ವಾದ-ವಿವಾದಕ್ಕೆ ಭರಿಸಿದ ವೆಚ್ಚಕ್ಕೆ ಲೆಕ್ಕವಿಲ್ಲ, ಆದರೂ ಬಗೆಹರಿದಿಲ್ಲ ವ್ಯಾಜ್ಯ

ಈ ಸುದ್ದಿಯನ್ನು ಶೇರ್ ಮಾಡಿ

Kaveri

ಬೆಂಗಳೂರು, ಸೆ.6-ನೀರಿನ ವ್ಯಾಜ್ಯಗಳು ಕರ್ನಾಟಕವನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸಿರುವುದು ಕನ್ನಡಿಗರಿಗೆ ತಿಳಿಯದ ವಿಷಯವೇನಲ್ಲ. ಕರ್ನಾಟಕದಾದ್ಯಂತ ಇರುವ ಕೆಲವು ನದಿಗಳ ನೀರನ್ನು ನೆರೆ ರಾಜ್ಯಗಳೊಂದಿಗೆ ಹಂಚಿಕೆ ಮಾಡಿಕೊಳ್ಳುವ ಸಂಬಂಧ ದಶಕಗಳಿಂದ ವ್ಯಾಜ್ಯಗಳನ್ನು ಏಳುಬೀಳುಗಳ ನಡುವೆ ನಿರ್ವಹಿಸಲೇಬೇಕಾದ ಅನಿವಾರ್ಯತೆಯಲ್ಲಿ ಸಿಲುಕಿದೆ.
ಕೃಷ್ಣಾ, ಕಾವೇರಿಯ ವ್ಯಾಜ್ಯಗಳು ದಶಕಗಳಿಂದ ನೆರೆ ರಾಜ್ಯಗಳೊಂದಿಗೆ ಸಂಘರ್ಷಕ್ಕೆ ಕಾರಣವಾಗಿರುವುದು ಹೊಸದೇನಲ್ಲ. ಆದರೆ ಇವುಗಳಿಗೆ ಮುಕ್ತಿ ಇಲ್ಲವೇ ಎಂಬ ಆಲೋಚನೆಯೂ ಬಾರದೆ ಇರದು. ಜನಸಾಮಾನ್ಯರು ಹಾಗೂ ರೈತರು, ಕನ್ನಡ ಪರ ಸಂಘಟನೆಗಳು ನೀರಿನ ಹೋರಾಟದಲ್ಲಿ ಶ್ರಮಿಸುತ್ತಿರುವುದೇನೋ ನಿಜ. ಆದರೆ, ಈ ಹೋರಾಟಗಳಿಗೆ ತಾರ್ಕಿಕ ಅಂತ್ಯ ಇಲ್ಲವೇ ಎಂಬ ಪ್ರಶ್ನೆ ಎಲ್ಲರನ್ನು ಕಾಡುತ್ತಿದೆ.

ನದಿ ನೈಸರ್ಗಿಕ ಸಂಪನ್ಮೂಲ. ಅದರಂತೆ ಮಳೆಯನ್ನಾಧರಿಸಿಯೇ ನದಿ ನೀರು, ಬಳಕೆಯ ಪ್ರಮಾಣ ನಿಗದಿಯಾಗಬೇಕೆಂಬುದು ಸರಿಯಾದುದಾದರೂ ಈ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗುವುದಂತೂ ತಪ್ಪಿಲ್ಲ.  ವೈಜ್ಞಾನಿಕ ರೀತಿಯಲ್ಲಿ ನೀರಿನ ವ್ಯಾಜ್ಯಗಳು ಬಗೆಹರಿಸಬೇಕಿದ್ದರೂ ಅದರೊಂದಿಗೆ ಆಯಾ ಪ್ರದೇಶದ ಜನಸಂಖ್ಯೆ, ಕೃಷಿ, ಕುಡಿಯಲು ಹಾಗೂ ಇನ್ನಿತರ ಕೆಲಸಗಳಿಗೆ ಉಪಯೋಗವಾಗುವ ನೀರಿನ ಪ್ರಮಾಣ ಆಧರಿಸಿರುತ್ತದೆ. ಇವೆಲ್ಲವೂ ಕಾಲಕಾಲಕ್ಕೆ ಬದಲಾವಣೆಯಾಗಿ ನಕ್ಷೆಯಲ್ಲಿ ಏರು ಗತಿಯಲ್ಲಿ ಸಾಗುತ್ತಿದ್ದರೂ ನೀರಿನ ಹಂಚಿಕೆ ಮಾತ್ರ ಹಳೆಯ ಕಾಲದ ಅಂಶಗಳನ್ನೇ ಆಧರಿಸಿ ಮಾಡುತ್ತಿರುವುದು ಲೋಪವಲ್ಲದೆ ಮತ್ತೇನು?

ಹಲವಾರು ದಶಕಗಳಿಂದ ಈ ವ್ಯಾಜ್ಯಗಳನ್ನು ಬಗೆಹರಿಸಿಕೊಳ್ಳಲು ರಾಜ್ಯಸರ್ಕಾರ ನ್ಯಾಯಾಲಯದ ಹೋರಾಟಕ್ಕೆ ಮಾಡಿರುವ ಖರ್ಚು-ವೆಚ್ಚಗಳ ಪಟ್ಟಿ ಗಮನಿಸಿದರೆ ಈ ಹಣದಿಂದ ರಾಜ್ಯದಲ್ಲಿ ಅದೆಷ್ಟೋ ನೂತನ ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದಿತ್ತು. ನೀರು ಹಂಚಿಕೆ ವಿವಾದವನ್ನೇ ಬಗೆಹರಿಸಿಕೊಳ್ಳಲು ನಿರಂತರ ಪ್ರಯತ್ನಿಸುತ್ತ ಅದಕ್ಕಾಗಿ ಹಣ ವ್ಯಯಿಸುತ್ತಾ ಇರುವ ಸರ್ಕಾರ ಈ ನಿಟ್ಟಿನಲ್ಲೂ ಚಿಂತನೆ ನಡೆಸಬೇಕಿತ್ತು. 1990ರಲ್ಲಿ ಕೇಂದ್ರ ಸರ್ಕಾರ ಕಾವೇರಿ ನದಿ ನೀರು ಹಂಚಿಕೆಗೆ ನ್ಯಾಯಾಧಿಕರಣ ಸ್ಥಾಪನೆ ಮಾಡಿದ್ದು, ಸುಮಾರು 16 ವರ್ಷಗಳ ಕಾಲ ತಮಿಳುನಾಡು, ಕರ್ನಾಟಕ, ಕೇರಳ, ಪುದುಚೇರಿ ಈ ನಾಲ್ಕೂ ರಾಜ್ಯಗಳ ವಾದ-ವಿವಾದವನ್ನು ಆಲಿಸಿ ನ್ಯಾಯಾಧಿಕರಣ 2007ರ ಫೆ.5ರಂದು ನೀಡಿದ ತೀರ್ಪಿನ ವಿರುದ್ಧವೂ ಮತ್ತೆ ಎಲ್ಲಾ ರಾಜ್ಯಗಳು ಮೇಲ್ಮನವಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಿದ್ದವು.

ಮೂಲತಃ 1892 ಮತ್ತು 1924ರ ನಡುವೆ ಮದ್ರಾಸ್ ರೆಸಿಡೆನ್ಸಿ ಮತ್ತು ಪ್ರಿನ್ಸ್‍ಲಿ ಸ್ಟೇಟ್ ಆಫ್ ಮೈಸೂರು ನಡುವೆ ಸುಮಾರು 802 ಕಿ.ಮೀ. ವ್ಯಾಪ್ತಿಯಲ್ಲಿ ಹರಿಯುವ ಕಾವೇರಿ ನದಿ ನೀರು ಹಂಚಿಕೆ ಕುರಿತ ಒಪ್ಪಂದವಾಗಿತ್ತು. ಇದರಂತೆ ನೀರು ಹಂಚಿಕೆ ಮಾಡುವುದರಿಂದ ಮದ್ರಾಸ್‍ಗೆ ಮಾತ್ರ ಅನುಕೂಲವಾಗಲಿದ್ದು, ನಮಗೆ ಆಗುವ ಅನಾನುಕೂಲತೆ ಪರಿಗಣಿಸಿ ನೀರಿನ ಸಮವಾದ ಹಂಚಿಕೆಗಾಗಿ ಕರ್ನಾಟಕ ಮೊರೆಯಿಟ್ಟಿತ್ತು. ಆದರೆ ಇದಕ್ಕೆ ವಿರೋಧಿಸಿ ತಮಿಳುನಾಡು ಈ ಹಂಚಿಕೆ ವಿಧಾನದಲ್ಲಿ ಯಾವುದೇ ಬದಲಾವಣೆಯಾದರೆ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ವಾದಿಸಿತ್ತು.

ನಂತರ ಎರಡೂ ರಾಜ್ಯಗಳು ಈ ವಿವಾದದಿಂದ ಪ್ರತಿ ಬಾರಿಯೂ ತೊಂದರೆ ಎದುರಿಸುತ್ತಿದುz್ದÀನ್ನು ಅರಿತು ನ್ಯಾಯಾಧಿಕರಣ ರಚನೆಯಾಯಿತು. ಆದರೆ ನಾಲ್ಕೂ ರಾಜ್ಯಗಳ ನಡುವಿನ ನೀರಿನ ಸಮಸ್ಯೆ ಬಗೆಹರಿಸಲು ನ್ಯಾಯಾಧಿಕರಣ ನೀಡಿದ ತೀರ್ಪಿನಿಂದ ಕರ್ನಾಟಕಕ್ಕೆ ನ್ಯಾಯ ಒದಗುವ ಬದಲು ಅನ್ಯಾಯವೇ ಆಯಿತು. ಇದಕ್ಕಾಗಿ ಪ್ರತಿಬಾರಿ ನ್ಯಾಯಾಲಯದ ಮೊರೆ ಹೋಗುವುದು, ಮತ್ತೆ ನಿರಾಸೆಯಿಂದ ಕಂಗಾಲಾಗುವುದು, ವಾಡಿಕೆ ಮಳೆಗಿಂತ ಕಡಿಮೆ ಮಳೆಯಾದರೂ ನೀರು ಹರಿಸುವ ಪ್ರಮಾಣದಲ್ಲಿ ಮಾತ್ರ ಇಳಿತವಾಗದೆ ಇರುವುದು ಕರ್ನಾಟಕಕ್ಕೆ ಮಗ್ಗುಲ ಮುಳ್ಳಂತೆ ಬಾಧಿಸುತ್ತಲೇ ಬಂದಿದೆ. ಇದಕ್ಕಾಗಿ ವಾರ್ಷಿಕ ಎರಡು ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ನ್ಯಾಯಾಲಯಕ್ಕೆ ಎಡತಾಕುವ ಸರ್ಕಾರ, ಇದಕ್ಕಾಗಿ ಸಾಕಷ್ಟು ವೆಚ್ಚವನ್ನು ಭರಿಸಲೇಬೇಕಾಗಿದೆ.

ರೈತರ ಆಕ್ರೋಶ, ಜನಸಾಮಾನ್ಯರ ಅಸಮಾಧಾನ, ತೀರ್ಪಿನಿಂದ ಬೇಸರಗೊಂಡ ಪ್ರತಿಭಟನೆ, ರಸ್ತೆ ತಡೆ ಹೆಸರಿನಲ್ಲಿ ಸಾರ್ವಜನಿಕರ ಸ್ವತ್ತುಗಳನ್ನು ಹಾನಿ ಮಾಡುವ ನಷ್ಟ ಎಲ್ಲವನ್ನೂ ಎದುರಿಸುತ್ತಲೇ ಸಾಗಬೇಕಿದೆ. ಆದರೆ ಇಷ್ಟೆಲ್ಲ ಹಣದ ಅಳತೆಗೋಲಿನಲ್ಲಿ ರಾಜ್ಯದ ವಿವಿಧೆಡೆ ಕೆಲವೊಂದು ನೀರಾವರಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬಹುದಿತ್ತೇನೋ ಎಂಬ ವಿಚಾರದ ಹೊಳವಿಗೆ ಪುಷ್ಟಿ ದೊರೆತಿಲ್ಲ. ಕಾವೇರಿ ನ್ಯಾಯಾಧಿಕರಣ ರಚನೆಯಾಗಿ 25 ವರ್ಷಗಳು ಕಳೆದರೂ ಈ ವ್ಯಾಜ್ಯಗಳು ಮಾತ್ರ ಬಗೆಹರಿಯುವ ಲಕ್ಷಣ ಕಂಡುಬರುತ್ತಿಲ್ಲ. ಪ್ರತಿಬಾರಿ ನೀರಿನ ಲಭ್ಯತೆ, ಹರಿಸಬಹುದಾದ ಪ್ರಮಾಣಕ್ಕಿಂತ ಹೆಚ್ಚಿನ ನೀರನ್ನು ಹರಿಸಲು ಬರುವ ಆದೇಶ ರಾಜ್ಯದ ಜನರಿಗೆ ಹೋರಾಟದ ಕಿಚ್ಚು ಹಚ್ಚುತ್ತಿದೆ. ಇತ್ತ ನ್ಯಾಯಾಲಯದ ಮೊರೆ ಹೋಗಿ ಸುಸೂತ್ರವಾಗಿ ಸಮಸ್ಯೆ ಬಗೆಹರಿಸಿಕೊಳ್ಳಲು ಆಗದೆ ತಮ್ಮ ಬೆಳೆಗಳಿಗೆ ನೀರೂ ಸಾಲದೆ ಬೆಳೆನಷ್ಟ, ಸಾಲಬಾಧೆಯಿಂದ ನರಳುತ್ತಿರುವಂತಾಗುತ್ತಿರುವುದಕ್ಕೆ ನೊಂದು ಬೀದಿಗಿಳಿದು ಹೋರಾಟಕ್ಕೆ ಮುಂದಾಗುತ್ತಾರೆ.

ಹಿಂದಿನ ಅಂಕಿ ಅಂಶದಂತೆ, ವಾಸ್ತವ ಸ್ಥಿತಿ ಅರಿಯದೆ, ನಾಲ್ಕು ಪಟ್ಟು ಜನಸಂಖ್ಯೆ ಹೆಚ್ಚಾಗಿರುವುದನ್ನು ಮನಗಾಣದೆ ತೀರ್ಪು ಹೊರಬೀಳುತ್ತಿರುವುದು ಅನ್ಯಾಯಕ್ಕೆ ಕಾರಣ.
ಆದರೆ ಕನ್ನಡಿಗರು ಮಹಾರಾಷ್ಟ್ರದಿಂದ ದುಡ್ಡು ಕೊಟ್ಟು ನೀರು ಖರೀದಿಸಿ ಉತ್ತರ ಕರ್ನಾಟಕದ ಮಂದಿಯ ದಾಹ ತಣಿಸಲು ಮುಂದಾದರೆ, ಆಂಧ್ರಕ್ಕೆ ಕೃಷ್ಣೆಯಿಂದ ನೀರು ಹರಿಸುತ್ತೇವೆ. ಅದೇ ರೀತಿ ಕಾವೇರಿಯಿಂದಲೂ ತಮಿಳುನಾಡು, ಕೇರಳ, ಪುದುಚೇರಿಗೆ ನೀರು ಹರಿಯುತ್ತದೆ.  ಅಂತಾರಾಜ್ಯ ಸಮನ್ವತೆಯಿಂದ ನೀರು ಕೊಡು-ಕೊಳ್ಳುವಿಕೆ ಇರಬೇಕಾದುದು ಸಹಜವಾದರೂ ಕರ್ನಾಟಕದವರು ಈ ವಿಚಾರದಲ್ಲಿ ಉದಾರಿಗಳು. ತಾವು ಕೊಳ್ಳುವ ನೀರಿನ ಹಣ ಕಟ್ಟಿದರೂ, ಯಥೇಚ್ಛವಾಗಿ ಇತರೆ ರಾಜ್ಯಗಳಿಗೆ ನೀರು ಹರಿಸುತ್ತಾರಾದರೂ ಕರ್ನಾಟಕದವರಿಗೆ ನೀರು ಸಿಗದ ರೀತಿಯಲ್ಲಿ ನದಿ ನೀರಿನ ಹಂಚಿಕೆ ಮಾಡುತ್ತಿರುವುದು ದುರಂತದ ವಿಚಾರ.

ಇನ್ನಾದರೂ ರಾಜ್ಯಸರ್ಕಾರ ನ್ಯಾಯಾಲಯದಲ್ಲಿ ನಡೆಸುವ ವಾದ-ಪ್ರತಿವಾದಗಳ ಕಡೆ ಗಮನಹರಿಸುವಷ್ಟೇ ಪ್ರಾಮುಖ್ಯತೆಯನ್ನು ನಮ್ಮ ನೀರಿನ ಮೂಲ ಹಾಗೂ ಸೆಲೆಯನ್ನು ಅರಿತು ಅದರಿಂದ ರೂಪಿಸಬಹುದಾದ ಯೋಜನೆಗಳತ್ತಲೂ ಚಿಂತನೆ ನಡೆಸಬೇಕಿದೆ. ಇದರಿಂದ ನೀರಿನ ಹಾಹಾಕಾರಕ್ಕೆ ಅಲ್ಪ ವಿರಾಮ ದೊರೆಯದೆ ಇರದು.

► Follow us on –  Facebook / Twitter  / Google+

Facebook Comments

Sri Raghav

Admin