ವಿದ್ಯಾವಾರಿಧಿ ಶಾಲೆ ಮಕ್ಕಳ ಸಾವಿನ ಪ್ರಕರಣ : ಕಿರಣ್‍ಕುಮಾರ್ ದಂಪತಿ ಎಸ್ಕೇಪ್

ಈ ಸುದ್ದಿಯನ್ನು ಶೇರ್ ಮಾಡಿ

Huliyaru-Kiran-Kuamr

ತುಮಕೂರು, ಮಾ.10– ಬೋರ್ಡಿಂಗ್ ಶಾಲೆಯಲ್ಲಿ ವಿಷ ಆಹಾರ ಸೇವಿಸಿ ಮೂವರು ವಿದ್ಯಾರ್ಥಿಗಳು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಕಿರಣ್‍ಕುಮಾರ್ ಹಾಗೂ ಇವರ ಪತ್ನಿ ಕವಿತಾ ಕಿರಣ್‍ಕುಮಾರ್ ಪರಾರಿಯಾಗಿದ್ದಾರೆ. ಈ ಆರೋಪ ಸಂಬಂಧ 6ಮಂದಿ ವಿರುದ್ಧ ಹುಳಿಯಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಡುಗೆ ಭಟ್ಟ ಶಿವಣ್ಣ, ಸಹಾಯಕಿ ರಂಗಲಕ್ಷ್ಮಮ್ಮ, ಸುಹಾಸ್, ಮೇಲ್ವಿಚಾರಕ ಜಗದೀಶ್ ಅವರನ್ನು ಬಂಧಿಸಿದ್ದು, ಈ ನಾಲ್ವರಿಗೂ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಷರತ್ತು ಬದ್ಧ ಜಾಮೀನು ನೀಡಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕಿರಣ್‍ಕುಮಾರ್ ಹಾಗೂ ಕವಿತಾ ಕಿರಣ್‍ಕುಮಾರ್ ತಲೆ ಮರೆಸಿಕೊಂಡಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲ್ಲೂಕು ಹುಳಿಯಾರು ಹೋಬಳಿಯ ಬಳ್ಳೇಕಟ್ಟೆ ಸಮೀಪ ಇರುವ ವಿದ್ಯಾವಾರಧಿ ಶಾಲೆಯಲ್ಲಿ ನಿನ್ನೆ ಮೂವರು ವಿದ್ಯಾರ್ಥಿಗಳು ವಿಷ ಆಹಾರ ಸೇವಿಸಿ ಸಾವನ್ನಪ್ಪಿದ್ದು, ವಾಚ್‍ಮೆನ್ ತೀವ್ರ ಅಸ್ವಸ್ಥರಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ಬೋರ್ಡಿಂಗ್ ಶಾಲೆಯಲ್ಲಿ ಮೂವರು ಮಕ್ಕಳ ಸಾವಿನ ಪ್ರಕರಣ ಸಂಬಂಧ ಮುಖ್ಯಮಂತ್ರಿಗಳು ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.
ಶಾಲಾ ಮುಖ್ಯಸ್ಥ ಕಿರಣ್‍ಕುಮಾರ್ ಶಾಲೆಗೆ ಕೆಟ್ಟ ಹೆಸರು ತರಲು ಯಾರೋ ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ ಎಂದು ಘಟನೆಯನ್ನು ಸಮರ್ಥಿಸಿಕೊಳ್ಳಲು ಮುಂದಾಗಿದ್ದರು.

ಮಕ್ಕಳನ್ನು ಕಳೆದುಕೊಂಡ ಪೋಷಕರು, ಸಂಬಂಧಿಕರು, ಸಾರ್ವಜನಿಕರು ರೊಚ್ಚಿಗೆದ್ದು ನಿನ್ನೆ ಪ್ರತಿಭಟನೆ ನಡೆಸಿದ್ದರು. ನಿನ್ನೆಯಿಂದ ಶಾಲೆ ನಡೆಯುತ್ತಿಲ್ಲ. ಉಳಿದ ವಿದ್ಯಾರ್ಥಿಗಳು,ಪೋಷಕರು ಹಾಗೂ ಶಾಲಾ ಸಿಬ್ಬಂದಿಗಳು ಆತಂಕಕ್ಕೊಳಗಾಗಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin