ವಾರಕ್ಕೊಮ್ಮೆ ‘ಸ್ವಚ್ಛ ಕೆ.ಆರ್.ಮಾರುಕಟ್ಟೆ’ ಅಭಿಯಾನ

ಈ ಸುದ್ದಿಯನ್ನು ಶೇರ್ ಮಾಡಿ

Padmav-athi

ಬೆಂಗಳೂರು, ಅ.15-ನಗರದ ಕೆ.ಆರ್.ಮಾರುಕಟ್ಟೆಯನ್ನು ಅವ್ಯವಸ್ಥೆಯಿಂದ ಮುಕ್ತಿಗೊಳಿಸುವ ತೀರ್ಮಾನಕ್ಕೆ ಬಂದಿರುವ ಮೇಯರ್ ಪದ್ಮಾವತಿ ಅವರು, ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ವಾರಕ್ಕೊಮ್ಮೆ ಸ್ವಚ್ಛ ಮಾರುಕಟ್ಟೆ ಅಭಿಯಾನ ಹಮ್ಮಿಕೊಳ್ಳಲು ನಿರ್ಧರಿಸಿದ್ದಾರೆ. ನಿನ್ನೆ ಮೇಯರ್ ಅವರು ಮಾರುಕಟ್ಟೆಗೆ ದಿಢೀರ್ ಭೇಟಿ ನೀಡಿದಾಗ ಇಡೀ ಪ್ರದೇಶ ಅವ್ಯವಸ್ಥೆಯಿಂದ ಕೂಡಿತ್ತು. ಹೀಗಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದ ಮೇಯರ್ ಪದ್ಮಾವತಿ ಅವರು ಇಂದು ಮತ್ತೆ ಮಾರುಕಟ್ಟೆಗೆ ತೆರಳಿ ಸ್ವತಃ ಸ್ವಚ್ಛತಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವ ಮೂಲಕ ಗಮನ ಸೆಳೆದರು.

ಸ್ವತಃ ಮೇಯರ್ ಅವರೇ ಪೊರಕೆ ಹಿಡಿದಿದ್ದರಿಂದ ಉತ್ಸಾಹಗೊಂಡ 200ಕ್ಕೂ ಹೆಚ್ಚು ಪೌರಕಾರ್ಮಿಕರು ಕಸ ಗೂಡಿಸುವ ಕಾರ್ಯದಲ್ಲಿ ಕೈ ಜೋಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮೇಯರ್ ಅವರು, ಕೆ.ಆರ್.ಮಾರುಕಟ್ಟೆಯ ಅವ್ಯವಸ್ಥೆಯನ್ನು ದೂರ ಮಾಡುವ ಉದ್ದೇಶದಿಂದ ಸ್ವಚ್ಛ ಮಾರುಕಟ್ಟೆ ಅಭಿಯಾನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು. ಹೀಗಾಗಿ ಮಾರುಕಟ್ಟೆ ಸಮಿತಿ ರಚನೆ ಮಾಡಲಾಗುವುದು ಹಾಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಸರ್ಕಾರೇತರ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ ವಾರಕ್ಕೊಮ್ಮೆ ಅಭಿಯಾನ ನಡೆಸಲಾಗುವುದು ಎಂದು ಮೇಯರ್ ತಿಳಿಸಿದರು.

Meyor

ನಗರದ ನಾಗರಿಕರ ಜೀವನಾಡಿಯಂತಿರುವ ಕೆ.ಆರ್.ಮಾರುಕಟ್ಟೆಯನ್ನು ಸ್ವಚ್ಛಗೊಳಿಸುವುದೇ ನಮ್ಮ ಉದ್ದೇಶ. ಹೀಗಾಗಿ ನನ್ನ ಅವಧಿಯಲ್ಲಿ ಏನೆಲ್ಲಾ ಮಾಡಬಹುದೋ ಅದನ್ನು ಮಾಡುತ್ತೇನೆ. ಮಾರುಕಟ್ಟೆಯಲ್ಲಿರುವ ಕಸಕ್ಕೆ ಮುಕ್ತಿ ತೋರಿಸುತ್ತೇನೆ ಎಂದು ಪದ್ಮಾವತಿ ಭರವಸೆ ನೀಡಿದರು. ಕೆ.ಆರ್.ಮಾರುಕಟ್ಟೆಯಲ್ಲಿ ಪ್ರತಿನಿತ್ಯ ಸಂಗ್ರಹವಾಗುವ ಭಾರೀ ತ್ಯಾಜ್ಯವನ್ನು ಬೇರೆ ಕಡೆ ಶಿಫ್ಟ್ ಮಾಡುವ ಕುರಿತಂತೆ ಪಾಲಿಕೆ ಸಭೆಯಲ್ಲಿ ಚರ್ಚಿಸಿದ ನಂತರ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು. ಪ್ಲ್ಯಾಸ್ಟಿಕ್ ಸೀಜ್: ಮೇಯರ್ ಭೇಟಿ ಸಂದರ್ಭದಲ್ಲಿ ವ್ಯಾಪಾರಿಗಳು ಮಾರಾಟಕ್ಕೆ ಉಪಯೋಗಿಸುತ್ತಿದ್ದ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಂಡು ದಂಡ ವಿಧಿಸಿದರು.

ನಗರದಲ್ಲಿ ಕಳಪೆ ಪ್ಲ್ಯಾಸ್ಟಿಕ್ ಉತ್ಪನ್ನ ಬಳಕೆಗೆ ನಿಷೇಧ ಹೇರಿದ್ದರೂ ಕೆಲವು ವ್ಯಾಪಾರಿಗಳು ರಾಜಾರೋಷವಾಗಿ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡುತ್ತಿದ್ದು, ಇಂತಹವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು. ಹೀಗಾಗಿ ಯಾರೂ ಪ್ಲ್ಯಾಸ್ಟಿಕ್ ಉತ್ಪನ್ನಗಳನ್ನು ಬಳಕೆ ಮಾಡಬಾರದೆಂದು ಅಧಿಕಾರಿಗಳು ವ್ಯಾಪಾರಿಗಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಉಪಮೇಯರ್ ಆನಂದ್, ಜಂಟಿ ಆಯುಕ್ತ ಸರ್ಫರಾಜ್‍ಖಾನ್, ಹಿರಿಯ ಅಧಿಕಾರಿ ಯತೀಶ್‍ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin