ವಿಜಯನಗರದಲ್ಲಿ ಯೋಗಿ ಭಾಷಣಕ್ಕೆ ವೇದಿಕೆ ಸಿದ್ಧ

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಬೆಂಗಳೂರು, ಜ.6- ಕಾಂಗ್ರೆಸ್ ಕೋಟೆಯಾಗಿರುವ ವಿಜಯನಗರದಲ್ಲಿ ಬಿಜೆಪಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದು, ನಾಳೆ ನಡೆಯಲಿರುವ ಪರಿವರ್ತನಾ ಯಾತ್ರೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗಿಯಾಗಲಿದ್ದಾರೆ.  ಯೋಗಿ ಆದಿತ್ಯನಾಥ್ ಸ್ವಾಗತಕ್ಕೆ ಸಕಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ನವಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಎಂಸಿ ಬಡಾವಣೆಯ ಪರಮಪೂಜ್ಯ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ.

ಯಾತ್ರೆಯ ಯಶಸ್ಸಿಗೆ ಕಂಕಣ ತೊಟ್ಟಿರುವ ಬಿಜೆಪಿ ಮುಖಂಡರುಗಳು ಯಾತ್ರೆಗೆ ಸಾವಿರಾರು ಜನರನ್ನು ಆಕರ್ಷಿಸಲು ತಂತ್ರ ರೂಪಿಸುತ್ತಿದ್ದಾರೆ.
ಮಾಜಿ ಡಿಸಿಎಂ ಆರ್.ಅಶೋಕ್, ಮಾಜಿ ಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯ ವಿ.ಸೋಮಣ್ಣ, ಶಾಸಕ ಸುರೇಶ್‍ಕುಮಾರ್ ಮತ್ತಿತರರು ಕಾರ್ಯಕ್ರಮದ ಯಶಸ್ಸಿಗೆ ಪಣ ತೊಟ್ಟಿದ್ದಾರೆ. ಬಿಬಿಎಂಪಿ ಸದಸ್ಯರಾದ ಉಮೇಶ್‍ಶೆಟ್ಟಿ, ಮೋಹನ್‍ಕುಮಾರ್, ಮಾಜಿ ಮೇಯರ್ ಶಾಂತಕುಮಾರಿ, ಮಾಜಿ ಉಪಮೇಯರ್ ಲಕ್ಷ್ಮಿನಾರಾಯಣ ಮತ್ತಿತರರು ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಬೇಕೆಂಬ ಉದ್ದೇಶದಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪರಿವರ್ತನಾ ಯಾತ್ರೆ ನಾಳೆ ಗೋವಿಂದರಾಜ ನಗರಕ್ಕೆ ಆಗಮಿಸಲಿದೆ. ನಾಳೆ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ಬಿಜೆಪಿಯ ಘಟಾನುಘಟಿ ನಾಯಕರುಗಳು ಪಾಲ್ಗೊಳ್ಳಲಿದ್ದು, ಕಾಂಗ್ರೆಸ್ ವಿರುದ್ಧ ವಾಕ್ಸಮರ ನಡೆಸಲಿದ್ದಾರೆ.  ಜ.28ರಂದು ನಗರದಲ್ಲಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭ ನಡೆಯಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ, ಕೇಂದ್ರ ಸಚಿವರು, ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಘಟಾನುಘಟಿ ನಾಯಕರುಗಳ ಸಮಾಗಮವಾಗಲಿದೆ.

Facebook Comments

Sri Raghav

Admin