ವಿಧಾನಸಭಾ ಚುನಾವಣೆಯಲ್ಲಿ ಕಮಲಕ್ಕೆ ಫೈರ್ ಬ್ರ್ಯಾಂಡ್ ಯೋಗಿ ಆದಿತ್ಯನಾಥ್ ಸ್ಟಾರ್ ಕ್ಯಾಂಪೇನರ್

ಈ ಸುದ್ದಿಯನ್ನು ಶೇರ್ ಮಾಡಿ

Yogi-Adityanath--01

ಬೆಂಗಳೂರು,ಜಿ.11- ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಹಾಗೂ ಹಿಂದೂ ಫೈರ್ ಬ್ರ್ಯಾಂಡ್ ನಾಯಕ ಯೋಗಿ ಆದಿತ್ಯನಾಥ್ ಸ್ಟಾರ್ ಕ್ಯಾಂಪೇನರ್(ತಾರಾ ಪ್ರಚಾರಕ) ಆಗಲಿದ್ದಾರೆ.   ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಮಂತ್ರ ಪಠಿಸಿದರೆ, ಮತ್ತೊಂದೆಡೆ ಯೋಗಿ ಹಿಂದುತ್ವ ಅಜೆಂಡಾದ ಮೂಲಕ ಮತ ಬೇಟೆ ಮಾಡಲಿದ್ದಾರೆ.  ವಿಧಾನಸಭೆ   ಚುನಾವಣೆ ವೇಳೆ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಸುಮಾರು 30ಕ್ಕೂ ಹೆಚ್ಚು ಸಾರ್ವಜನಿಕ ಸಮಾರಂಭ  ಗಳಲ್ಲಿ ಭಾಗವಹಿಸುವ   ಮೂಲಕ ಬಿಜೆಪಿ ಪರ ಮತ ಯಾಚನೆ ಮಾಡಲಿದ್ದಾರೆ.   ಕಳೆದ ಭಾನುವಾರ ಬೆಂಗಳೂರಿನ ವಿಜಯನಗರದಲ್ಲಿ ನಡೆದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಅವರು ಭಾಗವಹಿಸಿದ್ದರು.

ಈ ವೇಳೆ ಅವರಿಗೆ ಕಾರ್ಯಕರ್ತರಿಂದ ಭರ್ಜರಿ ಸ್ವಾಗತ ಸಿಕ್ಕಿದ್ದಲ್ಲದೆ ನಿರೀಕ್ಷೆಗೂ ಮೀರಿದ ಜನ ಸೇರಿದ್ದರು.   ಇದೀಗ ಬಿಜೆಪಿ ನಾಯಕರು ಯೋಗಿ ಆದಿತ್ಯನಾಥ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರಂತೆ ಸ್ಟಾರ್ ಕ್ಯಾಂಪೇನರ್ ಪಟ್ಟಿಗೆ ಸೇರಿಸಿದ್ದಾರೆ. ಈ ಮೂಲಕ ಬಿಜೆಪಿ ಹಿಂದುತ್ವದ ಅಜೆಂಡಾದ ಮೇಲೆಯೇ ಚುನಾವಣೆ ಎದುರಿಸುವುದು ಬಹುತೇಕ ಖಚಿತವಾಗಿದೆ.   ಯೋಗಿ ಆದಿತ್ಯನಾಥ್ ಪ್ರಚಾರ ನಡೆಸುವುದರಿಂದ ಪಕ್ಷಕ್ಕೆ ಯಾವ ಯಾವ ಭಾಗದಲ್ಲಿ ಲಾಭವಾಗಲಿದೆ ಎಂಬುದನ್ನು ಪಟ್ಟಿ ನೀಡಬೇಕೆಂದು ಕೇಂದ್ರ ವರಿಷ್ಠರು ಸೂಚಿಸಿದ್ದರು. ಈ ಪ್ರಕಾರ ರಾಜ್ಯದ ಕರಾವಳಿ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕಾರವಾರ, ಕೊಡಗು, ಮಲೆನಾಡಿನ ಭಾಗವಾದ ಚಿಕ್ಕಮಗಳೂರು, ಶಿವಮೊಗ್ಗ , ಬೆಳಗಾವಿ ಹಾಗೂ ಬಿಜೆಪಿ ಪ್ರಾಬಲ್ಯವಿರುವ ಹುಬ್ಬಳ್ಳಿ-ಧಾರವಾಡ, ದಾವಣಗೆರೆ, ಬಳ್ಳಾರಿ, ಕಲ್ಬುರ್ಗಿ, ಬೆಂಗಳೂರು ಮತ್ತಿತರ ಕಡೆ ಅವರು ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಚುನಾವಣಾ ಸಂದರ್ಭದಲ್ಲಿ 30ಕ್ಕೂ ಹೆಚ್ಚು ಸಾರ್ವಜನಿಕ ಸಮಾರಂಭಗಳಲ್ಲಿ ಯೋಗಿ ಪಾಲ್ಗೊಳ್ಳಲಿದ್ದಾರೆ. ಯಾವ ಯಾವ ನಾಯಕರು ಚುನಾವಣಾ ವೇಳೆ ಪ್ರಚಾರ ನಡೆಸಬೇಕು ಎಂಬುದನ್ನು ಈಗಾಗಲೇ ಕೇಂದ್ರ ನಾಯಕರು ಕಾರ್ಯಕ್ರಮದ ಪಟ್ಟಿ ಸಿದ್ದಪಡಿಸುವತ್ತ ಮಗ್ನರಾಗಿದ್ದಾರೆ.

ಒಕ್ಕಲಿಗರ ಮತದ ಮೇಲೆ ಕಣ್ಣು:

ಅಂದಹಾಗೆ ಯೋಗಿ ಆದಿತ್ಯನಾಥ್ ತಮ್ಮ ಪ್ರಚಾರದ ಸಂದರ್ಭದಲ್ಲಿ ಒಕ್ಕಲಿಗರ ಮತಗಳ ಮೇಲೆ ವಿಶೇಷವಾಗಿ ಕೇಂದ್ರೀಕರಿಸಲಿದ್ದಾರೆ.   ಒಕ್ಕಲಿಗರ ಮತಗಳ ಪ್ರಾಬಲ್ಯವಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ, ಹಾಸನ, ಮೈಸೂರು ಮತ್ತಿತರ ಕಡೆ ಈ ಸಮುದಾಯವು ಜೆಡಿಎಸ್ ಜೊತೆ ಗುರುತಿಸಿಕೊಂಡಿದೆ. ಜೊತೆಗೆ ಈ ಪ್ರದೇಶದಲ್ಲಿ ಬಿಜೆಪಿ ಈಗಲೂ ಸಂಘಟನೆಯ ಕೊರತೆ ಎದುರಿಸುತ್ತಿದೆ.   ಈ ಬಾರಿಯ ಚುನಾವಣೆಯಲ್ಲಿ ಒಕ್ಕಲಿಗ ಮತಕ್ಕೆ ಲಗ್ಗೆ ಇಟ್ಟರೆ ಮಾತ್ರ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಕನಸು ನನಸಾಗುತ್ತದೆ ಎಂಬುದು ಬಿಜೆಪಿ ನಾಯಕರಿಗೆ ಅರಿವಾಗಿದೆ.  ಹೀಗಾಗಿ ದಕ್ಷಿಣ ಕರ್ನಾಟಕದಲ್ಲಿ ವಿಶೇಷವಾಗಿ ಜೆಡಿಎಸ್ ಪ್ರಾಬಲ್ಯ ಸಾಧಿಸಿರುವ ಒಕ್ಕಲಿಗರ ಮತಗಳನ್ನು ಛಿದ್ರ ಮಾಡಲು ತನ್ನದೇ ಆದ ರಣತಂತ್ರ ರೂಪಿಸಿದೆ. ಹೀಗಾಗಿಯೇ ಕಳೆದ ಎರಡು ತಿಂಗಳ ಹಿಂದೆ ರಾಜ್ಯಕ್ಕೆ ಆಗಮಿಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಮಾಡಿದ್ದರು.

ಇನ್ನೂ ಶನಿವಾರ ರಾತ್ರಿ ಯೋಗಿ ಆದಿತ್ಯನಾಥ್ ಯಾವುದೇ ಪಂಚತಾರಾ ಹೋಟೆಲ್‍ನಲ್ಲಿ ವಾಸ್ತವ್ಯ ಹೂಡದೆ ನೆರವಾಗಿ ಕುಂಬಗೋಡಿನಲ್ಲಿರುವ ಆದಿಚುಂಚನಗಿರಿಯ ವಸತಿ ಶಾಲೆಯಲ್ಲಿ ತಂಗಿದರು.   ಈ ವೇಳೆ ಆದಿತ್ಯನಾಥ್ ಅವರಿಗೆ ಎಲ್ಲ ರೀತಿಯ ಉಪಚಾರವನ್ನು ಆದಿಚುಂಚನಗಿರಿ ಪೀಠ ಡಾ.ಶ್ರೀ ನಿರ್ಮಲಾನಂದ ಸ್ವಾಮೀಜಿಯವರು ನೋಡಿಕೊಂಡರು.   ಉತ್ತರಪ್ರದೇಶದ ಗೋರಖ್‍ನಾಥ್‍ಪುರದಲ್ಲಿರುವ ಪೀಠಕ್ಕೂ, ಆದಿಚುಂಚನಗಿರಿ ಪೀಠಕ್ಕೂ ಶತಮಾನಗಳಿಂದಲೂ ಅವಿನಾಭವ ಸಂಬಂಧವಿದೆ. ಎರಡೂ ಮಠಗಳು ನಾಥ ಸಂಪ್ರದಾಯವನ್ನು ಪರಿಪಾಲನೆ ಮಾಡುತ್ತವೆ. ಹೀಗಾಗಿ ಜೆಡಿಎಸ್‍ನ ನೆಚ್ಚಿಕೊಂಡಿರುವ ಒಕ್ಕಲಿಗರ ಮತಗಳಿಗೆ ಲಗ್ಗೆ ಇಟ್ಟರೆ ಶಕ್ತಿಸೌಧದಲ್ಲಿ ಅಧಿಕಾರ ಹಿಡುವ ಕನಸು ನನಸಾಗಲಿದೆ ಎಂಬುದು ಬಿಜೆಪಿ ಚಿಂತಕರ ಛಾವಡಿಯ ಲೆಕ್ಕಾಚಾರ.

Facebook Comments

Sri Raghav

Admin