಹಬ್ಬ : ಬೆಂಗಳೂರಲ್ಲಿ ಹೂವು, ಹಣ್ಣು ವ್ಯಾಪಾರ ಜೋರು

ಈ ಸುದ್ದಿಯನ್ನು ಶೇರ್ ಮಾಡಿ

Bangalore

ಬೆಂಗಳೂರು, ಆ.11- ನಾಳೆ ವರಮಹಾಲಕ್ಷ್ಮಿ ಹಬ್ಬ. ಎಲ್ಲರೂ ಲಕ್ಷ್ಮಿಯನ್ನು ಬರಮಾಡಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೂವು, ಹಣ್ಣು ವ್ಯಾಪಾರ ಭರದಿಂದಲೇ ಸಾಗಿದೆ.  ನಗರ ಮತ್ತು ಪಟ್ಟಣಗಳಲ್ಲಿ ಯಾವ ಕಡೆ ನೋಡಿದರೂ ಹೂಗಳ ರಾಶಿ , ಬಾಳೆ ಕಂದು ಕಂಗೊಳಿಸುತ್ತಿದ್ದು, ಗ್ರಾಹಕರು ತಮಗಿಷ್ಟವಾದ ವಸ್ತುಗಳನ್ನು ಕೊಳ್ಳುತ್ತಿದ್ದಾರೆ.  ಇದೊಂದು ಆಡಂಬರದ ಹಬ್ಬವೆಂದರೆ ತಪ್ಪಾಗಲಾರದು. ನಾವು ಯಾರಿಗಿಂತ ಕಮ್ಮಿ ಇಲ್ಲ ಎಂದು ಎಲ್ಲರೂ ಬೆಲೆ ಏರಿಕೆಯ ನಡುವೆಯೂ ಭರದ ಸಿದ್ಧತೆಯಲ್ಲಿ ತೊಡಗಿದ್ದಾರೆ.  ಹೂವಿನ ವ್ಯಾಪಾರ ಈ ಬಾರಿ ಜೋರಾಗಿಯೇ ನಡೆಯುತ್ತಿದೆ. ಆದರೆ ಬೆಲೆಯಲ್ಲೇನೂ ಅಷ್ಟೊಂದು ದುಬಾರಿ ಕಾಣುತ್ತಿಲ್ಲ. ಚಿಲ್ಲರೆ ದರದಲ್ಲೂ ಸಹ ಬಿಡಿ ಹೂಗಳು ಲಭ್ಯವಾಗುತ್ತಿವೆ. ಇನ್ನು ಲಕ್ಷ್ಮಿಗೆ ಪ್ರಿಯವಾದ ತಾವರೆ, ದವನ, ಮರುಗ, ಕನಕಾಂಬರ ಹೂಗಳಿಗೆ ಮಾಮೂಲಿಯಂತೆ ಬೇಡಿಕೆ ಇದೆ.

ಹೇಳಿಕೊಳ್ಳುವಷ್ಟು ತೀರಾ ಹೊರೆ ಇಲ್ಲದೆ ದೊರೆಯುತ್ತಿದೆ. ತಾವರೆ, ಜೋಡಿಗೆ 40 ರಿಂದ 50 ರೂ., ಮಳ್ಳೆ ಹೂ ಕೆ.ಜಿ.ಗೆ 300 ರಿಂದ 350 ರೂ. ಮಾರಾಟವಾಗುತ್ತಿದೆ. ಆದರೆ ಕನಕಾಂಬರ ಬೆಲೆ ಮಾತ್ರ ಅಂಬರ ತಲುಪಿದೆ. ಕೆ.ಜಿ.ಗೆ 1,500 ರೂ. 2000 ರೂ. ದಾಟಿದೆ. ಕನಕಾಂಬರ ಹೂವಿನ ಬೆಲೆ ಮಾತ್ರ ಹೆಚ್ಚಳವಾಗಿದ್ದು, ಎಲ್ಲಾ ರೀತಿಯ ಹೂಗಳ ಬೆಲೆ ಗ್ರಾಹಕರ ಕೈಗೆಟಕವಂತಿದೆ.
ಬಾಳೆಹಣ್ಣು ಕೆ.ಜಿ.ಗೆ 80 ರಿಂದ 100 ರೂ.ಗೆ ಮಾರಾಟವಾಗುತ್ತಿದೆ. ಚಿಲ್ಲರೆ ದರದಲ್ಲಿ ಸೇವಂತಿಗೆ, ಬಟನ್ಸ್, ಗುಲಾಬಿ, ಮಲ್ಲಿಗೆ ಹೂವುಗಳು ಕೆ.ಜಿ.ಗೆ 300 ರಿಂದ 350 ರೂ.ಗೆ ಮಾರಾಟವಾಗುತ್ತಿವೆ. ಇನ್ನು ಬಾಳೆ ಕಂದು ಗಾತ್ರಕ್ಕೆ ತಕ್ಕಂತೆ 20 ರೂ.ನಿಂದ ಪ್ರಾರಂಭವಾಗಿ ಮಾರಾಟವಾಗುತ್ತಿದೆ.

ಗ್ರಾಹಕರ ಅನುಕೂಲ ಹಾಗೂ ಹಬ್ಬದ ಹಿನ್ನೆಲೆಯಲ್ಲಿ ಹಾಪ್‍ಕಾಮ್ಸ್ ವತಿಯಿಂದ ರಿಯಾಯಿತಿ ದರದಲ್ಲಿ ಹಣ್ಣುಗಳ ಮಾರಾಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.   ಇನ್ನು ಹಣ್ಣುಗಳ ವಿಚಾರಕ್ಕೆ ಬಂದರೆ ಸೇಬು ಕೆ.ಜಿ.ಗೆ 150 ರೂ.ನಿಂದ 200ರೂ., ಬಾಳೆಹಣ್ಣು 100 ರಿಂದ 120 ರೂ., ದಾಳಿಂಬೆ ಕೆ.ಜಿ.ಗೆ 150 ರೂ., ಮೂಸಂಬಿ ಕೆ.ಜಿ.ಗೆ 150 ರಿಂದ 170 ರೂ.ಗೆ ಮಾರಾಟವಾಗುತ್ತಿದೆ.
ಒಟ್ಟಿನಲ್ಲಿ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಹೂಗಳ ಬೆಲೆಯಲ್ಲಿ ಹೇಳಿಕೊಳ್ಳುವಷ್ಟು ಏರಿಕೆ ಯಾಗದಿದ್ದರೂ ಗ್ರಾಹಕರಿಗೆ ಕೈಗೆಟಕುವಂತಿದೆ. ಇನ್ನು ಬಟ್ಟೆ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆದಿದೆ. ಮನೆಯಲ್ಲಿ ಪ್ರತಿಷ್ಠಾಪಿಸುವ ಲಕ್ಷ್ಮಿಗೆ ಸೀರೆ ಉಡಿಸಲು ಗ್ರಾಹಕರಿಗೆ ತಮ್ಮ ಬಜೆಟ್‍ಗೆ ತಕ್ಕಂತೆ ಸೀರೆ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿತ್ತು.

► Follow us on –  Facebook / Twitter  / Google+

Facebook Comments

Sri Raghav

Admin