ವಿಧಾನಪರಿಷತ್‍ನಲ್ಲೂ ಭೂಸುಧಾರಣೆ ತಿದ್ದುಪಡಿ ವಿಧೇಯಕ ಅಂಗೀಕಾರ

ಈ ಸುದ್ದಿಯನ್ನು ಶೇರ್ ಮಾಡಿ

Session-Dairy

ಬೆಂಗಳೂರು, ಮಾ.27- ವಿಧಾನಸಭೆಯಿಂದ ತಿದ್ದುಪಡಿಗಳೊಂದಿಗೆ ಅಂಗೀಕೃತ ರೂಪದಲ್ಲಿದ್ದ ಕರ್ನಾಟಕ ಭೂ ಸುಧಾರಣೆ ತಿದ್ದುಪಡಿ ವಿಧೇಯಕ-2016 ವಿಧಾನಪರಿಷತ್‍ನಲ್ಲಿಂದು ಅಂಗೀಕಾರವಾಯಿತು.  ಕರ್ನಾಟಕ ಭೂ ಸುಧಾರಣೆಗಳ ತಿದ್ದುಪಡಿ ವಿಧೇಯಕವನ್ನು ವಿಧಾನ ಪರಿಷತ್‍ನಲ್ಲಿಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಮಂಡಿಸಿದಾಗ. ವಿಧೇಯಕದ ಬಗ್ಗೆ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಪ್ರತಿಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪ, ಗಣೇಶ್ ಕಾರ್ಣಿಕ್, ಮೋಟಮ್ಮ, ವಿ.ಎಸ್. ಉಗ್ರಪ್ಪ, ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಮತ್ತಿತರರು ಮಾತನಾಡಿದರು.

ಇದಕ್ಕೂ ಮೊದಲು ಮಾತನಾಡಿದ ಕಾಗೋಡು ತಿಮ್ಮಪ್ಪ, ಇದೊಂದು ಐತಿಹಾಸಿಕ ಹಾಗೂ ಮಹತ್ವದ ತಿದ್ದುಪಡಿಯಾಗಿದೆ. ಲಂಬಾಣಿ, ಹಟ್ಟಿ, ತಾಂಡಾಗಳಲ್ಲಿ ವಾಸ ಮಾಡುತ್ತಿರುವವರಿಗೆ ಖಾಯಂ ಹಕ್ಕುಪತ್ರ ನೀಡುವುದು ಈ ತಿದ್ದುಪಡಿಯ ಮುಖ್ಯ ಉದ್ದೇಶವಾಗಿದೆ ಎಂದರು.  ಹಿಂದೆ ಭೂ ಸುಧಾರಣೆ ಕಾಯ್ದೆ ಜಾರಿ ಮಾಡಿದಾಗ, ಉಳುವವನೇ ಭೂ ಒಡೆಯನ ನ್ನಾಗಿ ಮಾಡಲಾಯಿತು. ಈಗ ಅದಕ್ಕೆ ತಿದ್ದುಪಡಿ ತಂದು ವಾಸ ಮಾಡುವವರೇ ಮನೆಯ ಮಾಲೀಕ ಎಂಬುದು ಮುಖ್ಯ ಉದ್ದೇಶ. 1979ರಿಂದ ಖಾಸಗಿ ಜಮೀನು ಸೇರಿದಂತೆ ಎಲ್ಲೆಲ್ಲಿ ವಾಸ ಮಾಡುತ್ತಿದ್ದಾರೋ ಅಂತಹವರಿಗೆ ಶಾಶ್ವತವಾಗಿ ಜೀವನ ನಡೆಸಲು ಖಾಯಂ ಹಕ್ಕುಪತ್ರ ನೀಡಲಾಗುವುದು ಎಂದರು.

+ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಸ್ವಾಗತಾರ್ಹ

ಬೆಂಗಳೂರು,ಮಾ.27- ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸರ್ಕಾರ ಮಹತ್ವದ ತಿದ್ದುಪಡಿ ತಂದಿರುವುದು ಸ್ವಾಗತಾರ್ಹ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ನೂರ್ ಶ್ರೀಧರ್ ತಿಳಿಸಿದ್ದಾರೆ.   ಖಾಸಗಿ ಮತ್ತು ಸರ್ಕಾರಿ ಜಾಗದಲ್ಲಿ ನೆಲೆಸಿರುವ ಜನರಿಗೆ ನಿವೇಶನವನ್ನು ಮಂಜೂರು ಮಾಡುವುದು ಹಾಗೂ ಹಟ್ಟಿ ತಾಂಡ ಪ್ರದೇಶಗಳನ್ನು ಕಂದಾಯ ಗ್ರಾಮಗಳೆಂದು ಪರಿಗಣಿಸಿರುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.   1974ರ ಭೂ ಸುಧಾರಣಾ ಕಾಯ್ದೆಯ ನಿವೇಶನಗಳ ಮೇಲಿನ ಹಕ್ಕನ್ನು ಮಾನ್ಯಗೊಳಿಸಿದರೂ ಖಚಿತವಾದ ನೀತಿ ನಿಯಮ ಅಥವಾ ಮೇಲುಸ್ತುವಾರಿ ಸಮಿತಿ ನೇಮಿಸದಿದ್ದರೆ ಬಡವರಿಗೆ ಮತ್ತೆ ವಂಚನೆಯಾಗುವ ಸಾಧ್ಯತೆಗಳಿವೆ.

ತುಂಡು ಭೂಮಿ ಪಡೆಯಲು ಸಾಧ್ಯವಾಗದ ಲಕ್ಷಾಂತರ ಬಡ ರೈತ ಕುಟುಂಬಗಳು ಸ್ವಂತ ಭೂಮಿಗಾಗಿ, ನಿವೇಶನಕ್ಕಾಗಿ ಕಾದಿದ್ದಾರೆ. ಸರ್ಕಾರ ಈ ಎಲ್ಲರ ಅಗತ್ಯಗಳನ್ನು ಪೂರೈಸುವಂತಹ ಸಮಗ್ರ ಭೂ ಸುಧಾರಣೆಗೆ ಮುಂದಾಗಬೇಕೆಂದು ಮನವಿ ಮಾಡಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin