ವಿಕೃತಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆಗೆ ಹೈಕೋರ್ಟ್ ತಡೆಯಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

Umesh-Reddy
ಬೆಂಗಳೂರು, ಅ.20- ವಿಕೃತಕಾಮಿ ಮತ್ತು ಸರಣಿ ಹಂತಕ ಉಮೇಶ್ ರೆಡ್ಡಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಗೆ ಹೈಕೋರ್ಟ್ ವಿಭಾಗೀಯ ಪೀಠ ಇಂದು ಮಧ್ಯಂತರ ತಡೆಯಾಜ್ಞೆ ನೀಡಿದೆ. ನೇಣು ಶಿಕ್ಷೆಯನ್ನು ಜೀವಾವಧಿ ಸಜೆಯನ್ನಾಗಿ ಪರಿವರ್ತಿಸುವಂತೆ ಕೋರಿ ರೆಡ್ಡಿ ಸಲ್ಲಿಸಿರುವ ರಿಟ್ ಅರ್ಜಿಗೆ ಇದರೊಂದಿಗೆ ಮರುಜೀವ ಬಂದಂತಾಗಿದೆ.  ನಗರದ ಯಲಹಂಕದಲ್ಲಿ ಫೆ.28, 1998ರಲ್ಲಿ ಜಯಶ್ರೀ ಮರಡಿ ಸುಬ್ಬಯ್ಯ ಅವರ ಮೇಲೆ ನಡೆದಿದ್ದ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಮೇಶ್ ರೆಡ್ಡಿ ಅಲಿಯಾಸ್ ಬಿ.ಎ.ಉಮೇಶ್‍ಗೆ ಮರಣದಂಡನೆ ವಿಧಿಸಲಾಗಿತ್ತು. ತನಗೆ ನೀಡಿರುವ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕೆಂದು ಕೋರಿ ರೆಡ್ಡಿ ಸಲ್ಲಿಸಿದ್ದ ಪುನರ್ ಪರಿಶೀಲನಾ ಅರ್ಜಿಯನ್ನು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ.ಮುಖರ್ಜಿ ಮತ್ತು ನ್ಯಾಯಮೂರ್ತಿ ಆರ್.ಬೂದಿಹಾಳ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಇಂದು ವಿಚಾರಣೆ ನಡೆಸಿತು.

ಉಮೇಶ್ ರೆಡ್ಡಿ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್, ಇದೊಂದು ಅತ್ಯಂತ ಸೂಕ್ಷ್ಮ ಪ್ರಕರಣ. ರೆಡ್ಡಿ ಈಗಾಗಲೇ 18 ವರ್ಷ ಆರು ತಿಂಗಳು ಶಿಕ್ಷೆ ಅನುಭವಿಸಿದ್ದಾನೆ. 10 ವರ್ಷಕ್ಕೂ ಹೆಚ್ಚು ಕಾಲ ಏಕಾಂತ ಶಿಕ್ಷೆಗೆ ಒಳಗಾಗಿದ್ದಾನೆ ಎಂಬ ಅಂಶಗಳನ್ನು ಪೀಠದ ಮುಂದೆ ಮಂಡಿಸಿದರು.  ಶಿಕ್ಷೆಗೆ ಒಳಗಾದ ಸಮಯದಲ್ಲಿ ಆತ ಸಾಕಷ್ಟು ಮಾನಸಿಕ ಕ್ಷೋಭೆಗೆ ಒಳಗಾಗಿದ್ಧಾನೆ. ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿದ್ದ ಅರ್ಜಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ತಿರಸ್ಕರಿಸಿದ್ದಾರೆ. ಕ್ಷಮದಾನ ಅರ್ಜಿ ವಿಲೇವಾರಿಯಲ್ಲಿ ಎರಡರಿಂದ ಮೂರು ವರ್ಷಗಳ ಕಾಲ ವಿಳಂಬವಾಗಿದೆ. ಹೀಗಾಗಿ ಗಲ್ಲು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಪ್ರೊ.ರವಿವರ್ಮ ಕುಮಾರ್ ವಾದಿಸಿದರು.

ಇದನ್ನು ಪರಿಗಣಿಸಿದ ಪೀಠವು ಉಮೇಶ್‍ರೆಡ್ಡಿ ಗಲ್ಲು ಶಿಕ್ಷೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಲ್ಲದೇ ಉಮೇಶ್ ರೆಡ್ಡಿ ಸಲ್ಲಿಸಿರುವ ರಿಟ್ ಅರ್ಜಿಗೆ 10 ದಿನಗಳ ಒಳಗಾಗಿ ಆಕ್ಷೇಪಣೆ ಸಲ್ಲಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.

ಹಿನ್ನೆಲೆ :
ಬೆಂಗಳೂರು ನಗರ ತ್ವರಿತ ನ್ಯಾಯಾಲವು 26ನೇ ಅಕ್ಟೋಬರ್, 2006ರಂದು ಜಯಶ್ರೀ ಸುಬ್ಬಯ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಸೇರಿದಂತೆ ಇತರ 9 ಪ್ರಕರಣಗಳಲ್ಲಿ ಮರಣದಂಡನೆ, 25,000 ರೂ. ದಂಡ ವಿಧಿಸಿತ್ತು. ತನ್ನ ತಾಯಿಯ ಆರೋಗ್ಯ ನೋಡಿಕೊಳ್ಳುವ ಹೊಣೆ ತನ್ನ ಮೇಲಿರುವುದರಿಂದ ಅನುಕಂಪ ತೋರುವಂತೆ ರೆಡ್ಡಿ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ ನ್ಯಾಯಮೂರ್ತಿ ಕೆ.ಸುಕನ್ಯ ಅವರು ಈ ಮನವಿಯನ್ನು ನಿರಾಕರಿಸಿದ್ದರು. ಈ ಪ್ರಕರಣ ಹೈಕೋರ್ಟ್ ಮೆಟ್ಟಿಲೆರಿತ್ತು. 4ನೇ ಅಕ್ಟೋಬರ್ 2007ರಂದು ಹೈಕೋರ್ಟ್ ನ್ಯಾಯಮೂರ್ತಿ ವಿ.ಜಿ. ಸಭಾಹಿತ್ ಮರಣ ದಂಡನೆ ಶಿಕ್ಷೆಯನ್ನು ಎತ್ತಿಹಿಡಿದಿತ್ತು. ಆದರೆ ಮತ್ತೊಬ್ಬ ನ್ಯಾಯಮೂರ್ತಿ ರವಿ ಬಿ.ನಾಯಕ್ ಜೀವಾವಧಿ ಶಿಕ್ಷೆ ತೀರ್ಪು ನೀಡಿದ್ದರು. ಈ ಬಗ್ಗೆ ಒಮ್ಮತದ ತೀರ್ಪಿಗಾಗಿ ನ್ಯಾಯಮೂರ್ತಿ ಎಸ್.ಆರ್.ಬನ್ನೂರುಮಠ ಅವರನ್ನು ನೇಮಕ ಮಾಡಲಾಗಿತ್ತು. 18ನೇ ಅಕ್ಟೋಬರ್, 2009ರಂದು ನ್ಯಾ. ಬನ್ನೂರುಮಠ ಅವರು ಗಲ್ಲು ಶಿಕ್ಷೆ ತೀರ್ಪನ್ನು ಎತ್ತಿ ಹಿಡಿದರು. 1ನೇ ಫೆಬ್ರವರಿ 2011ರಂದು ಸುಪ್ರಿಂಕೋರ್ಟ್ ಸಹ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು. ರಾಜ್ಯ ಸರ್ಕಾರದಿಂದ ಕ್ಷಮಾದಾನ ನಿರಾಕರಿಸಲ್ಪಟ್ಟ ನಂತರ ರೆಡ್ಡಿ ರಾಷ್ಟ್ರಪತಿಗಳ ಮೊರೆ ಹೋಗಿದ್ದ. 12ನೇ ಮೇ 2103ರಂದು ರಾಷ್ಟ್ರಪತಿಯವರು ರೆಡ್ಡಿಯ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು.

ವಿಕೃತಕಾಮಿ ಉಮೇಶ್ ರೆಡ್ಡಿ-ಈ ಹೆಸರು ಕೇಳಿದರೆ ಇಡೀ ಕರ್ನಾಟಕ ರಾಜ್ಯವೇ ಬೆಚ್ಚಿ ಬೀಳುತ್ತಿತ್ತು. ಸರಣಿ ರೇಪಿಸ್ಟ್ ಮತ್ತು ಕಿಲ್ಲರ್‍ನ ಭೀಭತ್ಸ ಕೌರ್ಯಕ್ಕೆ 20 ಮಹಿಳೆಯರು ಬಲಿಯಾದರು. ಕರ್ನಾಟಕ, ಮಹಾರಾಷ್ಟ್ರ ಮತ್ತು ಗುಜರಾತ್ ರಾಜ್ಯಗಳು ಈತನ ಕಾರಾಸ್ಥಾನವಾಗಿದ್ದವು. ತಾನು 18 ಕೊಲೆಗಳನ್ನು ಮಾಡಿರುವುದಾಗಿ ಸ್ವತಃ ರೆಡ್ಡಿಯೇ ಒಪ್ಪಿಕೊಂಡಿದ್ದ. 9 ಪ್ರಕರಣಗಳಲ್ಲಿ ಆತ ಶಿಕ್ಷೆಗೆ ಒಳಗಾಗಿದ್ದ. ವಿಕೃತ ಕಾಮಿಯ ಕಾಮತೃಷೆಗೆ ಒಳಗಾದ ಇನ್ನೂ ಅದೆಷ್ಟೋ ಪ್ರಕರಣಗಳು ಬೆಳಕಿಗೆ ಬಂದೇ ಇಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin