ವರುಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಂಕರ ಬಿದರಿ ಕಣಕ್ಕೆ

ಈ ಸುದ್ದಿಯನ್ನು ಶೇರ್ ಮಾಡಿ

Bidari--01

ಬೆಂಗಳೂರು,ಅ.11-ಜಿದ್ದಾಜಿದ್ದಿನ ರಣರಂಗವಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಿಂದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ತಮಗೆ ರಾಜಕೀಯ ಪುನರ್ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಕೊನೆಯದಾಗಿ ಸ್ಪರ್ಧಿಸಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ.

ವರುಣ ಕ್ಷೇತ್ರದಿಂದ ಸಿದ್ದರಾಮಯ್ಯನವರ ಪುತ್ರ ಕಣಕ್ಕಿಳಿದರೆ ಅವರಿಗೆ ಪ್ರಬಲ ಸ್ಪರ್ಧಿಯಾಗಿ ಬಿಜೆಪಿ ಶಂಕರ್ ಬಿದರಿ ಅವರನ್ನೇ ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದೆ. ವರುಣದಲ್ಲಿ ಹೇಳಿಕೇಳಿ ಪ್ರಬಲ ಅಭ್ಯರ್ಥಿಗಳಿಲ್ಲ. ಡಾ.ಯತೀಂದ್ರ ಸ್ಪರ್ಧಿಸಿದರೆ ಅವರಿಗೆ ಸರಿಸಮನಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸಲು ಬಿಜೆಪಿ ಲೆಕ್ಕಾಚಾರ ಹಾಕಿದೆ.

ವರುಣ ಕ್ಷೇತ್ರದಲ್ಲಿ ಲಿಂಗಾಯಿತ ಮತಗಳು ನಿರ್ಣಾಯಕವಾಗಿವೆ. ಶಂಕರ್ ಬಿದರಿ ಇದೇ ಸಮುದಾಯಕ್ಕೆ ಸೇರಿರುವುದರಿಂದ ಜೊತೆಗೆ ಈ ಭಾಗದಲ್ಲಿ ಅವರು ಹಿಂದೆ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುವ ಕಾರಣ ಜನರು ಕೈ ಹಿಡಿಯಬಹುದೆಂಬ ವಿಶ್ವಾಸ ಅವರಲ್ಲಿದೆ. ಈ ಹಿಂದೆ ಬಿದರಿ ಬಾಗಲಕೋಟೆ ಜಿಲ್ಲೆಯ ತೆರೆದಾಳ ಇಲ್ಲವೆ ವಿಜಾಪುರ ಜಿಲ್ಲೆಯ ಯಾವುದಾದರೊಂದು ಕ್ಷೇತ್ರದಿಂದ ಸ್ಪರ್ಧಿಸಲು ಮುಂದಾಗಿದ್ದರು. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುವ ಬಿಜೆಪಿ ವರುಣದಿಂದಲೇ ಅಖಾಡಕ್ಕಿಳಿಸಲು ಸಜ್ಜಾಗಿದೆ.

ಈ ಹಿಂದೆ ಬಿದರಿ ಅವರು ಕಾಡುಗಲ್ಲ , ನರಹಂತಕ ವೀರಪ್ಪನ್ ಹಿಡಿಯಲು ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ಕಾರ್ಯಾಚರಣೆ ಪಡೆ(ಎಸ್‍ಟಿಎಫ್)ನ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ್ದರು. ಈಗಲೂ ಶಂಕರ್ ಬಿದರಿ ಎಂದರೆ ರಾಜ್ಯದ ಜನತೆಯಲ್ಲಿ ವಿಶೇಷವಾದ ಪ್ರೀತಿ, ಗೌರವ ಇದೆ. ಕಳೆದ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆಯಿಂದ ಸ್ಪರ್ಧಿಸಿದ್ದರೂ ಅವರು ಗೆಲ್ಲಲು ಸಾಧ್ಯವಾಗಲಿಲ್ಲ. ಬಳಿಕ ಬಿಜೆಪಿ ಸೇರಿಕೊಂಡಿರುವ ಬಿದರಿ ರಾಜಕೀಯದಲ್ಲೂ ತಮ್ಮ ಛಾಪು ಮೂಡಿಸಲು ಮುಂದಾಗಿದ್ದಾರೆ.

ವರುಣದಿಂದ ಸ್ಪರ್ಧಿಸುವಂತೆ ಈಗಾಗಲೇ ಪಕ್ಷದ ವರಿಷ್ಠರು ಈಗಾಗಲೇ ಮೌಖಿಕ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಪರಿವರ್ತನ ರಥಯಾತ್ರೆ ಮುಗಿದ ಬಳಿಕ ಸಂಪೂರ್ಣವಾಗಿ ವರುಣದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ಒಂದು ವೇಳೆ ಶಂಕರ್ ಬಿದರಿ ಸ್ಪರ್ಧಿಸಿದರೆ ವರುಣ ಕೂಡ ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಲಿದೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ವರುಣ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಅಪ್ಪ-ಮಗನನ್ನು ಖೆಡ್ಡಕ್ಕೆ ಬೀಳಿಸಲು ಬಿಜೆಪಿ, ಜೆಡಿಎಸ್ ತನ್ನ ಹಳೆಯ ವೈರತ್ವವನ್ನು ಮರೆತು ಕೈ ಜೋಡಿಸುವ ಸಾಧ್ಯತೆ ಹೆಚ್ಚಾಗಿದೆ.

Facebook Comments

Sri Raghav

Admin