ವಿತರಣೆಯಾಗದ ನಿವೇಶನ : ಗದ್ದಲ

ಈ ಸುದ್ದಿಯನ್ನು ಶೇರ್ ಮಾಡಿ

pandavapura-5

ಪಾಂಡವಪುರ, ಸೆ.22- ನಿವೇಶನಕ್ಕಾಗಿ ಕಳೆದ ಏಳು ವರ್ಷಗಳ ಹಿಂದೆ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘಕ್ಕೆ (ಹೌಸಿಂಗ್ ಬೋರ್ಡ್) ಮುಂಗಡ ಠೇವಣಿ ಹಣ ಸಂದಾಯ ಮಾಡಿದ್ದರೂ ತಮಗೆ ಇನ್ನೂ ನಿವೇಶನ ವಿತರಿಸಿಲ್ಲ ಎಂದು ಫಲಾನುಭವಿ ಷೇರುದಾರರು ಸಂಘದ ವಾರ್ಷಿಕ ಮಹಾಸಭೆಯಲ್ಲಿ ಕೆಲಕಾಲ ಗಲಾಟೆದಗದ್ದಲ ಎಬ್ಬಿಸಿದ ಘಟನೆ ನಡೆಯಿತು.ಪಟ್ಟಣದ ಟಿಎಪಿಸಿಎಂಎಸ್ ರೈತಸಭಾಂಗಣದಲ್ಲಿ ತಾಲೂಕು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಜಿ.ಇ.ರವಿಕುಮಾರ್ ಅಧ್ಯಕ್ಷತೆಯಲ್ಲಿ ನಿಷೇದಾಜ್ಞೆ ಯ ನಡುವೆಯೂ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ತೀವ್ರ ಚರ್ಚೆ ಹಾಗೂ ಗೊಂದಲವೇರ್ಪಟ್ಟಿತು.
ಸಂಘವು ನಿವೇಶನ ಖರೀದಿಗಾಗಿ ತಾಲೂಕಿನ ಹರಳಹಳ್ಳಿ ಹಾಗೂ ಚಂದ್ರೆ ಗ್ರಾಮಗಳ ಬಳಿ ಜಮೀನು ಖರೀದಿಸಿದ್ದು ಜಮೀನಿನ ಪೂರ್ವಾಪರ ತಿಳಿದುಕೊಳ್ಳದೆ ಲಕ್ಷಾಂತರ ರೂ. ನೀಡಿ ಕರಾರು (ಅಗ್ರೀಮೆಂಟ್) ಮಾಡಿಕೊಂಡಿದ್ದು, ಈಗ ಜಮೀನಿಗೆ ಸಂಬಂಧಪಟ್ಟ ವ್ಯಕ್ತಿಯ ಸಹೋದರ, ಸಹೋದರಿಯರು ನ್ಯಾಯಾಲಯದ ಮೆಟ್ಟಿಲೇರಿ ಜಮೀನು ಖರೀದಿಯಾಗದಂತೆ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಗಿರುವುದನ್ನು ಪ್ರಶ್ನಿಸಿ ಸಂಘದ ಷೇರುದಾರರು ತರಾಟೆಗೆ ತೆಗೆದುಕೊಂಡರು.ಉದಕ್ಕೆಲ್ಲ ಸಂಘದ ಅಧ್ಯಕ್ಷ ರವಿಕುಮಾರ್ ನೇರ ಹೊಣೆ. ನಿಮ್ಮ ಉಡಾಫೆ ಹಾಗೂ ಆಡಳಿತ ವೈಫಲ್ಯದಿಂದ ಸಂಸ್ಥೆ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ ಎಂದು ಷೇರುದಾರ ಬೀರಶೆಟ್ಟಹಳ್ಳಿ ಜೆ.ಬಾಲಗಂಗಾಧರ್ ಗಂಭೀರ ಆರೋಪ ಮಾಡಿದರು.
ಅಧ್ಯಕ್ಷ ಜಿ.ಇ.ರವಿಕುಮಾರ್ ಮಾತನಾಡಿ, ನಿವೇಶನ ಹಂಚಿಕೆ ವಿಚಾರದಲ್ಲಿರುವ ಎಲ್ಲಾ ಲೋಪ-ದೋಷಗಳನ್ನು ಸರಿಪಡಿಸಿ ಡಿಸೆಂಬರ್ ಅಂತ್ಯದೊಳಗೆ ಸಂಘದ ಫಲಾನುಭವಿ ಷೇರುದಾರರಿಗೆ ನಿವೇಶನ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ನಿವೇಶನ ವಿತರಣೆಯಲ್ಲಿನ ಲೋಪ-ದೋಷಗಳ ಬಗ್ಗೆ ನಮಗೆ ಗೊತ್ತಿಲ್ಲ. ನ.1ರೊಳಗೆ ಎಲ್ಲವನ್ನು ಸರಿಪಡಿಸಿ ಫಲಾನುಭವಿ ಷೇರುದಾರರಿಗೆ ನಿವೇಶನ ವಿತರಿಸಬೇಕು ಎಂದು ಷೇರುದಾರ ಎಚ್.ಎನ್.ಮಂಜುನಾಥ್ ಆಗ್ರಹಿಸಿದರು. ಸಂಘದ ನಿರ್ದೇಶಕರಾದ ಸಿ.ಆರ್.ರಮೇಶ್, ಬಿ.ಎಸ್.ಜಯರಾಮು, ಎಲ್.ಅಶೋಕ್, ಕೆ.ಎನ್.ವಿವೇಕ್, ಮುರಳೀಧರ್, ಹಿರೇಮರಳಿ ರಾಮೇಗೌಡ, ಅರುಣ, ನರಸಮ್ಮ, ಅಜಯಕುಮಾರ್, ಬಿ.ಟಿ.ಶಿವಣ್ಣ, ಎಸ್.ಬಿ.ಕೃಷ್ಣಯ್ಯ, ಪ್ರಭಾರ ಕಾರ್ಯದರ್ಶಿ ಎಸ್.ಕೆ.ನಿಂಗೇಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin