ವಲಸಿಗರು ಅದರಲ್ಲೂ ವಿಶೇಷವಾಗಿ ಭಾರತೀಯರ ಹಿತರಕ್ಷಣೆಗೆ ಟ್ರಂಪ್ ಬದ್ಧ : ನಿಕ್ಕಿ ಹ್ಯಾಲೆ
ವಾಷಿಂಗ್ಟನ್, ನ.18-ಅಮೆರಿಕ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ವಲಸಿಗರು, ಅದರಲ್ಲೂ ವಿಶೇಷವಾಗಿ ಭಾರತೀಯರು ಮತ್ತು ಅನ್ಯ ವರ್ಣಿಯರ ಹಿತಾಸಕ್ತಿ ರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ ಎಂದು ಭಾರತೀಯ ಮೂಲದ ಪ್ರಭಾವಿ ರಾಜಕಾರಣಿ ಮತ್ತು ಸೌತ್ ಕರೋಲಿನಾ ರಾಜ್ಯಪಾಲೆ ನಿಕ್ಕಿ ಹ್ಯಾಲೆ ಹೇಳಿದ್ದಾರೆ. ಸಂಪುಟದಲ್ಲಿ ವಿದೇಶಾಂಗ ಸಚಿವೆ ಎಂದೇ ಬಿಂಬಿಸಲ್ಪಟ್ಟಿರುವ ನಿಕ್ಕಿ ಹ್ಯಾಲೆ ಪ್ರತಿಷ್ಠಿತ ರಿಪಬ್ಲಿಕನ್ ಗೌರ್ನರ್ಸ್ ಅಸೋಸಿಯೇಷನ್ಗೆ ಉಪಾಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಅಮೆರಿಕದಲ್ಲಿರುವ ಅನ್ಯ ದೇಶಗಳ ವಲಸಿಗರಿಗೆ ಅಭಯ ನೀಡುವ ಹೇಳಿಕೆ ನೀಡಿದ್ದು, ಟ್ರಂಪ್ ಬಗೆಗಿರುವ ಅಸಮಾಧಾನವನ್ನು ಹೋಗಲಾಡಿಸುವ ಯತ್ನ ನಡೆಸಿದ್ದಾರೆ.
ಟ್ರಂಪ್ ಸಂಪುಟದಲ್ಲಿ 44 ವರ್ಷದ ನಿಕ್ಕಿ ಹ್ಯಾಲೆ ಸ್ಥಾನ ಪಡೆಯಲಿದ್ದಾರೆ ಎಂಬ ವರದಿಗಳಿವೆ. ಇದರ ಹಿಂದೆಯೇ ನಿಕ್ಕಿ ಹ್ಯಾಲೆಗೆ ಪ್ರಮುಖ ಜವಾಬ್ದಾರಿಯುತ ಸ್ಥಾನವೊಂದು ಸಹ ಲಭಿಸಿದೆ.
ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ನವೆಂಬರ್ 8ರಂದು ನಡೆದ ಚುನಾವಣೆ ನಂತರ 33 ರಾಜ್ಯಗಳಲ್ಲಿ ರಿಪಬ್ಲಿಕನ್ ಪಕ್ಷದ ರಾಜ್ಯಪಾಲರು ಅಧಿಕಾರ ವಹಿಸಿಕೊಳ್ಳಲಿದ್ದು, ಈ ಸಂಘಕ್ಕೆ ಹ್ಯಾಲೆ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.
► Follow us on – Facebook / Twitter / Google+