ವಾರ್ಡ್‍ರೋಬ್‍ನಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣಕ್ಕೆ ಹೊಸ ಟ್ವಿಸ್ಟ್, ಬಯಲಾಯ್ತು ರಹಸ್ಯ

ಈ ಸುದ್ದಿಯನ್ನು ಶೇರ್ ಮಾಡಿ

Kengeri-Murder

ಬೆಂಗಳೂರು, ಮೇ 14– ಕೆಂಗೇರಿ ಠಾಣೆ ವ್ಯಾಪ್ತಿಯ ಮನೆಯೊಂದರ ವಾರ್ಡ್‍ರೋಬ್‍ನಲ್ಲಿ ಅಸ್ಥಿಪಂಜರ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದಿದ್ದು, ಅನ್ನ ಬಿಸಾಡಿದ್ದಕ್ಕೆ ಮಗಳೇ ತಾಯಿಯನ್ನು ಕೊಲೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. 2016ರ ಆಗಸ್ಟ್ ತಿಂಗಳಲ್ಲೆ ವೃದ್ಧೆ ಶಾಂತಕುಮಾರಿ(62) ಅವರ ಕೊಲೆ ನಡೆದಿರುವುದು ಸಹ ಪೊಲೀಸರ ತನಿಖೆಯಿಂದ ಗೊತ್ತಾಗಿದೆ.  ಮಗ ಸಂಜಯ್ ಹೊರಗಿನಿಂದ ತಂದಿದ್ದ ಊಟ ತಿನ್ನಲು ಕೊಟ್ಟಾಗ ವೃದ್ಧೆ ಶಾಂತಕುಮಾರಿ ಅದನ್ನು ಬಿಸಾಡಿದ್ದರು. ಇದರಿಂದ ಕೋಪಗೊಂಡ ಮಗಳು ಶಶಿಕಲಾ ಲಟ್ಟಣಿಗೆಯಿಂದ ತಾಯಿ ತಲೆಗೆ ಹೊಡೆದಿದ್ದಾಳೆ.ಪೆಟ್ಟಿನಿಂದ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವು ಆಗಿದ್ದು, ಮರುದಿನ ಅಜ್ಜಿ ಶಾಂತಕುಮಾರಿ ಮೃತಪಟ್ಟಿದ್ದಾರೆ. ಗಾಯಗೊಂಡ ತಾಯಿಯನ್ನು ಶಶಿಕಲಾ ಆಸ್ಪತ್ರೆಗೆ ದಾಖಲಿಸಿರಲಿಲ್ಲ.  ರಕ್ತಸ್ರಾವದಿಂದಾಗಿ ವೃದ್ಧೆ ಮೃತಪಟ್ಟಿದ್ದರಿಂದ ತಾಯಿ, ಮಗ ಹೆದರಿದ್ದರು ಎಂದು ಪೊಲೀಸರ ಬಂಧನದಲ್ಲಿರುವ ಸಂಜಯ್‍ನ ಸ್ನೇಹಿತ ನಂದೀಶ್ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ. ನಂದೀಶ್‍ನನ್ನು ಕರೆಸಿಕೊಂಡ ಶಶಿಕಲಾ ಅಜ್ಜಿ ಶವವನ್ನು ಹೊರಗೆ ತೆಗೆದುಕೊಂಡು ಹೋದರೆ ಅಕ್ಕ-ಪಕ್ಕದವರಿಗೆ, ಪೊಲೀಸರಿಗೆ ವಿಷಯ ಗೊತ್ತಾಗುತ್ತದೆ ಎಂದು ಮನೆಯಲ್ಲೇ ಶವ ಹೂಳಲು ಪ್ಲಾನ್ ಮಾಡಿದ್ದಾರೆ.

ಶವ ಹೂಳಲು ನಂದೀಶ್ ಮಣ್ಣು, ಡ್ರಮ್ ತಂದಿದ್ದ. ಅದರಲ್ಲಿ ಶವ ಹಾಕಲು ಸಾಧ್ಯವಾಗದೆ ವಾರ್ಡ್‍ರೋಬ್‍ನಲ್ಲಿ ಹೂಳಲು ಪ್ಲಾನ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಾರ್ಡ್‍ರೋಬ್‍ನಲ್ಲಿ ಶವ ಇಟ್ಟು ಶಿರ್ಕೆ ಬಳಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಿಂದ ತಂದಿದ್ದ ಮಣ್ಣು, ಇದ್ದಿಲು ಹಾಕಿ ಬಾಗಿಲು ಮುಚ್ಚಿ ಟೇಪ್‍ನಿಂದ ಸುತ್ತಿ ವಾಸನೆ ಹೊರಗೆ ಬರದಂತೆ ನೋಡಿಕೊಂಡಿದ್ದಾರೆ. ಶವದ ಮಾಂಸ ಕೊಳೆತ ನಂತರ ಮೂಳೆಗಳನ್ನು ಬಿಸಾಕಲು ಸಂಚು ರೂಪಿಸಿ ರೂಮ್‍ಗೆ ಬೀಗ ಹಾಕಿ ತಾಯಿ, ಮಗ ಅದೇ ಮನೆಯಲ್ಲೇ ವಾಸವಿದ್ದಾರೆ.

ಆದರೆ, ಫೆಬ್ರವರಿ ತಿಂಗಳ ಹೊತ್ತಿಗೆ ವಾಸನೆ ಹೆಚ್ಚಾಗಿದ್ದರಿಂದ ತಾಯಿ-ಮಗ ಮನೆ ಬಿಟ್ಟು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಾಯಿ ಶಶಿಕಲಾ, ಮಗ ಸಂಜಯ್ ತಲೆ ಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ. ಕೊಲೆ ಪ್ರಕರಣ ಮುಚ್ಚಿಡಲು ನೆರವಾದ ಸ್ನೇಹಿತ ಸಂಜಯ್‍ನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸಿಪಿ ಅನುಚೇತ್ ಮಾರ್ಗದರ್ಶನ, ಎಸಿಪಿ ಸಜೀತ್ ಅವರ ನೇತೃತ್ವದಲ್ಲಿ ಕೆಂಗೇರಿ ಠಾಣೆ ಇನ್ಸ್‍ಪೆಕ್ಟರ್ ಗಿರಿರಾಜ್, ಪಿಎಸ್‍ಐಗಳಾದ ಮಲ್ಲಿಕಾರ್ಜುನ್, ನಂಜುಂಡಸ್ವಾಮಿ, ಜನಾರ್ಧನ್ ಮತ್ತು ಸಿಬ್ಬಂದಿ ನಂದೀಶ್‍ನನ್ನು ಬಂಧಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin