ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕ ಶಿಕ್ಷಕನಿಗೆ ಜೈಲು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

JAIL--TUMAKURU

ಬಾಗೇಪಲ್ಲಿ, ಫೆ.10-ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಕಾಮುಕ ಶಿಕ್ಷಕ ಜೈಲು ಪಾಲಾಗಿದ್ದಾನೆ. ಚೇಳೂರು ಗ್ರಾಮದ ಕಿಶೋರ್ ಸಂಯುಕ್ತ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ವಿ.ರಾಮಚಂದ್ರಚಾರಿ ಜೈಲು ಪಾಲಾಗಿರುವ ಕಾಮುಕ. ಅದೇ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾದ ರಾಮಚಂದ್ರಚಾರಿಯನ್ನು ಪೋಷಕರೇ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದರು.  ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆತನನ್ನು ಜಿಲ್ಲಾ ಹೆಚ್ಚುವರಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ವಾದ-ವಿವಾದ ಆಲಿಸಿದ ನ್ಯಾಯಾಧೀಶರಾದ ವಿ.ತುರುಮುರಿ ಅವರು ಆರೋಪಿಗೆ 50 ಸಾವಿರ ದಂಡ ಹಾಕುವುದರ ಜತೆಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿದ್ದಾರೆ.

ಏನಿದು ಪ್ರಕರಣ:

ಕಳೆದ 2013ರಲ್ಲಿ ರಾಮಚಂದ್ರಚಾರಿ ಅದೇ ಶಾಲೆಯ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಕ್ಕೆ ಗುರಿಯಾಗಿದ್ದರು. ಕಾಮುಕ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಪೋಷಕರು ಶಾಲೆ ಮುಂಭಾಗ ಧರಣಿ ನಡೆಸಿದ್ದರು. ಆದರೆ, ಹಣ ಬಲದಿಂದ ಇಡೀ ಪೊಲೀಸ್ ಇಲಾಖೆಯನ್ನು ತನ್ನ ಪರ ಮಾಡಿಕೊಂಡ ಶಿಕ್ಷಕ ಊರಿನಲ್ಲಿ ರಾಜಾರೋಷವಾಗಿ ಓಡಾಡಿಕೊಂಡಿದ್ದ. ಇದೀಗ ನ್ಯಾಯ ಗೆದ್ದಿದ್ದು, ಆರೋಪಿ ಜೈಲು ಕಂಬಿ ಎಣಿಸುತ್ತಿದ್ದಾನೆ.ಈ ಪ್ರಕರಣಕ್ಕೂ ಮುನ್ನ ರಾಮಚಂದ್ರಚಾರಿ ಇದೇ ರೀತಿ ಹಲವಾರು ಬಾರಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ಆರೋಪಕ್ಕೆ ಗುರಿಯಾಗಿದ್ದ.

2010ರಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ವೆಸಗಿದ ಆರೋಪದ ಮೇಲೆ ಇದೇ ಶಿಕ್ಷಕನಿಗೆ ಪೋಷಕರು ಹಿಗ್ಗಾಮುಗ್ಗ ಥಳಿಸಿದ್ದರು.   ಇಂತಹ ಕಾಮುಕ ಶಿಕ್ಷಕರಿಂದ ಇತರ ಮಾನವಂತ ಶಿಕ್ಷಕರು ತಲೆ ತಗ್ಗಿಸುವಂತಾಗಿದೆ. ಸಮಾಜ ತಲೆ ತಗ್ಗಿಸುವಂತಹ ನೀಚ ಕಾರ್ಯಕ್ಕೆ ಕೈ ಹಾಕುವ ಕಾಮುಕ ಶಿಕ್ಷಕರಿಗೆ ಕಾನೂನಿನ ಮೂಲಕ ಪಾಠ ಕಲಿಸುವುದರ ಜತೆಗೆ ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವ ಅಗತ್ಯವಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin