ವಿದ್ಯಾರ್ಹತೆ ಸುಳ್ಳಾದರೆ ಚುನಾಯಿತ ಅಭ್ಯರ್ಥಿಗಳ ಆಯ್ಕೆ ಅಸಿಂಧು : ಸುಪ್ರೀಂ ಮಹತ್ವದ ತೀರ್ಪು

ಈ ಸುದ್ದಿಯನ್ನು ಶೇರ್ ಮಾಡಿ

Supreme-Court

ನವದೆಹಲಿ, ನ.2– ನಾಮಪತ್ರದಲ್ಲಿ ಶೈಕ್ಷಣಿಕ ವಿದ್ಯಾರ್ಹತೆಗಳ ಬಗ್ಗೆ ಸುಳ್ಳು ಅಥವಾ ದೋಷಪೂರಿತ ಘೋಷಣೆಗಳನ್ನು ಮಾಡಿದಲ್ಲಿ ಅಂಥ ಅಭ್ಯರ್ಥಿಯ ಚುನಾವಣೆ ಆಯ್ಕೆಯನ್ನು ಅಸಿಂಧುಗೊಳಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಎ.ಆರ್.ದವೆ ಮತ್ತು ಎಲ್.ನಾಗೇಶ್ವರ ರಾವ್ ಅವರನ್ನು ಒಳಗೊಂಡ ಪೀಠವು ಈ ತೀರ್ಪು ನೀಡಿದ್ದು, ಸುಳ್ಳು ಶೈಕ್ಷಣಿಕ ವಿದ್ಯಾರ್ಹತೆಗಳನ್ನು ನಾಮಪತ್ರದಲ್ಲಿ ನಮೂದಿಸುವ ಉಮೇದುದಾರರಿಗೆ ಇದು ಸ್ಪಷ್ಟ ಎಚ್ಚರಿಕೆಯಾಗಿದೆ.
ತಾವು ಎಂಬಿಎ ಪದವಿ ಹೊಂದಿರುವುದಾಗಿ ತಮ್ಮ ನಾಮಪತ್ರದಲ್ಲಿ ಸುಳ್ಳು ಘೋಷಣೆ ನೀಡಿದ್ದಕ್ಕಾಗಿ ಮಣಿಪುರದ ಕಾಂಗ್ರೆಸ್ ಶಾಸಕ ಮೈರೆಂಬಮ್ ಪೃಥ್ವಿರಾಜ್ ಅವರ ಆಯ್ಕೆಯನ್ನು ನಿನ್ನೆ ಈ ಪೀಠ ರದ್ದುಗೊಳಿಸಿ ಈ ತೀರ್ಪು ನೀಡಿದೆ.

ತಮ್ಮ ಶೈಕ್ಷಣಿಕ ವಿದ್ಯಾರ್ಹತೆ ಸೇರಿದಂತೆ ಅಭ್ಯರ್ಥಿಗಳ ವಿವರಗಳ ಬಗ್ಗೆ ಮಾಹಿತಿ ಪಡೆಯುವುದು ಮತದಾರರ ಹಕ್ಕು ಆಗಿರುತ್ತದೆ. ಈ ಕುರಿತು ವಿವರ ಮಾಹಿತಿ ಪಡೆಯದ ಹೊರತು ಮತ ಚಲಾಯಿಸುವ ಹಕ್ಕು ಅರ್ಥಹೀನವಾಗುತ್ತದೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟ ಅಭಿಪ್ರಾಯಪಟ್ಟಿದೆ. ಚುನಾವಣೆಗಳಲ್ಲಿ ಸ್ಪರ್ಧಿಸುವವರ ಶೈಕ್ಷಣಿಕ ಹಿನ್ನೆಲೆ ಬಗ್ಗೆ ತಿಳಿಯುವುದು ಮತದಾರರ ಮೂಲಭೂತ ಹಕ್ಕಾಗಿರುತ್ತದೆ. ಹೀಗಾಗಿ ಉಮೇದುದಾರಿಕೆ ಪತ್ರದಲ್ಲಿ ವಿದ್ಯಾರ್ಹತೆ ಬಗ್ಗೆ ಸುಳ್ಳು ಅಥವಾ ದೋಷಪೂರಿತ ಘೋಷಣೆ ಮಾಡಿದರೆ ಅಂಥ ಅಭ್ಯರ್ಥಿಯ ಆಯ್ಕೆಯನ್ನು ಬದಿಗಿರಿಸಬಹುದಾಗಿದೆ ಎಂದು ತೀರ್ಪು ನೀಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin