ವರ್ಷಾಂತ್ಯದ ವೇಳೆಗೆ ಅಪರೂಪದ ಹೊಸ ದಾಖಲೆ ಬರೆಯಲಿದ್ದಾರೆ ಸಿಎಂ ಸಿದ್ದರಾಮಯ್ಯ

ಈ ಸುದ್ದಿಯನ್ನು ಶೇರ್ ಮಾಡಿ

Siddaramaiaha--01

ಬೆಂಗಳೂರು, ಡಿ.13- ಇಂದಿನಿಂದ ನವ ಕರ್ನಾಟಕ ನಿರ್ಮಾಣ ಯಾತ್ರೆ ಆರಂಭಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವರ್ಷಾಂತ್ಯದ ವೇಳೆಗೆ ಅಪರೂಪದ ದಾಖಲೆಯೊಂದನ್ನು ಸೃಷ್ಟಿಸಲಿದ್ದಾರೆ. ರಾಮಕೃಷ್ಣ ಹೆಗಡೆ ನಂತರ ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿದ್ದ ಎಸ್.ಎಂ.ಕೃಷ್ಣ ಅವರ ದಾಖಲೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮುರಿಯಲಿದ್ದಾರೆ. 1999ರ ಅಕ್ಟೋಬರ್ 11ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ಎಸ್.ಎಂ.ಕೃಷ್ಣ 2004 ಮೇ 28ರ ತನಕ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅಂದರೆ ಅವರು ನಾಲ್ಕು ವರ್ಷ 230 ದಿನಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದರು. ಇದೀಗ ಸಿದ್ದರಾಮಯ್ಯ ಡಿಸೆಂಬರ್ ಅಂತ್ಯದ ವೇಳೆಗೆ ಈ ದಾಖಲೆ ಮುರಿದು ರಾಮಕೃಷ್ಣ ಹೆಗಡೆ ಅವರ ನಂತರ ಅತ್ಯಂತ ಸುದೀರ್ಘ ಅವಧಿಯ ಸಿಎಂ ಎಂಬ ಕೀರ್ತಿಗೆ ಭಾಜನರಾಗಲಿದ್ದಾರೆ.

ಸಿದ್ದರಾಮಯ್ಯನವರು 2013ರ ಮೇ 13ರಂದು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಈ ಮೂಲಕ ಇದುವರೆಗೆ ನಾಲ್ಕು ವರ್ಷ 215 ದಿನಗಳನ್ನು ಸಿಎಂ ಆಗಿ ಪೂರೈಸಿದ್ದಾರೆ. ಡಿ.29ಕ್ಕೆ ಅವರು ಮುಖ್ಯಮಂತ್ರಿಯಾಗಿ 231 ದಿನಗಳಾಗಲಿದ್ದು, ಈ ಮೂಲಕ ನಿಜಲಿಂಗಪ್ಪ, ದೇವರಾಜ ಅರಸು, ರಾಮಕೃಷ್ಣ ಹೆಗಡೆ ನಂತರ ಅತ್ಯಂತ ಸುದೀರ್ಘ ಕಾಲದ ಸಿಎಂ ಆದ ಕೀರ್ತಿ ಅವರದ್ದಾಗಲಿದೆ.

ಹೆಗಡೆ ಅವರ ನಂತರ ಸಿದ್ದರಾಮಯ್ಯ ಸೇರಿದಂತೆ 13 ಮುಖ್ಯಮಂತ್ರಿಗಳು ರಾಜ್ಯವನ್ನಾಳಿದ್ದು, ಇದೀಗ ಬೀದರ್ ಟು ಬೆಂಗಳೂರು ಯಾತ್ರೆ ಆರಂಭಿಸಿರುವ ಸಿದ್ದರಾಮಯ್ಯ ಯಾತ್ರೆ ಮಧ್ಯೆಯೇ ಈ ಕೀರ್ತಿಗೆ ಪಾತ್ರರಾಗಲಿದ್ದಾರೆ. ಡಿ.29ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು, ಬಾಗೇಪಲ್ಲಿ, ಶಿಡ್ಲಘಟ್ಟದಲ್ಲಿ ನವಕರ್ನಾಟಕ ಯಾತ್ರೆ ನಡೆಸಲಿದ್ದಾರೆ.  ರಾಮಕೃಷ್ಣ ಹೆಗಡೆಯವರ ನಂತರ ಎಸ್.ಆರ್.ಬೊಮ್ಮಾಯಿ, ವೀರೇಂದ್ರ ಪಾಟೀಲ್, ಬಂಗಾರಪ್ಪ, ವೀರಪ್ಪಮೊಯ್ಲಿ, ಎಚ್.ಡಿ.ದೇವೇಗೌಡ, ಜೆ.ಎಚ್.ಪಟೇಲ್, ಎಸ್.ಎಂ.ಕೃಷ್ಣ, ಧರ್ಮಸಿಂಗ್, ಎಚ್.ಡಿ.ಕುಮಾರಸ್ವಾಮಿ, ಯಡಿಯೂರಪ್ಪ, ಡಿ.ವಿ.ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ಸಿದ್ದರಾಮಯ್ಯ ಅನುಕ್ರಮವಾಗಿ ಮುಖ್ಯಮಂತ್ರಿಗಳಾಗಿದ್ದಾರೆ.

Facebook Comments

Sri Raghav

Admin