ವಿಧಾನಮಂಡಲದ ಸಚಿವಾಲಯದಲ್ಲಿ ತುಂಬು ತುಳುಕುತ್ತಿರುವ ಸಿಬ್ಬಂದಿ

ಈ ಸುದ್ದಿಯನ್ನು ಶೇರ್ ಮಾಡಿ

Vidhanasoudha

ಬೆಂಗಳೂರು,ಆ.10-ರಾಜ್ಯ ಸರ್ಕಾರದ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಗೃಹ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ  ಅಗತ್ಯ ಸಿಬ್ಬಂದಿ ಇಲ್ಲದೆ ವರ್ಷಗಟ್ಟಲೇ ಪರದಾಡುವ ಪರಿಸ್ಥಿತಿ ಒಂದೆಡೆಯಾದರೆ ರಾಜ್ಯ ವಿಧಾನಮಂಡಲದ ಸಚಿವಾಲಯದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿ ನೇಮಕಗೊಂಡಿದ್ದಾರೆ.  ವೈದ್ಯರಿಲ್ಲ , ಶಿಕ್ಷಕರಿಲ್ಲ, ಪೊಲೀಸ್ ಸಿಬ್ಬಂದಿ ಇಲ್ಲ ಎಂಬ ಕೂಗು ಪದೇ ಪದೇ ಕೇಳಿ ಬರುತ್ತಿದ್ದರೂ ಸರ್ಕಾರ ಈ ಸಮಸ್ಯೆಯನ್ನು ಪೂರ್ಣ ಪ್ರಮಾಣದಲ್ಲಿ ಇದುವರೆಗೂ ಪರಿಹರಿಸಿಲ್ಲ. ಆದರೆ ವಿಧಾನ ಮಂಡಲದ ವಿಧಾನಸಭೆ ಮತ್ತು ವಿಧಾನಪರಿಷತ್‍ನ ಸಚಿವಾಲಯದಲ್ಲಿ ಬಹಳಷ್ಟು ಮಂದಿಗೆ ಕೆಲಸವೇ ಇಲ್ಲ ಎಂಬ ಮಾಹಿತಿಯನ್ನು ಉನ್ನತ ಮೂಲಗಳು ತಿಳಿಸಿವೆ.   ದೇಶದ ಯಾವುದೇ ರಾಜ್ಯದ ವಿಧಾನ ಮಂಡಲದಲ್ಲಿ ಇಲ್ಲದಷ್ಟು ಸಿಬ್ಬಂದಿ ನಮ್ಮ ಉಭಯ ಸದನಗಳ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ವಿಧಾನಸಭೆ ಉಸ್ತುವಾರಿ ಕಾರ್ಯದರ್ಶಿ ಎಸ್.ಮೂರ್ತಿ ಸ್ಪಷ್ಟಪಡಿಸಿದ್ದಾರೆ.

ಸುಮಾರು 1300ಕ್ಕೂ ಹೆಚ್ಚು ಸಿಬ್ಬಂದಿ ಉಭಯ ಸದನಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಹಳಷ್ಟು ಮಂದಿಗೆ ಮಾಡಲು ಕೆಲಸವೇ ಇಲ್ಲದಂತಹ ಪರಿಸ್ಥಿತಿ ಇದೆ. ಕಾಲಕಾಲಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ.  ಪ್ರತಿಯೊಂದಕ್ಕೂ ತಕರಾರು ತೆಗೆಯುವ ಹಣಕಾಸು ಇಲಾಖೆ ಕೂಡ ಇಷ್ಟೊಂದು ಸಿಬ್ಬಂದಿ ನೇಮಕಕ್ಕೆ ಅನುಮೋದನೆ ನೀಡಿರುವುದು ಕೂಡ ಕುತೂಹಲ ಕೆರಳಿಸಿದೆ.  ನಮ್ಮ ರಾಜ್ಯದಂತೆ ಉಭಯ ಸದನಗಳನ್ನು ಹೊಂದಿರುವ ಹಾಗೂ ರಾಜ್ಯದಲ್ಲಿ ಎರಡು ಕಡೆ ಅಧಿವೇಶನ ನಡೆಸುವ ಮಹಾರಾಷ್ಟ್ರದಲ್ಲಿರುವುದು ಸುಮಾರು 344 ಸಿಬ್ಬಂದಿ ಮಾತ್ರ. ಇದನ್ನು ಗಮನಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪನವರು ವಿಧಾನಸಭಾಧ್ಯಕ್ಷರಾಗಿದ್ದಾಗ ಖಾಲಿ ಇದ್ದ 41 ವಿವಿಧ ಹುದ್ದೆಗಳನ್ನು  ರದ್ದುಪಡಿಸಿದ್ದಾರೆ.
ವಿಧಾನ ಸಭಾಧ್ಯಕ್ಷರು, ವಿಧಾನಪರಿಷತ್‍ನ ಸಭಾಪತಿ, ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರನ್ನು ಒಳಗೊಂಡ ಸಚಿವಾಲಯ ವಿಶೇಷ ಮಂಡಳಿಯ ಆದೇಶದ ಅನುಸಾರ ಪ್ರಧಾನ ಕಾರ್ಯದರ್ಶಿ, ಅಪರ ಕಾರ್ಯದರ್ಶಿ, ಸೀನಿಯರ್ ಟೈಪರೈಟರ್ ಮೆಕಾನಿಕ್‍ಗೆ ಸಂಬಂಧಿಸಿದ ತಲಾ ಒಂದೊಂದು ಹುದ್ದೆಗಳನ್ನು ರದ್ದುಪಡಿಸಲಾಗಿದೆ.

ದಲಾಯತ್ ಅಥವಾ ವಾಚ್‍ಮನ್‍ನ 36 ಹುದ್ದೆಗಳು ಹಾಗೂ ಎರಡು ಸ್ವಾಗತಗಾರರ ಹುದ್ದೆಗಳನ್ನು ರದ್ದುಪಡಿಸಲಾಗಿದೆ.   ಇದರಿಂದ ವಾರ್ಷಿಕ 8ರಿಂದ 12 ಕೋಟಿ ರೂ. ಸರ್ಕಾರಕ್ಕೆ ಉಳಿತಾಯವಾಗಲಿದೆ. ಈ ಹುದ್ದೆಗಳ ರದ್ದತಿಯಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಯಾವುದೇ ಅಡ್ಡಿ ಉಂಟಾಗುವುದಿಲ್ಲ ಎಂದು ಮೂರ್ತಿ ಸ್ಪಷ್ಟಪಡಿಸಿದರು.   ಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಹಾಗೂ ಜಗದೀಶ್ ಶೆಟ್ಟರ್ ಅವಧಿಯಲ್ಲಿ 297 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಗತ್ಯವಿಲ್ಲದಿದ್ದರೂ ಕೂಡ ಶಾಸಕರ ಭವನದ ಸ್ವಾಗತಗಾರ ಹುದ್ದೆಗೆ  25 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಇಷ್ಟು ಮಂದಿಗೆ ಕೆಲಸವೇ ಇಲ್ಲ ಎಂದು ಅವರು ಹೇಳಿದರು.

ಉಭಯ ಸದನಗಳ ಸಚಿವಾಲಯದಲ್ಲಿ ಕಾರ್ಯ ನಿರ್ವಹಣೆಗೆ ಸುಮಾರು 300 ಮಂದಿ ಸಿಬ್ಬಂದಿ ಇದ್ದರೂ ಸುಗಮವಾಗಿ ದೈನಂದಿನ ಕೆಲಸಕಾರ್ಯಗಳು ಅಡೆತಡೆಗಳಿಲ್ಲದೆ ನಡೆಯಲಿವೆ. ಈಗಾಗಲೇ 69 ಕಾರುಗಳು  ಸಚಿವಾಲಯದಲ್ಲಿದ್ದು ನಿತ್ಯ ಬಳಕೆಯಾಗುತ್ತಿರುವುದು 30ರಿಂದ 40 ಕಾರುಗಳು.  ಇನ್ನು 29 ಕಾರುಗಳ ಬಳಕೆಯೇ ಆಗುತ್ತಿಲ್ಲ. ಅಲ್ಲದೆ ಕಡಿಮೆ ಬಡ್ಡಿ ದರದಲ್ಲಿ ಶಾಸಕರಿಗೆ ಕಾರು ಖರೀದಿಸಲು 15 ಲಕ್ಷ ರೂ.ವರೆಗೂ ಸಾಲ ನೀಡುವ ಯೋಜನೆ ಜಾರಿಯಲ್ಲಿದೆ. ಪರಿಸ್ಥಿತಿ ಹೀಗಿದ್ದರೂ ಹೊಸದಾಗಿ 16 ಕಾರು ಖರೀದಿಸಲು ಸಿದ್ದತೆ ನಡೆದಿತ್ತು. ಹಣಕಾಸು ಇಲಾಖೆ ಕೂಡ ಒಪ್ಪಿಗೆ ನೀಡಿತ್ತು.  ಅಗತ್ಯಕ್ಕಿಂತ ಹೆಚ್ಚಿನ ಕಾರು ಖರೀದಿಸುವುದನ್ನು ತಪ್ಪಿಸಿದ್ದರಿಂದ ಸರ್ಕಾರಕ್ಕೆ 8 ಕೋಟಿ ರೂ. ಉಳಿತಾಯವಾಗಿದೆ  ಎಂದು ಮೂರ್ತಿ ತಿಳಿಸಿದರು.

Facebook Comments

Sri Raghav

Admin