ವಿಧಾನಸಭೆಯಲ್ಲಿ ನಾಳೆ ನಡೆಯುವ ‘ನಂಬರ್ ಗೇಮ್’ನಲ್ಲಿ ಗೆಲ್ಲೋರ್‍ಯಾರು..?

ಈ ಸುದ್ದಿಯನ್ನು ಶೇರ್ ಮಾಡಿ

Number-Game

ಬೆಂಗಳೂರು, ಮೇ 18- ನಾಳೆಯೇ ವಿಶ್ವಾಸಮತ ಸಾಬೀತಿಗೆ ಸುಪ್ರೀಂಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಅಧಿವೇಶನ ಕರೆಯಲು ಸೂಚನೆ ರವಾನೆಯಾಗಿದೆ. ಹಂಗಾಮಿ ಸ್ಪೀಕರ್ ನೇಮಕವನ್ನು ರಾಜ್ಯಪಾಲರು ತತ್‍ಕ್ಷಣ ಮಾಡಬೇಕಿದೆ. ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ಬಹುಮತ ಸಾಬೀತು ಪ್ರಕ್ರಿಯೆ ನಡೆಯಲಿದೆ. ಈ ಎಲ್ಲ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಹಾಗೂ ವಿಧಾನಸೌಧದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿವೆ.ನಾಳೆ ನಡೆಯಲಿರುವ ವಿಶ್ವಾಸಮತ ಪೂರ್ಣವಾಗಿ ನಂಬರ್ ಗೇಮ್ ಮೇಲೆ ನಡೆಯಲಿದೆ. ಆಪರೇಷನ್ ಕಮಲ ಭೀತಿಯಲ್ಲಿ ಹೈದರಾಬಾದ್‍ಗೆ ತೆರಳಿದ್ದ ಕಾಂಗ್ರೆಸ್-ಜೆಡಿಎಸ್ ಶಾಸಕರು ಬೆಂಗಳೂರಿಗೆ ಇಂದೇ ಹಿಂದಿರುಗಲಿದ್ದಾರೆ. ಬಿಜೆಪಿಯಲ್ಲೂ ಕೂಡ ಬಿರುಸಿನ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿವೆ.

104 ಸದಸ್ಯ ಬಲ ಹೊಂದಿರುವ ಬಿಜೆಪಿ, ಬಹುಮತ ಸಾಬೀತಿಗೆ ಯಾವ ಕಸರತ್ತು ನಡೆಸಲಿದೆ ಎಂಬುದರ ಬಗ್ಗೆ ತೀವ್ರ ಕುತೂಹಲ ಮನೆ ಮಾಡಿದೆ.
ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ರಚನೆ ಹಕ್ಕನ್ನು ಪ್ರತಿಪಾದಿಸಲಿದೆ. ಹೇಗಾದರೂ ಮಾಡಿ ಬಹುಮತ ಸಾಬೀತು ಮಾಡಬೇಕೆಂದು ಬಿಜೆಪಿ ಪ್ರಯತ್ನ ಮುಂದುವರಿಸಿದೆ. ತಮ್ಮ ಶಾಸಕರನ್ನು ಆಪರೇಷನ್ ಕಮಲ ಭೀತಿಗೆ ಒಳಗಾಗದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಕಾಯ್ದುಕೊಂಡಿದ್ದಾರೆ. ನಾಳೆ ಸಂಜೆ 4 ಗಂಟೆಗೆ ಅಧಿವೇಶನ ನಡೆಯಲಿದ್ದು, ಅಲ್ಲಿಯವರೆಗೆ ನಿರಂತರ ರಾಜಕೀಯ ಚಟುವಟಿಕೆಗಳು ಮುಂದುವರಿಯಲಿವೆ.

ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತರೊಂದಿಗೆ ರಾತ್ರಿಯಿಡೀ ಸಮಾಲೋಚನೆ ನಡೆಸಿ ಇಂದು ಬೆಳಗ್ಗೆ ತಮ್ಮ ಪುತ್ರನ ನಿವಾಸಕ್ಕೆ ತೆರಳಿ ಅಲ್ಲಿ ವಿಶ್ರಾಂತಿ ಪಡೆದು ತಮ್ಮ ನಿವಾಸಕ್ಕೆ ಆಗಮಿಸಿದರು. ಈಗಷ್ಟೆ ಸುಪ್ರೀಂಕೋರ್ಟ್ ಆದೇಶ ಹೊರಬಿದ್ದಿದ್ದು, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ತುರ್ತು ಸಭೆ ನಡೆಸಿದ್ದಾರೆ. ಪಕ್ಷದ ವರಿಷ್ಠರು, ಆಪ್ತರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಇತ್ತ ಬಹುಮತ ಸಾಬೀತಾಗದಂತೆ ನೋಡಿಕೊಳ್ಳಬೇಕೆಂದು ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ಕೂಡ ಎಚ್ಚರಿಕೆಯ ಹೆಜ್ಜೆ ಇಡುತ್ತಿವೆ. ಇಂದು ಕಾಂಗ್ರೆಸ್ ಪಕ್ಷದವರು ರಾಜ್ಯಪಾಲರ ಕ್ರಮ ಖಂಡಿಸಿ ರಾಜಭವನದೆದುರು ಪ್ರತಿಭಟನೆ ನಡೆಸಿದರು.

ನಾಳೆ ನಡೆಯಲಿರುವ ವಿಶ್ವಾಸಮತ ಪೂರ್ಣವಾಗಿ ನಂಬರ್ ಗೇಮ್ ಮೇಲೆ ನಡೆಯಲಿದೆ. ಈಗಿರುವ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತು ಪಕ್ಷೇತರರ ಬಲಾಬಲ ಈ ಕೆಳಕಂಡಂತಿದೆ:
ಬಿಜೆಪಿ 104
ಕಾಂಗ್ರೆಸ್ 78
ಜೆಡಿಎಸ್ 37
ಬಿಎಸ್‍ಪಿ 01
ಪಕ್ಷೇತರ 02
ಒಟ್ಟು 222
ಸದಸ್ಯರ ಬಲದಲ್ಲಿ ಬಹುಮತ ಪಡೆಯಲು 112 ಸದಸ್ಯರ ವಿಶ್ವಾಸ ಪಡೆಯಬೇಕಾಗಿದೆ.   ಕಾಂಗ್ರೆಸ್-ಜೆಡಿಎಸ್, ಪಕ್ಷೇತರ, ಬಿಎಸ್‍ಪಿ ಮೈತ್ರಿ ನಂ.118 ಆಗುತ್ತದೆ. ಬಿಜೆಪಿಯ ನಂ.104 ಇದೆ. ಬಿಜೆಪಿ ನಾಳಿನ ವಿಶ್ವಾಸಮತದಲ್ಲಿ ಗೆಲುವು ಸಾಧಿಸಬೇಕಾದರೆ 112 ಸದಸ್ಯರ ಬೆಂಬಲ ಪಡೆಯಬೇಕು. ಕುಮಾರಸ್ವಾಮಿ ಅವರು ಎರಡೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿರುವುದರಿಂದ ಎರಡು ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ಅವರು ಒಂದೇ ಮತ ಚಲಾಯಿಸಬೇಕು. ಆಗ ಸದಸ್ಯರ ಬಲ 221 ಆಗುತ್ತದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin