ವಿದ್ಯುತ್ ಖರೀದಿಗೆ ತುರ್ತು ಟೆಂಡರ್ : ಡಿ.ಕೆ.ಶಿವಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

DKShivakumar

ಬೆಂಗಳೂರು, ನ.26- ರೈತರು, ಜನಸಾಮಾನ್ಯರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲು ತುರ್ತಾಗಿ ವಿದ್ಯುತ್ ಖರೀದಿ ಮಾಡಲು ಟೆಂಡರ್ ಕರೆಯಲಾಗಿದೆ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು. ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡ ನಂತರ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜ್ಯದಲ್ಲಿ ಭೀಕರ ಬರ ಇದೆ. ನೀರಾವರಿ ಪಂಪ್‍ಸೆಟ್‍ಗಳಿಂದಾಗಿ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಬೇಸಿಗೆಯಲ್ಲಿ ಸಮಸ್ಯೆ ಬಿಗಡಾಯಿಸಲಿರುವುದರಿಂದ ಹಿರಿಯ ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಬೇಕೆಂಬ ಬಗ್ಗೆ ಚರ್ಚೆ ನಡೆಸಲಾಯಿತು ಎಂದು ಹೇಳಿದರು.

ಈಗಾಗಲೇ 500 ಮೆಗಾವ್ಯಾಟ್ ವಿದ್ಯುತ್‍ನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. ಮತ್ತೆ ಎಲ್ಲೆಲ್ಲಿಂದ ವಿದ್ಯುತ್ ಪಡೆಯಲು ಸಾಧ್ಯವಿದೆಯೋ ಅದರ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಒಟ್ಟಾರೆ ಮುಂದಿನ ಬೇಸಿಗೆ ವೇಳೆಗೆ ರೈತರಿಗೆ, ಜನಸಾಮಾನ್ಯರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಬೆಳಗಾವಿ ಅಧಿವೇಶನದಲ್ಲೂ ವಿದ್ಯುತ್ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಾಗಿದೆ. ರಾಯಚೂರಿನ ಯರಮರಸ್, ಬಳ್ಳಾರಿಯ ಶಾಖೋತ್ಪನ್ನ ವಿದ್ಯುತ್ ಘಟಕಗಳ ಸ್ಥಿತಿಗತಿ, ವಿದ್ಯುತ್ ಉತ್ಪಾದನೆ ಇವೆಲ್ಲವೂ ಸೇರಿದಂತೆ ಇಂದು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿ ಸಮಸ್ಯೆ ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ತುಂಗಭದ್ರಾ ನದಿಯ ನೀರು ಬಳ್ಳಾರಿಗೆ ಸಿಗುತ್ತಿರಲಿಲ್ಲ. ಈಗ ಅಲ್ಲಿಗೂ ಲಭ್ಯವಾಗುವ ಕುರಿತು ಚರ್ಚಿಸಲಾಗಿದೆ ಎಂದರು.

ನೋಟ್‍ಬ್ಯಾನ್‍ನಿಂದ ಜನರಿಗೆ ತೊಂದರೆ:

ಪ್ರಧಾನಿ ನರೇಂದ್ರಮೋದಿಯವರು ಏಕಾಏಕಿ 500, 1000ರೂ. ಮುಖಬೆಲೆಯ ನೋಟುಗಳನ್ನು ರದ್ದುಮಾಡಿರುವುದರಿಂದ ಕೂಲಿ ಕಾರ್ಮಿಕರು, ಜನಸಾಮಾನ್ಯರಿಗೆ ತೀವ್ರ ತೊಂದರೆಯಾಗಿದೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು. ನೋಟ್‍ಬ್ಯಾನ್ ಮಾಡಿರುವುದರಿಂದ ವಿರೋಧ ಪಕ್ಷಗಳು ಒಂದುಗೂಡುವಂತಾಗಿದೆ. ಜನಸಾಮಾನ್ಯರು ಪ್ರಧಾನಿಯವರಿಂದ ದೂರ ಸರಿಯುವಂತಾಗಿದೆ ಎಂದು ಹೇಳಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin