ವಾರ್ಧಾ ಎಫೆಕ್ಟ್ : ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನಜೀವನ ಏರುಪೇರು

ಈ ಸುದ್ದಿಯನ್ನು ಶೇರ್ ಮಾಡಿ

Vardah-x1

ಬೆಂಗಳೂರು, ಡಿ.13-ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮುಂತಾದ ಜಿಲ್ಲೆಗಳಲ್ಲಿ ವಾರ್ಧಾಹ್ ಚಂಡಮಾರುತದ ಪರಿಣಾಮ ಜನಜೀವನ ಅಸ್ತವ್ಯಸ್ತವಾಗಿದೆ. ನಿನ್ನೆ ರಾತ್ರಿಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಮಾರುಕಟ್ಟೆಯು ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ಬಿಸಿಲಿನ ಬೇಗೆಯಿಂದ ಬೇಯುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಗೆ ವಾರ್ಧಾಹ್ ಚಂಡಮಾರುತ ತಂಪನೆರೆದಿತ್ತು. ವಾರ್ಧಾಹ್ ಚಂಡಮಾರುತಕ್ಕೆ ಚಿಕ್ಕಬಳ್ಳಾಪುರ ನಗರ ಹೊರವಲಯದ ವಾಕ್ಸಂದ್ರ ಬಳಿ ನೂತನವಾಗಿ ನಿರ್ಮಿಸುತ್ತಿದ್ದ ಶೆಡ್‍ಗಳ ಮೇಲ್ಛಾವಣಿ ಹಾರಿ 66 ಕೆ.ವಿ. ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು ಧರೆಗುರುಳಿವೆ.

ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಯಾವುದೇ ಅನಾಹುತ ಸಂಭವಿಸಿಲ್ಲ. ತುಮಕೂರಿನಲ್ಲಿ ಅತಿಯಾದ ಶೀತಗಾಳಿಯಿಂದ ಜನ ನಡುಗಿಹೋಗಿದ್ದಾರೆ. ಒಂದು ರೀತಿಯಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಪೆಟ್ರೋಲ್ ಬಂಕ್, ಅಂಗಡಿಗಳು ಖಾಲಿ ಹೊಡೆಯುತ್ತಿವೆ. ಜನ ಮನೆಯಿಂದ ಹೊರಬಂದಿಲ್ಲ.  ಚಿತ್ರದುರ್ಗದಲ್ಲಿ ಕೆಲ ಖಾಸಗಿ ಶಾಲೆಗಳು ಸರ್ಕಾರದ ಆದೇಶ ಧಿಕ್ಕರಿಸಿ ಶಾಲೆಗಳನ್ನು ನಡೆಸುತ್ತಿದ್ದುದು ಕಂಡುಬಂತು. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ವಾರ್ಧಾಹ್ ಚಂಡಮಾರುತದಿಂದ ಜನ ತತ್ತರಿಸಿಹೋಗಿದ್ದರು. ಪ್ರವಾಸಿ ತಾಣಗಳಲ್ಲಿ ಜನ ವಿರಳವಾಗಿದ್ದರು. ಮನೆಯಿಂದ ಹೊರಬರದಿರುವುದರಿಂದ ಓಡಾಟ ವಿರಳವಾಗಿತ್ತು. ಸದಾ ಜನಜಂಗುಳಿಯಿಂದ ಗಿಜಿಗುಡುತ್ತಿದ್ದ ಮೈಸೂರು ಅರಮನೆ, ಮೃಗಾಲಯ, ಚಾಮುಂಡಿ ಬೆಟ್ಟ ಅನೇಕ ಪ್ರವಾಸಿತಾಣಗಳು ಬಿಕೋ ಎನ್ನುತ್ತಿದ್ದವು.

Vardah-x2

ಕೋಲಾರ ಜಿಲ್ಲೆಯಾದ್ಯಂತ ನಿನ್ನೆಯಿಂದ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು. ಜಿಲ್ಲೆ ಗಡಿಭಾಗದ ಮುಳಬಾಗಿಲು ತಾಲೂಕಿನ ಹಲವಾರು ಗ್ರಾಮಗಳಲ್ಲಿ ಬಿರುಗಾಳಿಯಿಂದ ವಿದ್ಯುತ್ ಕಂಬಗಳು ಉರುಳಿ ಬಿದ್ದಿದ್ದವು. ಯಾವುದೇ ಅನಾಹುತಗಳು ಸಂಭವಿಸಿಲ್ಲ. ತಾಲೂಕಿನ ಚದುಮನಹಳ್ಳಿ ಸುತ್ತ ವಿದ್ಯುತ್ ಕಂಬಗಳು, ಮರಗಳು ಉರುಳಿ ಬಿದ್ದ ಪರಿಣಾಮ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಸ್ಥಳಕ್ಕಾಗಮಿಸಿದ ಚೆಸ್ಕಾಂ ಅಧಿಕಾರಿಗಳು ಕಂಬಗಳನ್ನು ತೆರವುಗೊಳಿಸಿದ್ದಾರೆ. ಯಾವುದೇ ಪ್ರಾಣಾಪಾಯಗಳು ಉಂಟಾಗಿಲ್ಲ. ಇನ್ನು ಎರಡು ದಿನಗಳ ಕಾಲ ಮಳೆಯ ಮುನ್ಸೂಚನೆ ಇರುವುದರಿಂದ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಹವಾಮಾನ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಮಂಡ್ಯದಲ್ಲೂ ಕೂಡ ವಾರ್ಧಾಹ್ ಚಂಡಮಾರುತ ಪರಿಣಾಮ ಬೀರಿದೆ. ನಿನ್ನೆಯಿಂದ ಮಳೆ ಸುರಿಯುತ್ತಿದೆ. ಮಳೆ ಜೋರಾಗಿಲ್ಲದಿದ್ದರೂ ಜಿಟಿಜಿಟಿ ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ದೈನಂದಿನ ಕೆಲಸಗಳಿಗೆ ಅಡ್ಡಿಯಾಗಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin