ವಾರಣಾಸಿಯಲ್ಲಿ ಭಾರಿ ಸ್ಫೋಟ : ಇಬ್ಬರು ಮಹಿಳೆಯರು ಮೂವರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Varanasi

ವಾರಣಾಸಿ, ಅ.26– ಮನೆಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಿಂದ ಇಬ್ಬರು ಮಹಿಳೆಯರೂ ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟು, ಕೆಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ನಿನ್ನೆ ತಡರಾತ್ರಿ ವಾರಣಾಸಿಯ ಸಿಗ್ರಾ ಪೊಲೀಸ್ ಠಾಣೆ ವ್ಯಾಪ್ತಿಯ ಪಿತರ್‍ಕುಂಡ ಬಡಾವಣೆಯಲ್ಲಿ ನಡೆದಿದೆ. ಘಟನೆಯಿಂದಾಗಿ ಈ ಪ್ರದೇಶದಲ್ಲಿ ಕೆಲಕಾಲ ಭೀತಿಯ ವಾತಾವರಣ ಸೃಷ್ಟಿಯಾಗಿತ್ತು. ಸ್ಫೋಟದ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಪಡೆಗಳೊಂದಿಗೆ ಸ್ಥಳಕ್ಕೆ ಧಾವಿಸಿದ ವರಿಷ್ಠಾಧಿಕಾರಿ ನಿತೀನ್ ತಿವಾರಿ ಸ್ಥಳ ಪರಿಶೀಲನೆ ನಡೆಸಿದರು. ಇದು ಭಯೋತ್ಪಾದಕರ ಕೃತ್ಯವಲ್ಲ ಎಂದು ಸ್ಪಷ್ಟಪಡಿಸಿದರು.

ಮನೆಯಲ್ಲಿ ಅಕ್ರಮವಾಗಿ ಪಟಾಕಿ ತಯಾರಿಸಲಾಗುತ್ತಿತ್ತು. ಸಿಡಿಮದ್ದುಗಳು ಮತ್ತು ಬಾಣ-ಬಿರುಸುಗಳನ್ನು ದಾಸ್ತಾನು ಮಾಡಲಾಗಿದ್ದ ಸ್ಥಳಕ್ಕೆ ಬೆಂಕಿ ತಗುಲಿ ಭಾರೀ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಮತ್ತು ಮತ್ತೊಬ್ಬ ವ್ಯಕ್ತಿ ಮೃತಪಟ್ಟಿದ್ದು, ಇನ್ನಿಬ್ಬರು ಮಹಿಳೆಯರು ತೀವ್ರ ಗಾಯಗೊಂಡಿದ್ದರೆ ಎಂದು ಎಸ್ಪಿ ತಿಳಿಸಿದ್ದಾರೆ. ಸ್ಫೋಟದ ತೀವ್ರತೆಗೆ ಮನೆ ಬಹುತೇಕ ಧ್ವಂಸಗೊಂಡಿದ್ದು, ಪಕ್ಕದ ಸ್ಮಶಾನದ ಗೋಡೆಯೂ ಉರುಳಿ ಬಿದ್ದಿದೆ. ಈ ದುರಂತದಲ್ಲಿ ಮೃತಪಟ್ಟವರನ್ನು ಮನೆಯ ಒಡತಿ ಶಬನಂ(50), ಯುವತಿ ಮಂಟಶಾ(18), ಮತ್ತು ಸರ್ಫರಾಜ್ ಎಂದು ಗುರುತಿಸಲಾಗಿದೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ.

ಉತ್ತರ ಪ್ರದೇಶದ ನಯಾ ಬಜಾರ್ ಪ್ರದೇಶದಲ್ಲಿ ನಿನ್ನೆ ಬೆಳಿಗ್ಗೆ ಪಟಾಕಿಯಿಂದ ಸ್ಫೋಟ ಸಂಭವಿಸಿ ಮುತಾಲಿಕ್ ಮಿರ್ಜಾ ಎಂಬ ಕಾರ್ಮಿಕ ಅಸುನೀಗಿ, ಐವರು ಗಾಯಗೊಂಡಿದ್ದರು.  ತಮಿಳುನಾಡಿನ ಶಿವಕಾಶಿಯ ಪಟಾಕಿ ತಯಾರಿಕಾ ಘಟಕವೊಂದರಲ್ಲಿ ಮೂರು ದಿನಗಳ ಹಿಂದಷ್ಟೇ ಸ್ಫೋಟದಿಂದ 9 ಮಂದಿ ಮೃತಪಟ್ಟಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin