ವಿದೇಶದಿಂದ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಆಮದು : ಡಿಕೆಶಿ

ಈ ಸುದ್ದಿಯನ್ನು ಶೇರ್ ಮಾಡಿ

Dk-Shivakumar-Session

ಬೆಂಗಳೂರು, ಫೆ.6- ಕೇಂದ್ರ ಸರ್ಕಾರ ನಿಗದಿಯಂತೆ ವಿದ್ಯುತ್ ಘಟಕಗಳಿಗೆ ಕಲ್ಲಿದ್ದಲು ಪೂರೈಕೆ ಮಾಡದಿರುವ ಹಿನ್ನೆಲೆಯಲ್ಲಿ ವಿದೇಶದಿಂದ ಹತ್ತು ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಬೇಸಿಗೆ ಸಮೀಪಿಸುತ್ತಿರುವುದರಿಂದ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ರೀತಿಯ ವ್ಯತ್ಯಯ ಉಂಟಾಗಬಾರದೆಂಬ ಕಾರಣಕ್ಕೆ ವಿದೇಶದಿಂದ 10 ಲಕ್ಷ ಮೆಟ್ರಿಕ್  ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲಾಗುವುದು. ಈ ಸಂಬಂಧ ಈಗಾಗಲೇ ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ವಾರ ಅಥವಾ 15 ದಿನದೊಳಗೆ ಅಂತಿಮ ಪ್ರಕ್ರಿಯೆ ಮುಗಿಯಲಿದೆ ಎಂದು ತಿಳಿಸಿದರು.

ಸದಸ್ಯ ಬೋಸ್‍ರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಯಚೂರಿನ ವೈಟಿಪಿಎಸ್ ಹಾಗೂ ಬಿಟಿಪಿಎಸ್ ವಿದ್ಯುತ್ ಘಟಕಗಳಿಗೆ 136 ಲಕ್ಷ ಮೆಟ್ರಿಕ್‍ಟನ್ ಕಲ್ಲಿದ್ದಲಿನ ಅವಶ್ಯಕತೆ ಇದೆ. ಕೇಂದ್ರದಿಂದ ನಮಗೆ ನಿಗದಿಯಾಗಿರುವ ಕಲ್ಲಿದ್ದಲು ಬರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ವೈಟಿಪಿಎಸ್‍ಗೆ ಶೇ.32ರಷ್ಟು ಹಾಗೂ ಬಿಟಿಪಿಎಸ್‍ಗೆ ಶೇ.21ರಷ್ಟು ಮಾತ್ರ ಕಲ್ಲಿದ್ದಲು ಪೂರೈಕೆಯಾಗಿದೆ. ಈಗಾಗಲೇ ಬೇಸಿಗೆ ಪ್ರಾರಂಭವಾಗಿರುವ ಕಾರಣ ಜನರಿಗೆ ತೊಂದರೆಯಾಗದಂತೆ ವಿದೇಶದಿಂದ ಕಲ್ಲಿದ್ದಲು ಆಮದು ಮಾಡಿ ಕೊಳ್ಳಲಾಗುವುದು. ಇದಕ್ಕಾಗಿ ನೀರನ್ನು ಸಹ ಸಂಗ್ರಹಿಸಲಿದ್ದೇವೆ ಎಂದರು.  ರಾಜ್ಯಕ್ಕೆ ನಿಗದಿಯಾಗಿರುವ ಕಲ್ಲಿದ್ದಲನ್ನು ಪೂರೈಕೆ ಮಾಡಬೇಕೆಂದು ಕೇಂದ್ರ ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರಿಗೆ ನಾನು ಹಾಗೂ ಮುಖ್ಯಮಂತ್ರಿಗಳು ಮನವಿ ಮಾಡಿದ್ದರೂ ಇನ್ನು ಉತ್ತರ ಬಂದಿಲ್ಲ ಎಂದರು.

ಖುದ್ದು ನಾನೇ ಕೇಂದ್ರ ಸಚಿವರಿಗೆ 51 ಪತ್ರಗಳನ್ನು ಬರೆದಿದ್ದೇನೆ. ಈವರೆಗೂ ಯಾವುದೇ ಉತ್ತರ ಬಂದಿಲ್ಲ ಎಂದು ಹೇಳಿದರು.  ಕಲ್ಲಿದ್ದಲು ಪೂರೈಕೆ ಮಾಡದಿರುವ ಬಗ್ಗೆ ನಾನು ವೈಯಕ್ತಿಕವಾಗಿ ಯಾರನ್ನೂ ದೂಷಿಸುವುದಿಲ್ಲ. ಕರ್ನಾಟಕವಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಲ್ಲೂ ಇದೇ ರೀತಿ ಸಮಸ್ಯೆ ಇದೆ. ನಮಗೆ ನಿಗದಿಯಾಗಿರುವಷ್ಟು ಕಲ್ಲಿದ್ದಲು ಪೂರೈಕೆಯಾದರೆ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ತಿಳಿಸಿದರು.  ವಿದ್ಯುತ್ ಘಟಕಗಳನ್ನು ಪ್ರಾರಂಭಿಸಲು ಜಮೀನು ನೀಡುವ ಸ್ಥಳೀಯರಿಗೆ ಉದ್ಯೋಗ ನೀಡಬೇಕೆಂಬ ಸದಸ್ಯರ ಸಲಹೆಗೆ ಸ್ಪಂದಿಸಿದ ಸಚಿವರು, ಈಗಾಗಲೇ ಸರ್ಕಾರ 109 ಕುಟುಂಬಗಳಿಗೆ ಉದ್ಯೋಜಗ ನೀಡಲಾಗಿದೆ. 219 ಅರ್ಜಿಗಳು ಬಂದಿವೆ. 101 ಹೆಚ್ಚುವರಿ ಹುದ್ದೆಗಳನ್ನು ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದರು.

Facebook Comments

Sri Raghav

Admin