ವಿಕೃತಕಾಮಿ ಉಮೇಶ್ ರೆಡ್ಡಿ ನೇಣಿಗೆ ದಿನಗಣನೆ

ಈ ಸುದ್ದಿಯನ್ನು ಶೇರ್ ಮಾಡಿ

Umesh-Reddy

ಬೆಂಗಳೂರು, ಅ.16- ಮರಣ ದಂಡನೆಗೆ ಗುರಿಯಾಗಿ ಸಾವಿಗೆ ಸನಿಹವಾಗುತ್ತಿರುವ ವಿಕೃತಕಾಮಿ ಉಮೇಶ್ ರೆಡ್ಡಿ ತನ್ನ ತಾಯಿಯೊಂದಿಗೆ ಮಾತನಾಡಿ ನಿನ್ನ ಮಗ ಅಪಘಾತದಲ್ಲಿ ಮೃತಪಟ್ಟನೆಂದು ತಿಳಿದುಕೊ ಎಂದು ಹೇಳಿದ್ದಾನೆ.  ಬದುಕುವ ಎಲ್ಲ ಅವಕಾಶದ ಬಾಗಿಲುಗಳನ್ನು ಉಮೇಶ್ ರೆಡ್ಡಿ ಕಳೆದು ಕೊಂಡಿದ್ದು, ಎಲ್ಲ ನ್ಯಾಯಾಲಯಗಳು ಈತನ ಶಿಕ್ಷೆಯನ್ನು ಎತ್ತಿ ಹಿಡಿದಿವೆ. ರಾಷ್ಟ್ರಪತಿಯವರು ಕೂಡ ಇವರಿಗೆ ಕ್ಷಮಾದಾನವನ್ನು ನಿರಾಕರಿಸಿದ್ದಾರೆ. ಹಾಗಾಗಿ ಇವನಿಗೆ ಗಲ್ಲು ಶಿಕ್ಷೆಯಾಗುವುದು ಖಚಿತವಾಗಿದೆ. ಇತ್ತ ಬೆಳಗಾವಿಯ ಇಂಡಲ ಜೈಲಿನಲ್ಲಿರುವ ಈತ ದೇವರ ಮೊರೆ ಹೋಗಿದ್ದಾನೆ. ಎಲ್ಲವೂ ದೇವರ ಇಚ್ಛೆಯಂತೆ ಆಗಲಿ ಎಂದು ಅಧಿಕಾರಿಗಳಿಗೆ ತಿಳಿಸಿದ್ದಾನೆ.

ಸುಮಾರು 20ಕ್ಕೂ ಹೆಚ್ಚು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಉಮೇಶ್ ರೆಡ್ಡಿ ನಾಸ್ತಿಕನಾಗಿದ್ದ. ನಿನ್ನೆಯಿಂದ ಆಸ್ತಿಕನಾಗಿದ್ದಾನೆ. ಜೈಲಿನಲ್ಲಿ ದೇವರನ್ನು ಪ್ರಾರ್ಥಿಸತೊಡಗಿದ್ದಾನೆ.  ಈತನಿಗೆ ನೀಡಿದ್ದ ಗಲ್ಲು ಶಿಕ್ಷೆ ರದ್ದುಪಡಿಸುವಂತೆ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಸಿದ್ದ ಪುನರ್‍ಪರಿಶೀಲನಾ ಅರ್ಜಿ ತಿರಸ್ಕರಿಸಿದ್ದ ಆದೇಶದ ಪ್ರತಿಯನ್ನು ನೀಡಲಾಗಿದೆ. ಮರಣದಂಡನೆ ವಿಧಿಸುವ ಕಾಲ ಸಮೀಪಿಸುತ್ತಿದೆ. ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸಲು ಬೆಂಗಳೂರಿನ 61ನೇ ಅಡಿಷನಲ್ ಸಿಟಿ ಸಿವಿಲ್ ನ್ಯಾಯಾಲಯ ಬ್ಲಾಕ್ ವಾರೆಂಟ್ ಹೊರಡಿಸಬೇಕು. ವಾರೆಂಟ್ ಪಡೆಯಲು ಬೆಳಗಾವಿ ಜೈಲು ಅಧೀಕ್ಷಕರಾದ ಟಿ.ಶೇಷ ಅವರು ನಗರಕ್ಕೆ ಆಗಮಿಸಿದ್ದಾರೆ.

ಮರುಪರಿಶೀಲನಾ ಅರ್ಜಿ ತಿರಸ್ಕøತಗೊಂಡ 14 ದಿನಗಳ ಒಳಗೆ ಬ್ಲಾಕ್ ವಾರೆಂಟ್ ಹೊರಡಿಸಬೇಕು. ಇನ್ನು ನಾಳೆ ಮತ್ತೆ ಉಮೇಶ್ ರೆಡ್ಡಿ ಪರ ವಕೀಲರು ಮತ್ತೊಮ್ಮೆ ಮರುಪರಿಶೀಲನಾ ಅರ್ಜಿ ಸಲ್ಲಿಸುವ ಸಾಧ್ಯತೆಯಿದ್ದು, ಇದು ರೆಡ್ಡಿ ಬದುಕಿನ ಕೊನೆಯ ಪ್ರಯತ್ನವಾಗಿದೆ.  ಕೆಲವೇ ದಿನಗಳಲ್ಲಿ ಉಮೇಶ್ ರೆಡ್ಡಿಯನ್ನು ಗಲ್ಲಿಗೇರಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ ಎಂದು ಇಂಡಲಗ ಜೈಲಿನ ಅಧಿಕಾರಿಗಳ ಮೂಲಗಳಿಂದ ತಿಳಿದುಬಂದಿದೆ. ರೆಡ್ಡಿ ಸಂಬಂಧಿಕರಿಗೆ ಎಲ್ಲ ಮಾಹಿತಿಗಳನ್ನು ರವಾನಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin