ವಿದ್ಯಾರ್ಥಿಗಳ ಮೇಲೆ ಮತ್ತೆ ಲಾಠಿ ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Lathicharge-2

ಬೆಂಗಳೂರು, ಆ.19- ಭಾರತೀಯ ಸೇನೆ ವಿರುದ್ಧ ಅವಹೇಳನಕಾರಿ ಘೋಷಣೆ ಪ್ರಕರಣದ ಹಿನ್ನೆಲೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಕಾರ್ಯಕರ್ತರು ಇಂದೂ ಸಹ ಪ್ರತಿಭಟನೆ ಮುಂದುವರಿಸಿ ಇಂದಿರಾನಗರದ ಆಮ್ನೆಸ್ಟಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಲಾಠಿಚಾರ್ಜ್ ನಡೆಸಿ 40 ಮಂದಿ ಕಾರ್ಯಕರ್ತರನ್ನು ವಶಕ್ಕೆ ಪಡೆದಿದ್ದಾರೆ. ಲಾಠಿಚಾರ್ಜ್ನಿಂದ ವಿದ್ಯಾರ್ಥಿನಿಯೊಬ್ಬರ ತಲೆಗೆ ತೀವ್ರ ಪೆಟ್ಟಾಗಿ ಪ್ರಜ್ಞೆ ಕಳೆದುಕೊಂಡು ಕುಸಿದುಬಿದ್ದರು ಹಾಗೂ ಕೆಲ ವಿದ್ಯಾರ್ಥಿಗಳ ತಲೆಯಿಂದ ರಕ್ತ ಸುರಿಯುತ್ತಿದ್ದರೂ ಘೋಷಣೆ ಕೂಗುತ್ತ ಪ್ರತಿಭಟನೆ ಮುಂದುವರಿಸಿದರು. ಇಂದು ಬೆಳಗಿನಿಂದಲೇ ಆಮ್ನೆಸ್ಟಿ ಕಚೇರಿ ಬಳಿ ಜಮಾಯಿಸಿದ್ದ ನೂರಾರು ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದಾಗ ಪೊಲೀಸರ ಬಿಗಿ-ಭದ್ರತೆ ಒದಗಿಸಲಾಗಿತ್ತು.

Lathicharge-4

Lathicharge-8

ಆಮ್ನೆಸ್ಟಿ ದೇಶದಿಂದ ತೊಲಗಬೇಕು, ಸೇನೆ ವಿರುದ್ಧ ಘೋಷಣೆ ಕೂಗಿದವರನ್ನು ಕೂಡಲೇ ಬಂಧಿಸಬೇಕು ಎಂದು ಕಾರ್ಯಕರ್ತರು ಆಗ್ರಹಿಸಿ ಪ್ರತಿಭಟನೆ ನಡೆಸಿ ಕಚೇರಿ ಬಳಿ ಹಾಕಲಾಗಿದ್ದ ಬ್ಯಾರಿಕೇಡ್ಗಳನ್ನು ತಳ್ಳಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನಡೆದಾಗ ಅದನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು.   ಇದಕ್ಕೂ ಜಗ್ಗದೆ ಕಚೇರಿಗೆ ನುಗ್ಗುತ್ತಿದ್ದಾಗ ಲಾಠಿಚಾರ್ಜ್ ನಡೆಸಿದರು. ಲಾಠಿಚಾರ್ಜ್ ವೇಳೆ ವಿದ್ಯಾರ್ಥಿಗಳಾದ ವೀಣಾ, ಗವಿಸಿದ್ದಪ್ಪ, ಅಭಿ ಎಂಬುವರಿಗೆ ಪೆಟ್ಟಾಗಿದ್ದು, ಅವರನ್ನು ಪೊಲೀಸರ ವಾಹನದಲ್ಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

Lathicharge-6

ಕಳೆದ ಮಂಗಳವಾರದಂದು ನಡೆದಿದ್ದ ಎಬಿವಿಪಿ ಪ್ರತಿಭಟನೆ ವೇಳೆಯೂ ಪೊಲೀಸರು ಲಾಠಿಚಾರ್ಜ್ ನಡೆಸಿದ್ದರು. ಅಂದು ಆಮ್ನೆಸ್ಟಿ ಇಂಟರ್ನ್ಯಾಷನಲ್ ಸಂಸ್ಥೆಯನ್ನು ನಿಷೇಧಿಸುವಂತೆ ಆಗ್ರಹಿಸಿ ಪೊಲೀಸ್ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಮುಂದಾಗಿದ್ದಾಗ ರಾಜಭವನದ ಬಳಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು.  ಇಂದು ಮತ್ತೆ ಪೊಲೀಸರು ಲಾಠಿಚಾರ್ಜ್ ನಡೆಸಿರುವುದರಿಂದ ತೀವ್ರ ಆಕ್ರೋಶಗೊಂಡ ಎಬಿವಿಪಿಯ ರಾಷ್ಟ್ರೀಯ ಕಾರ್ಯದರ್ಶಿ ವಿನಯ್ ಬಿದರೆ ಯುವಶಕ್ತಿ ಏನೆಂಬುದನ್ನು ತೋರಿಸುತ್ತೇವೆಯೇ ಹೊರತು ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.

Lathicharge-5

ನಾಳೆಯಿಂದ ರಾಜ್ಯಾದ್ಯಂತ ಹೋರಾಟ ಮತ್ತಷ್ಟು ಬಿರುಸುಗೊಳ್ಳಲಿದೆ. ರೊಚ್ಚಿಗೆದ್ದ ಯುವ ಜನತೆ ದೇಶದ ಯುವಶಕ್ತಿಯನ್ನು ತೋರಿಸಿಯೇ ತೀರುತ್ತದೆ ಎಂದು ಅವರು ತಿಳಿಸಿದ್ದಾರೆ.
ತಮ್ಮನ್ನು ಕಾಯುವ ಸೇನೆಯ ವಿರುದ್ಧ ಅವಹೇಳನಕಾರಿ ಘೋಷಣೆ ಕೂಗಿದ್ದಾರೆ. ಅಂತಹವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ಘೋಷಣೆ ಕೂಗಿದವರನ್ನು ಬಂಧಿಸುವ ಬದಲಿಗೆ ಪೊಲೀಸರೇ ಅವರಿಗೆ ರಕ್ಷಣೆ ನೀಡುತ್ತಿರುವುದು ಸಂವಿಧಾನವನ್ನೇ ಅಣಕಿಸುವಂತಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಕಾನೂನಾತ್ಮಕ ಕ್ರಮ ಕೈಗೊಳ್ಳುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಹೇಳಿದ್ದಾರೆ.

Lathicharge--2

Lathicharge-1

► Follow us on –  Facebook / Twitter  / Google+

Facebook Comments

Sri Raghav

Admin

Comments are closed.