ವಿದ್ಯಾರ್ಥಿಗಳು ಪ್ರತಿಭಟನೆಗಿಳಿಯದಂತೆ ಕಾಲೇಜುಗಳಿಗೆ ಪೊಲೀಸರ ದಿಗ್ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Police

ಬೆಂಗಳೂರು, ಆ.18- ಭಾರತೀಯ ಸೇನೆ ವಿರುದ್ಧ ಘೋಷಣೆ ಕೂಗಿದ ದೇಶದ್ರೋಹಿಗಳನ್ನು ಬಂಧಿಸುವಂತೆ ಆಗ್ರಹಿಸಿ ಎಬಿವಿಪಿ ಇಂದು ಕೈಗೊಂಡಿದ್ದ ಬೃಹತ್ ಪ್ರತಿಭಟನೆ ಹಿನ್ನೆಲೆಯಲ್ಲಿ ಎಲ್ಲ ಕಾಲೇಜುಗಳಿಗೆ ಪೊಲೀಸರು ದಿಗ್ಬಂಧನ ಹಾಕುವ ಮೂಲಕ ಪ್ರತಿಭಟನೆ ತಡೆದಿದ್ದಾರೆ.  ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಘಟನೆ ಕೈಗೊಂಡಿದ್ದ ಕಾಶ್ಮೀರಿ ಸಂಘರ್ಷ ಕುರಿತ ಕಾರ್ಯಾಗಾರದಲ್ಲಿ ದೇಶ ವಿರೋಧಿ ಘೋಷಣೆ, ಸೈನಿಕರ ವಿರುದ್ಧ ಅವಮಾನಕರ ಹೇಳಿಕೆಗಳು ಕೇಳಿಬಂದಿದ್ದವು.  ಇದನ್ನು ವಿರೋಧಿಸಿ ಕಳೆದ ಎರಡು ದಿನಗಳಿಂದ ಎಬಿವಿಪಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿ ಸಂಸ್ಥೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ ದೇಶದ್ರೋಹಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ್ದಾರೆ.

ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿತ್ತು. ಇಂದು ಕೂಡ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದ ಎಬಿವಿಪಿ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ, ಮಲ್ಲೇಶ್ವರದಲ್ಲಿ ಅಸಹಕಾರ ಪ್ರತಿಭಟನೆ ಕೈಗೊಂಡಿತ್ತು. ಇದನ್ನು ಮೊದಲೇ ಅರಿತ ಪೊಲೀಸರು ಪ್ರತಿಭಟನೆಯನ್ನು ನಿಯಂತ್ರಿಸಲು ಮಲ್ಲೇಶ್ವರಂ, ರಾಜಾಜಿನಗರ, ಜಯನಗರ ಸೇರಿದಂತೆ ಬಹುತೇಕ ಎಲ್ಲ ಕಾಲೇಜುಗಳ ಪ್ರಿನ್ಸಿಪಾಲರಿಗೆ ನೋಟಿಸ್ ನೀಡಿ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಳ್ಳದಂತೆ ನೋಡಿಕೊಳ್ಳಬೇಕೆಂದು ಸರ್ಕಾರ ಸೂಚಿಸಿತ್ತು.   ಅಲ್ಲದೆ, ಕಾಲೇಜುಗಳ ಸುತ್ತಮುತ್ತ ಭಾರೀ ಬಿಗಿ ಬಂದೋಬಸ್ತ್ ಆಯೋಜಿಸಿ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಹೊರ ಹೋಗುವ ವಿದ್ಯಾರ್ಥಿಗಳ ಮೇಲೆ ತೀವ್ರ ನಿಗಾ ವಹಿಸಿದ್ದರು. ಎಬಿವಿಪಿ ಮುಖಂಡರು ಕಾಲೇಜುಗಳಿಗೆ ಬರದಂತೆ ತಡೆದು ಅರ್ಧದಲ್ಲೇ ಹೊರಕಳುಹಿಸಿದರು.

ಮಲ್ಲೇಶ್ವರಂ 18ನೆ ಕ್ರಾಸ್ನಲ್ಲಿರುವ ಮಹಿಳಾ ಕಾಲೇಜು, ಕೆಎಲ್ಇ ಕಾಲೇಜು ಸೇರಿದಂತೆ ಅನೇಕ ಕಾಲೇಜುಗಳಿಗೆ ಪೊಲೀಸರು ಸರ್ಪಗಾವಲು ಹಾಕಿದ್ದರು. ಹಾಗಾಗಿ ಇಂದಿನ ಪ್ರತಿಭಟನೆಯಲ್ಲಿ ಯಾವುದೇ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪಾಲ್ಗೊಳ್ಳಲಿಲ್ಲ. ಪ್ರತಿ ಕಾಲೇಜುಗಳ ಮುಖ್ಯ ದ್ವಾರಗಳಲ್ಲಿ ನಿಂತ ಪೊಲೀಸರು ವಿದ್ಯಾರ್ಥಿಗಳ ಗುರುತಿನ ಚೀಟಿ ಪರಿಶೀಲಿಸಿ ಒಳಬಿಡುತ್ತಿದ್ದರು.
ಒಟ್ಟಾರೆ ಪ್ರತಿಭಟನೆಗೆ ತೆರಳದಂತೆ ವಿದ್ಯಾರ್ಥಿಗಳಿಗೆ ದಿಗ್ಬಂಧನ ಹಾಕಿದ್ದರು.

 ಪೊಲೀಸರ ಕ್ರಮ ಖಂಡನೀಯ:

ರಾಜಧಾನಿಯಲ್ಲಿ ದೇಶವಿರೋಧಿ ಘೋಷಣೆ, ಭಾಷಣ, ಸೈನಿಕರಿಗೆ ಅವಮಾನಕರ ಹೇಳಿಕೆ ನೀಡಿದವರನ್ನು ಬಂಧಿಸಬೇಕೆಂದು ಪ್ರತಿಭಟನೆಗೆ ಮುಂದಾದ ಎಬಿವಿಪಿ ಕಾರ್ಯಕರ್ತರನ್ನು ತಡೆದ ಪೊಲೀಸರ ಕ್ರಮ ಪ್ರಜಾಪ್ರಭುತ್ವದ ಆಶಯಕ್ಕೆ ವಿರೋಧವಾಗಿದೆ ಎಂದು ಎಬಿವಿಪಿ ರಾಷ್ಟ್ರೀಯ ಸಂಘಟಕ ವಿನಯ್ ಬಿದರೆ ಆರೋಪಿಸಿದ್ದಾರೆ.  ಈ ಸಂಜೆಯೊಂದಿಗೆ ಮಾತನಾಡಿದ ಅವರು, ನಮ್ಮ ಪ್ರತಿಭಟನೆ ಪೊಲೀಸರ ವಿರುದ್ಧ ಅಲ್ಲ. ದೇಶವಿರೋಧಿ ಘೋಷಣೆ ಕೂಗಿದವರನ್ನು ಬಂಧಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ. ಇದನ್ನು ಹತ್ತಿಕ್ಕುವ ಪ್ರಯತ್ನವನ್ನು ಸರ್ಕಾರ ಪೊಲೀಸರ ಮೂಲಕ ಮಾಡಿ ಸಂವಿಧಾನದ ಆಶಯಗಳಿಗೆ ತಿಲಾಂಜಲಿ ಇಟ್ಟಿದೆ.   ದೇಶದ್ರೋಹಿಗಳನ್ನು ಬಂಧಿಸುವವರೆಗೆ ನಮ್ಮ ಹೋರಾಟ ಮುಂದುವರಿಸುತ್ತೇವೆ ಎಂದು ಅವರು ಹೇಳಿದರು. ಮುಂದಿನ ದಿನಗಳಲ್ಲಿ ನಮ್ಮ ಹೋರಾಟದ ಸ್ವರೂಪವನ್ನು ಬದಲಾಯಿಸುತ್ತೇವೆ. ರಾಜ್ಯಾದ್ಯಂತ ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಅಮ್ನೆಸ್ಟಿ ಸಂಘಟನೆ ಪರ ನಿಂತ ಕಾಂಗ್ರೆಸ್ ವಿರುದ್ಧ ಎಬಿವಿಪಿ ಕಿಡಿ

ಅಮ್ನೆಸ್ಟಿ ಸಂಘಟನೆ ವಿರುದ್ಧ ಕ್ರಮಕೈಗೊಳ್ಳದಂತೆ ರಾಜ್ಯಸರ್ಕಾರದ ಮೇಲೆ ಒತ್ತಡ ಹೇರಿರುವ ಕಾಂಗ್ರೆಸ್ ಹೈಕಮಾಂಡ್ ನಾಯಕರ ವಿರುದ್ಧ ಎಬಿವಿಪಿ ಮುಖಂಡರು ಕಿಡಿಕಾರಿದ್ದಾರೆ.  ಈ ಕುರಿತು ಈ ಸಂಜೆಯೊಂದಿಗೆ ಮಾತನಾಡಿದ ಎಬಿವಿಪಿ ಮುಖಂಡರಾದ ಸಂತೋಷ್ರೆಡ್ಡಿ, ವಿನಯ್ಬಿದರೆ ಮುಂತಾದವರು ಜನಾದೇಶ ಹೊಂದಿರುವ ಸರ್ಕಾರಕ್ಕೆ ಹೈಕಮಾಂಡ್ ಕ್ರಮಕೈಗೊಳ್ಳದಂತೆ ಸೂಚನೆ ನೀಡುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದ್ದಾರೆ.  ದೇಶದ್ರೋಹವೆಸಗುವವರ ವಿರುದ್ಧ ಕ್ರಮಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಆದರೆ ಹೈಕಮಾಂಡ್ ಇವರಿಗೆ ಕ್ರಮಕೈಗೊಳ್ಳದಂತೆ ಮೂಗುದಾರ ಹಾಕುತ್ತಿರುವುದನ್ನು ನೋಡಿದರೆ ಕಾಂಗ್ರೆಸ್ನ ದ್ವಂದ್ವ ನಿಲುವು ಅರ್ಥವಾಗುತ್ತದೆ.
ಭಯೋತ್ಪಾದನೆಗೆ ಬೆಂಬಲ ನೀಡುವಂತಹ, ರಾಷ್ಟ್ರಕ್ಕೆ ಅವಮಾನಿಸುವಂತಹ ಶಕ್ತಿಗಳ ವಿರುದ್ಧ ಕಾಂಗ್ರೆಸ್ ಮೃದು ಧೋರಣೆ ಹೊಂದಿದೆ. ಅಲ್ಲದೆ, ಜನಾದೇಶದ ಸರ್ಕಾರ ಆಡಳಿತದಲ್ಲಿ ಹೈಕಮಾಂಡ್ ಮೂಗುತೂರಿಸುವ ಪ್ರಯತ್ನವನ್ನು ಮಾಡುತ್ತಿದೆ ಎಂದು ಆರೋಪಿಸಿದರು.  ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ, ಅಭಿಷೇಕ್ ಸಿಂಗ್ವಿ, ದಿಗ್ವಿಜಯ್ಸಿಂಗ್, ಅಂಬಿಕಾ ಸೋನಿ ಮತ್ತಿತರರು ಅಮ್ನೆಸ್ಟಿ ಸಂಘಟನೆಯನ್ನು ಬೆಂಬಲಿಸುತ್ತಿರುವುದು ಖಂಡನೀಯ ಎಂದು ಹೇಳಿದರು.

► Follow us on –  Facebook / Twitter  / Google+

Facebook Comments

Sri Raghav

Admin