ವರ್ಷ ಕಳೆದರೂ ಕಲ್ಬುರ್ಗಿ ಹಂತಕರ ಸುಳಿವಿಲ್ಲ : ಅವಳಿನಗರದಲ್ಲಿ ಸಾಹಿತಿಗಳ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

sGFADGadg

ಧಾರವಾಡ/ಹುಬ್ಬಳ್ಳಿ, ಆ.30- ವಿಮರ್ಶಕ, ಖ್ಯಾತ ಸಾಹಿತಿ ಡಾ.ಎಂ.ಎಂ.ಕಲಬುರಗಿ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾದರೂ ದುಷ್ಕರ್ಮಿಗಳ ಪತ್ತೆ ಮಾಡದ ಹಿನ್ನೆಲೆಯಲ್ಲಿ ದೇಶದ ಖ್ಯಾತ ಸಾಹಿತಿಗಳು, ವಿಚಾರವಾದಿಗಳು, ಪ್ರಗತಿಪರರು ಇಂದು ಧಾರವಾಡ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಎಂ.ಎಂ.ಕಲಬುರಗಿ ಅವರ ನಿವಾಸದಿಂದ ಆರ್ಟ್ ಗ್ಯಾಲರಿ ಮೈದಾನದವರೆಗೆ ಸುಮಾರು 60ಕ್ಕೂ ಹೆಚ್ಚು ಸಂಘಟನೆಗಳು ಬೃಹತ್ ಪ್ರತಿಭಟನೆ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಆಗ್ರಹಿಸಿದವು.  ಡಾ.ಎಂ.ಎಂ.ಕಲಬುರಗಿಯವರ ಹತ್ಯೆಯಾಗಿ ಒಂದು ವರ್ಷ ಕಳೆಯಿತು. ಈವರೆಗೂ ಆರೋಪಿಗಳ ಸುಳಿವು ದೊರೆತಿಲ್ಲ. ತನಿಖೆಯನ್ನು ತೀವ್ರಗೊಳಿಸಿ ದುಷ್ಕರ್ಮಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಹುಬ್ಬಳ್ಳಿಯಲ್ಲಿ 100ಕ್ಕೂ ಹೆಚ್ಚು ಸಂಘಟನೆಗಳು ವಿಚಾರಿವಾದಿಗಳ ಹತ್ಯೆ ವಿರೋಧಿ ಹೋರಾಟ ವೇದಿಕೆಯಡಿಯಲ್ಲಿ ಬೃಹತ್ ಸಮಾವೇಶ ನಡೆಸಿ ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಲಾಯಿತು. ಈ ಸಮಾವೇಶದಲ್ಲಿ ಅಂತಾರಾಷ್ಟ್ರೀಯ ಲೇಖಕರು, ಬರಹಗಾರರು, ಪ್ರಗತಿಪರರು, ವಿಚಾರವಾದಿಗಳು ಭಾಗವಹಿಸಿದ್ದರು.

ನಾಡೋಜ ಚನ್ನವೀರ ಕಣವಿ, ಸಾಹಿತಿ ಚಂಪಾ, ಭಾಷಾ ತಜ್ಞ ಗಣೇಶ್ ದೇವಿ ಸೇರಿದಂತೆ ಪ್ರಖ್ಯಾತ ಹಿರಿಯ ಸಾಹಿತಿಗಳು ಭಾಗವಹಿಸಿದ್ದರು. ಡಾ.ಎಂ.ಎಂ.ಕಲಬುರಗಿಯವರ ಅಪರ ಅನುಯಾಯಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡು ಹತ್ಯೆ ತನಿಖೆ ವಿಳಂಬ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಹಲ್ಲೆಯನ್ನು ಖಂಡಿಸಿದರು.  ಮಹಾರಾಷ್ಟ್ರ ರಾಜ್ಯದ ನರೇಂದ್ರ ದಾಬೋಲ್ಕರ್ ಹಾಗೂ ಗೋವಿಂದ ಪನ್ಸಾರೆ ಕುಟುಂಬವರ್ಗದವರು ಕೂಡ ಕಲಬುರಗಿಯವರ ನಿವಾಸಕ್ಕೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಜಾನಪದ ಹಾಡು ಹಾಡುವ ಮೂಲಕ ಮೆರವಣಿಗೆಯಲ್ಲಿ ವಿಚಾರವಾದಿಗಳ ಹತ್ಯೆಯನ್ನು ಖಂಡಿಸಲಾಯಿತು.

► Follow us on –  Facebook / Twitter  / Google+

Facebook Comments

Sri Raghav

Admin