ವಿಧಾನಸಭೆಯಲ್ಲಿ ಸರಕು-ಸೇವೆಗಳ ತೆರಿಗೆ ವಿಧೇಯಕ(ಜಿಎಸ್‍ಟಿ)-2017 ಮಂಡನೆ

ಈ ಸುದ್ದಿಯನ್ನು ಶೇರ್ ಮಾಡಿ

CM-Session--01

ಬೆಂಗಳೂರು, ಜೂ.7- ಕೇಂದ್ರ ಸರ್ಕಾರ ಜುಲೈ 1ರಿಂದ ದೇಶಾದ್ಯಂತ ಜಾರಿಗೆ ತರಲು ಉದ್ದೇಶಿಸಿರುವ ಏಕರೂಪದ ಸರಕು ಸೇವೆಗಳ ಕಾಯ್ದೆ (ಜಿಎಸ್‍ಟಿ) ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರ್ನಾಟಕ ಸರಕು ಮತ್ತು ಸೇವೆಗಳ ತೆರಿಗೆ ವಿಧೇಯಕ-2017ನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಎಲ್ಲ ರಾಜ್ಯಗಳಿಗೂ ಅನ್ವಯವಾಗುವ ಜಿಎಸ್‍ಟಿ ಕಾಯ್ದೆಯನ್ನು ಉಭಯ ಸದನಗಳ ಒಪ್ಪಿಗೆಗಾಗಿ ಮಂಡಿಸಲಾಗಿದೆ. ವಿಧೇಯಕದ ಬಗ್ಗೆ ಚರ್ಚೆ ಮಾಡಿ ಅಭಿಪ್ರಾಯ ಹೇಳಿದರೂ ನಾವು ಪರಿಹಾರ ನೀಡಲು ಸಾಧ್ಯವಿಲ್ಲ. ಆದರೆ, ಜಿಎಸ್‍ಟಿ ಕುರಿತ ಪರಿಷತ್ ಸಭೆಯಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿ, ಹಣಕಾಸು ಸಚಿವರಿದ್ದು, ಅಲ್ಲಿ ಅಭಿಪ್ರಾಯ ಹೇಳಬಹುದಾಗಿದೆ. ಶಾಸಕರ ಅಭಿಪ್ರಾಯವನ್ನು ಆ ಸಭೆಯಲ್ಲಿ ಹೇಳಬಹುದು ಎಂದರು.ಶೇ.14ರಷ್ಟು ತೆರಿಗೆ ಇರಬೇಕೆಂಬುದು ಒಂದು ಮಾನದಂಡವಾಗಿದೆ. ಹೆಚ್ಚು ತೆರಿಗೆ ವಸೂಲಿ ಮಾಡುವ ರಾಜ್ಯಗಳಿಗೆ ಈ ತೆರಿಗೆಯಿಂದ ತೊಂದರೆಯಾಗಲಿದ್ದು, ಮುಂದಿನ ಐದು ವರ್ಷಗಳವರೆಗೆ ತೆರಿಗೆ ಪರಿಹಾರ ಕೊಡಲು ಕೇಂದ್ರ ಸರ್ಕಾರ ಒಪ್ಪಿದೆ ಎಂದರು. ಸಚಿವರಾದ ಮಹದೇವಪ್ಪ ಮತ್ತು ಕೃಷ್ಣಭೈರೇಗೌಡ ಅವರು ಜಿಎಸ್‍ಟಿ ಮಂಡಳಿ ಸಭೆಗೆ ಹಾಜರಾಗಿದ್ದರು. ಅವರ ಮೂಲಕ ಶಾಸಕರಿಗೊಂದು ಕಾರ್ಯಾಗಾರ ಆಯೋಜಿಸಿ ಚರ್ಚೆ ಮಾಡೋಣ ಎಂದರು.  ಲೋಕಸಭೆಯಲ್ಲಿ ಜಿಎಸ್‍ಟಿ ವಿಧೇಯಕ ಮಂಡನೆಯಾದಾಗ 17 ಬಿಜೆಪಿ ಸಂಸದರು, ಮಾಜಿ ಪ್ರಧಾನಿ ದೇವೇಗೌಡರು, ಮಂಡ್ಯ ಸಂಸದ ಪುಟ್ಟರಾಜು ಎಲ್ಲರೂ ಇದ್ದರು. ಅಲ್ಲಿ ಏನೂ ಹೇಳಲಿಲ್ಲವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ದತ್ತ ಅವರಿಗೆ ಮರುಪ್ರಶ್ನೆ ಹಾಕಿದರು.

ಇದಕ್ಕೂ ಮುನ್ನ ಮಾತನಾಡಿದ ದತ್ತ ಅವರು, ಜಿಎಸ್‍ಟಿ ಜಾರಿಯಿಂದ ರಾಜ್ಯ ಸರ್ಕಾರದ ಅಧಿಕಾರಕ್ಕೆ ಕತ್ತರಿ ಬೀಳಲಿದೆ. ಕರ್ನಾಟಕ ಸಾಮಂತ ರಾಜ್ಯವಾಗಲಿದೆ. ಪ್ರಧಾನಿ ಮೋದಿ ಚಕ್ರವರ್ತಿಯಾಗಲಿದ್ದು, ನಾವು ಭಿಕ್ಷಾಪಾತ್ರೆ ಹಿಡಿಯಬೇಕಾಗುತ್ತದೆ ಎಂದರು. ಜಿಎಸ್‍ಟಿಯನ್ನು ನಮ್ಮ ಪಕ್ಷ ಮೊದಲಿನಿಂದಲೂ ವಿರೋಧಿಸುತ್ತದೆ ಎಂದು ದತ್ತ ಹೇಳಿದಾಗ, ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ನಿಮ್ಮ ಪಕ್ಷ ಸಂಸತ್‍ನಲ್ಲಿ ಜಿಎಸ್‍ಟಿ ವಿರೋಧ ಮಾಡಿದ್ದರೆ ಅದರ ದಾಖಲೆ ಇದ್ದರೆ ಕೊಡಿ ಎಂದು ಹೇಳಿದರು. ಮುಖ್ಯಮಂತ್ರಿಯವರ ಸಲಹೆ ಮೇರೆಗೆ ನಾಳೆ ಬೆಳಗ್ಗೆ 9 ಗಂಟೆಗೆ ಜಿಎಸ್‍ಟಿ ಕುರಿತ ವಿಚಾರಗೋಷ್ಠಿ ಏರ್ಪಡಿಸಿರುವುದಾಗಿ ಸಭಾಧ್ಯಕ್ಷ ಕೆ.ಬಿ.ಕೋಳಿವಾಡ ತಿಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin