ವಿಚ್ಛಿದ್ರಕಾರಿ ಶಕ್ತಿಗಳೊಂದಿಗೆ ಹೋರಾಡುವ ಮೂಲಕ ಇಂದಿರಾಗೆ ಗೌರವ ಸಲ್ಲಿಸಬೇಕು : ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ

CM-Indira--02

ಬೆಂಗಳೂರು, ನ.19-ದೇಶದ ಏಕತೆ, ಸಮಗ್ರತೆ ಹಾಗೂ ಭಾವೈಕ್ಯತೆಗಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರಿಗೆ ದೇಶದ ವಿಚ್ಛಿದ್ರಕಾರಿ ಶಕ್ತಿಗಳ ವಿರುದ್ಧ ಹೋರಾಡುವ ಮೂಲಕ ಗೌರವ ಸಲ್ಲಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ. ನಗರದ ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಇಂದಿರಾಗಾಂಧಿ ಅವರ 100ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇಂದಿರಾಗಾಂಧಿ ಅವರು ಬ್ಯಾಂಕ್‍ಗಳ ರಾಷ್ಟ್ರೀಕರಣ ಮಾಡಿ ಬಡವರಿಗಾಗಿ ಬಾಗಿಲು ತೆರೆದಿದ್ದರೆ ಈಗ ಪ್ರಧಾನಿ ನರೇಂದ್ರ ಮೋದಿಯವರು ನೋಟು ಅಮಾನ್ಯ ಮಾಡಿ ಬಡವರ ಪಾಲಿಗೆ ಬ್ಯಾಂಕ್ ಬಾಗಿಲುಗಳನ್ನು ಮುಚ್ಚಿದರು ಎಂದು ವ್ಯಂಗ್ಯವಾಡಿದರು.

ಜಿಎಸ್‍ಟಿ ಜಾರಿಗೆ ತರುವ ಪ್ರಯತ್ನ ಯುಪಿಎ ಸರ್ಕಾರದ ಅವಧಿಯಲ್ಲೇ ನಡೆದಿತ್ತು. ಜಿಎಸ್‍ಟಿ ದರ ಇಳಿಕೆ ಮಾಡಲು ನಮ್ಮ ಹೋರಾಟ ಇದೆ ಎಂದು ಹೇಳಿದರು.
ದೇಶಕ್ಕಾಗಿ ಪ್ರಾಣ ತೆತ್ತ ಇಂದಿರಾಗಾಂಧಿ ಮಹಾನ್ ನಾಯಕಿಯಾಗಿದ್ದು , ಅವರ ಹೆಸರಿನಲ್ಲಿ ಅವರಿಗೆ ಪ್ರಿಯವಾಗಿದ್ದ ಬಡವರ ಹಸಿವು ನೀಗಿಸುವ ಕಾರ್ಯಕ್ರಮವಾಗಿ ರಾಜ್ಯಾದ್ಯಂತ 500 ಇಂದಿರಾ ಕ್ಯಾಂಟೀನ್‍ಗಳನ್ನು ಜ.1ರಿಂದ ಪ್ರಾರಂಭಿಸಲಾಗುವುದು ಎಂದರು.  ಬಡವರಿಗೆ ನ್ಯಾಯ, ದುರ್ಬಲ ವರ್ಗದವರಿಗೆ ಶಕ್ತಿ, ಅಲ್ಪಸಂಖ್ಯಾತರಿಗೆ ರಕ್ಷಣೆಯಾಗಿದ್ದವರು ಇಂದಿರಾಗಾಂಧಿ. ಗರೀಭಿ ಹಠಾವೋ ಘೋಷಣೆಯನ್ನು ದೇಶಕ್ಕೆ ಮೊದಲು ಕೊಟ್ಟ ನಾಯಕಿ. ಸಮಸಮಾಜ ನಿರ್ಮಾಣದ ಕನಸು ಕಂಡಿದ್ದರು. ಅಲ್ಪಸಂಖ್ಯಾತರಿಗೆ 15 ಅಂಶದ ಕಾರ್ಯಕ್ರಮವನ್ನು ನೀಡಿದ್ದರು ಎಂದು ಸ್ಮರಿಸಿದರು.

ನಮ್ಮ ಸರ್ಕಾರ ಇಂದಿರಾಗಾಂಧಿ ಅವರ ಗರೀಭಿ ಹಠಾವೋ ಘೋಷಣೆಯಿಂದ ಸ್ಫೂರ್ತಿ ಪಡೆದು ಹಸಿವು ಮುಕ್ತ ಕರ್ನಾಟಕ ಮಾಡಲು ಮುಂದಾಗಿದೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಸದಾ ಜಾಗೃತರಾಗಿರಬೇಕು. ನಮ್ಮ ರಾಷ್ಟ್ರೀಯ ನಾಯಕರೂ ಹಾಗೂ ಮಾಜಿ ಪ್ರಧಾನಿಗಳಾದ ಜವಹಾರ್‍ಲಾಲ್ ನೆಹರೂ, ರಾಜೀವ್ ಗಾಂಧಿ, ಇಂದಿರಾಗಾಂಧಿ ಅವರು ರಾಷ್ಟ್ರಕ್ಕಾಗಿ ಮಾಡಿರುವ ತ್ಯಾಗವನ್ನು ಸ್ಮರಿಸಬೇಕು. ಕಾಂಗ್ರೆಸ್ ಪಕ್ಷದ ಬುನಾದಿ ಇಂಥವರ ತ್ಯಾಗ ಬಲಿದಾನದ ಮೇಲೆ ನಿಂತಿದೆ. ದೇಶದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರ ಸರ್ವರಿಗೂ ಆರೋಗ್ಯ ಭಾಗ್ಯ ನೀಡುವ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತಿದೆ ಎಂದರು.
ಚುನಾವಣಾ ವರ್ಷವಾಗಿರುವುದರಿಂದ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರಿ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು ಜೊತೆಗೆ ಬಿಜೆಪಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಿದರೆ ನಾವು ಜನರಿಗೆ ಸತ್ಯದ ಅರಿವು ಮೂಡಿಸುವ ಪ್ರಯತ್ನ ಮಾಡಬೇಕೆಂದು ಕರೆ ಮಾಡಿದರು.

ಬಿಜೆಪಿ ಅಧಿಕಾರಕ್ಕೆ ತರಬಾರದು:

ಕೋಮುವಾದಿ ಬಿಜೆಪಿಯನ್ನು ಕರ್ನಾಟಕದಲ್ಲಿ ಮತ್ತೆ ಅಧಿಕಾರಕ್ಕೆ ತರಬಾರದು. ಅವರ ಮಾತುಗಳನ್ನು ಕೇಳಲು ಆಗುವುದಿಲ್ಲ. ದೇಶದ ಸಂಸ್ಕøತಿ ಬಗ್ಗೆ ಮಾತನಾಡುವ ಬಿಜೆಪಿಯವರದು ಪೈಶಾಚಿಕ ನಡವಳಿಕೆ ಎಂದು ಟೀಕಿಸಿದರು.  ಬಿಜೆಪಿ ನಾಯಕರಾದ ಅನಂತಕುಮಾರ್ ಹೆಗಡೆ, ಕೆ.ಎಸ್.ಈಶ್ವರಪ್ಪ , ಬಿ.ಎಸ್.ಯಡಿಯೂರಪ್ಪ ಹಾಗೂ ಶೋಭಾ ಕರಂದ್ಲಾಜೆ ಅವರಿಗೆ ರಾಜಕೀಯದಲ್ಲಿ ಇರಲು ಅರ್ಹತೆಯೇ ಇಲ್ಲ. ಬಿಜೆಪಿಯವರು ಮನುಷ್ಯತ್ವವಿಲ್ಲದರು ಎಂದು ವಾಗ್ದಾಳಿ ನಡೆಸಿದರು.  ಬಿಜೆಪಿಯವರದು ಡೋಂಗಿತನವಾದರೆ, ಕೋಮು ಸಾಮರಸ್ಯ ನಿರ್ಮಾಣ ಮಾಡುವುದು ನಮ್ಮ ಕೆಲಸ. ಸಮಾಜ ಒಡೆಯುವ ಕೆಲಸ ಬಿಜೆಪಿಯದು ಎಂದು ಆರೋಪಿಸಿದರು.

ಬಿಜೆಪಿಯವರು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಹೇಳುತ್ತಾರೆ. ಆದರೆ ಕಾಂಗ್ರೆಸ್ ಪಕ್ಷದ ಬದ್ಧತೆ ಹಸಿವು ಮುಕ್ತ ಕರ್ನಾಟಕ ಮಾಡುವುದು. ಕೋಮುವಾದಿ ಪಕ್ಷವಾಗಿರುವ ಬಿಜೆಪಿ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಇದಕ್ಕಾಗಿ ರಾಜ್ಯದಲ್ಲಿ ಕೋಮು-ಗಲಭೆ ಸೃಷ್ಟಿ ಸೇರಿದಂತೆ ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದರು.

Facebook Comments

Sri Raghav

Admin