ವಿದ್ಯಾವಾರಿಧಿ ಶಾಲೆ ದುರಂತ : ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Huliyaru---School

ಹುಳಿಯಾರು, ಮಾ.14-ವಿಷದೂಟ ಸೇವಿಸಿ ಮೃತಪಟ್ಟ ಮೂವರು ವಿದ್ಯಾರ್ಥಿಗಳು ಹಾಗೂ ಸೆಕ್ಯೂರಿಟಿ ಗಾರ್ಡ್ ಕುಟುಂಬಕ್ಕೆ ವಿದ್ಯಾವಾರಿಧಿ ಇಂಟರ್‍ನ್ಯಾಷನಲ್ ಸ್ಕೂಲ್‍ನ ಆಡಳಿತ ಮಂಡಳಿ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಘಟನೆ ಹಿನ್ನೆಲೆಯಲ್ಲಿ ನಿನ್ನೆಯಿಂದ ಮೃತ ಮಕ್ಕಳ ರಕ್ತಸಂಬಂಧಿಕರು ಹಾಗೂ ಕೆಲ ಪೋಷಕರು, ಸಾರ್ವಜನಿಕರು ಶಾಲೆ ಬಳಿ ಜಮಾಯಿಸಿ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದ್ದರು.  ಇಂದೂ ಸಹ ಪ್ರತಿಭಟನೆ ಮುಂದುವರೆದಿದ್ದು, ಆಡಳಿತ ಮಂಡಳಿಯವರು ಘಟನೆಗೆ ಕ್ಷಮೆಯಾಚಿಸಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಘೋಷಿಸಿದ ನಂತರ ಪ್ರತಿಭಟನೆ ಹಿಂಪಡೆದಿದ್ದಾರೆ.  ಪೊಲೀಸರ ಬಂದೋಬಸ್ತ್‍ನೊಂದಿಗೆ ವಿದ್ಯಾವಾರಿಧಿ ಶಾಲೆ ಪುನರಾರಂಭವಾಗಿದೆ.

ಶಾಲೆ ಪುನರಾರಂಭ :

ವಿಷದೂಟ ಪ್ರಕರಣದಿಂದ ಕಳೆದ ಮೂರು ದಿನಗಳಿಂದ ಮುಚ್ಚಲ್ಪಟ್ಟಿದ್ದ ಇಲ್ಲಿನ ವಿದ್ಯಾವಾರಿಧಿ ಶಾಲೆ ಇಂದಿನಿಂದ ಪುನರಾರಂಭವಾಗಿದೆ. ಮಕ್ಕಳ ಸಾವಿನ ಕಹಿ ಘಟನೆಗೆ ಪ್ರಾಚಾರ್ಯರು ಕ್ಷಮೆ ಯಾಚಿಸಿ ಕುಟುಂಬವರ್ಗದವರಿಗೆ ಅಗಲಿಕೆಯ ನೋವು ಭರಿಸುವ ಶಕ್ತಿ ನೀಡುವಂತೆ ಭಗವಂತನಲ್ಲಿ ಪ್ರಾರ್ಥಿಸಿ ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸುವುದಾಗಿ ತಿಳಿಸಿದ್ದಾರಲ್ಲದೆ, ಮಕ್ಕಳು ಹಾಗೂ ಪೋಷಕರು ಯಾವುದೇ ಆತಂಕಕ್ಕೆ ಒಳಪಡದೆ ಎಂದಿನಂತೆ ತರಗತಿಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಿಷ ಮೌನ ಆಚರಿಸಿದರು. ನಂತರ ಎಲ್ಲಾ ಸಿಬ್ಬಂದಿಯೊಂದಿಗೆ ತುರ್ತು ಸಭೆ ನಡೆಸಿದರು. ಶಾಲಾ ಕೊಠಡಿಯಲ್ಲಿ ಮಕ್ಕಳಿಗೆ ಲವಲವಿಕೆ ವಾತಾವರಣ ನಿರ್ಮಿಸುವಂತೆ ಮತ್ತೆ ಕಹಿ ಘಟನೆಯನ್ನು ನೆನಪು ಮಾಡಿಕೊಳ್ಳದಂತೆ ಸಲಹೆ ಮಾಡಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin