ವರುಣಾದಲ್ಲಿ ಯಡಿಯೂರಪ್ಪ ಪುತ್ರ ವಿಜಯೇಂದ್ರ ಸ್ಪರ್ಧೆಗೆ ಹೈಕಮಾಂಡ್ ಬ್ರೇಕ್

ಈ ಸುದ್ದಿಯನ್ನು ಶೇರ್ ಮಾಡಿ

Vijayendra--01

ಮೈಸೂರು,ಏ.23-ಜಿದ್ದಾಜಿದ್ದಿನ ಕಾಳಗಕ್ಕೆ ಸಾಕ್ಷಿಯಾಗಬೇಕಿದ್ದ ಮೈಸೂರಿನ ವರುಣಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರಗೆ ಟಿಕೆಟ್ ನೀಡಲು ಹೈಕಮಾಂಡ್ ನಿರಾಕರಿಸಿದೆ. ವರುಣಾ ಕ್ಷೇತ್ರದಿಂದ ಜಿಲ್ಲಾ ಪಂಚಾಯ್ತಿ ಸದಸ್ಯ ಸದಾನಂದಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ನಂಜನಗೂಡಿನಲ್ಲಿ ಇಂದು ಖುದ್ದು ಯಡಿಯೂರಪ್ಪನವರೇ ವಿಜೇಂದ್ರಗೆ ಟಿಕೆಟ್ ನೀಡುವುದಿಲ್ಲ ಎಂಬುದನ್ನು ಬಹಿರಂಗಪಡಿಸಿದರು.

ನಂಜನಗೂಡಿನ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಅವರ ಅಳಿಯ ಹರ್ಷವರ್ಧನ್ ಅವರ ನಾಮಪತ್ರ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸಿದ್ದ ಯಡಿಯೂರಪ್ಪ ಕೆಲವು ಕಾರಣಗಳಿಂದ ವಿಜಯೇಂದ್ರಗೆ ಟಿಕೆಟ್ ನೀಡುವುದಿಲ್ಲ ಎಂದು ಪ್ರಕಟಿಸಿದರು. ಯಡಿಯೂರಪ್ಪನವರ ಈ ಹೇಳಿಕೆ ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ. ಏಕೆಂದರೆ ನಿನ್ನೆಯಷ್ಟೇ ನಿವೃತ್ತ ಪೊಲೀಸ್ ಅಧಿಕಾರಿ ರೇವಣ್ಣ ಸಿದ್ದಯ್ಯ ಕಾಂಗ್ರೆಸ್ ತೊರೆಯುವುದಾಗಿ ಪ್ರಕಟಿಸಿದ್ದರು. ಈ ಬೆನ್ನಲ್ಲೆ ಇಂದು ನಂಜನಗೂಡಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಇದೀಗ ವಿಜಯೇಂದ್ರಗೆ ಟಿಕೆಟ್ ನಿರಾಕರಿಸಿರುವುದರಿಂದ ರೇವಣ್ಣ ಸಿದ್ದಯ್ಯಗೆ ಟಿಕೆಟ್ ಸಿಗಬಹುದೆಂಬ ನಿರೀಕ್ಷೆ ಹುಟ್ಟಿದೆ. ಈ ಹಿಂದೆ ಅವರು ಒಂದು ಬಾರಿ ಸ್ಪರ್ಧಿಸಿ ಪರಾಭವಗೊಂಡಿದ್ದರು.

ತಲೆಕೆಳಗಾದ ಲೆಕ್ಕಾಚಾರ:
ಚುನಾವಣಾ ದಿನಾಂಕ ಘೋಷಣೆಯಾಗುವ ಮೊದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ.ಯತೀಂದ್ರ ಅವರ ವಿರುದ್ಧ ಕಣಕ್ಕಿಳಿಸುವ ಕಾರಣದಿಂದಲೇ ಯಡಿಯೂರಪ್ಪ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದರು. ಕೆಲ ದಿನಗಳ ಹಿಂದೆ ಕ್ಷೇತ್ರದಲ್ಲಿ ಮನೆ ಮಾಡಿ ಪೂಜೆ, ಹೋಮ ಹವನ ನಡೆಸಿ ಗೃಹಪ್ರವೇಶ ಮಾಡಿದ್ದರು. ಅಲ್ಲದೆ ಕ್ಷೇತ್ರದಲ್ಲಿ ವಿಜಯೇಂದ್ರ ಒಂದು ಬಾರಿ ಬಿರುಸಿನ ಪ್ರಚಾರವನ್ನು ಸಹ ನಡೆಸಿದ್ದರು. ಇದ್ದಕ್ಕಿದ್ದಂತೆ ವಿಜಯೇಂದ್ರಗೆ ಪಕ್ಷದ ಹೈಕಮಾಂಡ್ ಟಿಕೆಟ್ ನಿರಾಕರಿಸಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ.

ಬೆಂಬಲಿಗರ ಆಕ್ರೋಶ:
ವೇದಿಕೆಯಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವುದಿಲ್ಲ ಎಂದು ಹೇಳುತ್ತಿದ್ದಂತೆ ಆಕ್ರೋಶಗೊಂಡ ಬೆಂಬಲಿಗರು ವೇದಿಕೆಯ ಮುಂಭಾಗಕ್ಕೆ ನುಗ್ಗಿ ಕುರ್ಚಿಗಳನ್ನು ಮುರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ವರುಣಾದಿಂದ ವಿಜಯೇಂದ್ರಗೆ ಟಿಕೆಟ್ ನೀಡಬೇಕು. ಯಾವುದೇ ಕಾರಣಕ್ಕೂ ಬೇರೊಬ್ಬರಿಗೆ ಟಿಕೆಟ್ ನೀಡಬಾರದೆಂದು ನೂರಾರು ಕಾರ್ಯಕರ್ತರು ಸಮಾವೇಶ ನಡೆಯುತ್ತಿದ್ದ ವೇದಿಕೆ ಮುಂಭಾಗಕ್ಕೆ ನುಗ್ಗಿ ಕುರ್ಚಿಗಳನ್ನು ಪುಡಿ ಪುಡಿ ಮಾಡಿದರು.  ಈಗಾಗಲೇ ಅವರು ಒಂದು ಸುತ್ತಿನ ಪ್ರಚಾರ ನಡೆಸಿದ್ದಾರೆ. ಯಾವ ಕಾರಣಕ್ಕಾಗಿ ಅವರಿಗೆ ಟಿಕೆಟ್ ನೀಡುತ್ತಿಲ್ಲ. ಬೇರೊಬ್ಬರಿಗೆ ಟಿಕೆಟ್ ನೀಡಿದರೆ ಬೆಂಬಲಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.  ವಿಜಯೇಂದ್ರ ಎಷ್ಟೇ ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಬೆಂಬಲಿಗರ ಆಕ್ರೋಶ ಮಾತ್ರ ಮುಂದುವರೆದಿತ್ತು.

Facebook Comments

Sri Raghav

Admin