ವಿಧಾನಸಭೆಯಲ್ಲಿ ಹುತಾತ್ಮರಾದ ಯೋಧರು ಮತ್ತು ನಿಧನರಾದ ಗಣ್ಯರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಈ ಸುದ್ದಿಯನ್ನು ಶೇರ್ ಮಾಡಿ

Session--01

ಬೆಂಗಳೂರು,ಫೆ.6-ಸಚಿವರಾಗಿದ್ದ ಎಚ್. ಎಸ್.ಮಹದೇವಪ್ರಸಾದ್, ಮಾಜಿ ಸಚಿವರಾದ ಡಾ.ಎಂ.ಶಂಕರ್ ನಾಯಕ್, ರಾಜವರ್ಧನ್, ವಿಧಾನಸಭೆಯ ಮಾಜಿ ಸದಸ್ಯರಾದ ಬಿರಾದಾರ್ ಮಲ್ಲನಗೌಡ ದೌವಲತ್‍ರಾಯ್, ಪಟ್ಟಮಕಿ ರತ್ನಾಕರ, ಯು.ಭೂಪತಿ, ವಿ.ಪಾಪಣ್ಣ , ಜಮ್ಮುಕಾಶ್ಮೀರದ ಹಿಮಪಾತದ ದುರಂತದಲ್ಲಿ ಹುತಾತ್ಮರಾದ ವೀರ ಯೋಧರಿಗೆ ವಿಧಾನಸಭೆಯಲ್ಲಿಂದು ಭಾವಪೂರ್ಣ ಸಂತಾಪ ಸೂಚಿಸಲಾಯಿತು.  ರಾಜ್ಯಪಾಲರ ಭಾಷಣದ ನಂತರ ಸದನ ಸಮಾವೇಶಗೊಂಡಾಗ ಸದನವು ಒಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭವಾಯಿತು.
ಸಭಾಧ್ಯಕ್ಷ ಕೋಳಿವಾಡ ಅವರು ಸಂತಾಪ ಸೂಚಕ ನಿರ್ಣಯ ಮಂಡಿಸಿ ಮಹದೇವಪ್ರಸಾದ್ ಸೇರಿದಂತೆ ಮಾಜಿ ಸಚಿವರು, ಮಾಜಿ ಶಾಸಕರು ಹಾಗೂ ವೀರ ಯೋಧರು ನಿಧನರಾಗಿರುವುದನ್ನು ವಿಷಾದಿಂದ ತಿಳಿಸಿದ ನಂತರ ಮೃತರ ಗುಣಗಾನ ಮಾಡಿ ಮೃತರ ಆತ್ಮಕ್ಕೆ ಶಾಂತಿ ಕೋರಿದರು.

ಜಮ್ಮು-ಕಾಶ್ಮೀರ ಪ್ರದೇಶದ ಗುರೇಜ್‍ನಲ್ಲಿ ಜ.25ರಂದು ಬೆಳಗಿನ ಜಾವ ಹಿಮಪಾತದಲ್ಲಿ ಸಿಲುಕಿ 25 ಮಂದಿ ಯೋಧರು ಹುತಾತ್ಮರಾದರಲ್ಲಿ ಹಾಸನ ಜಿಲ್ಲೆಯ ಸಂದೀಪ್‍ಕುಮಾರ್ ಅವರೂ ವೀರಮರಣವನ್ನಪ್ಪಿದ್ದಾರೆ ಎಂದು ವಿಷಾದಿಸಿದರು.  2010ರಲ್ಲಿ ಸೇನೆಗೆ ಸೇರಿದ್ದ ಸಂದೀಪ್‍ಕುಮಾರ್ ಪ್ರಸ್ತುತ ಜಮ್ಮು-ಕಾಶ್ಮೀರದ 51ನೆ ಇನ್‍ಫೆಂಟ್ರಿ ರೆಜಿಮೆಂಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಿಮಪಾತದಿಂದ ನಿಧನರಾಗಿರುವುದು ದುಃಖ ತಂದಿದೆ. ಅವರ ಕುಟುಂಬ ವರ್ಗದವರಿಗೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯ ಬೆಂಬಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾಗಿದ್ದ ಮಹದೇವಪ್ರಸಾದ್ ಅವರು ಸರಳ, ಸಜ್ಜನ, ಅಜಾತಶತ್ರು ರಾಜಕಾರಣಿಯಾಗಿದ್ದರು. 1980ರಿಂದಲೂ ತಮಗೆ ಪರಿಚಿತರಾಗಿದ್ದು , ಎಲ್ಲ ಪಕ್ಷದವರೊಂದಿಗೂ ಸ್ನೇಹ ಹೊಂದಿದ್ದರು ಎಂದರು.

ಚಾಮರಾಜನಗರ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಬಹಳಷ್ಟು ಪ್ರಯತ್ನಿಸಿದ್ದ ಮಹದೇವಪ್ರಸಾದ್ ಅವರ ನಿಧನದಿಂದ ಪಕ್ಷಕ್ಕೆ ದೊಡ್ಡ ನಷ್ಟ ಉಂಟಾಗಿದೆ ಎಂದು ವಿಷಾದಿಸಿದರು.
ವಿರೋಧ ಪಕ್ಷದ ನಾಯಕ ಜಗದೀಶ್‍ಶೆಟ್ಟರ್ ಮಾತನಾಡಿ, ಮಹದೇವಪ್ರಸಾದ್ ಅವರು ಶಾಂತಿಪ್ರಿಯರು. ತಾಳ್ಮೆಯ ರಾಜಕಾರಣಿ. ಟೀಕೆಗಳನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತಿದ್ದರೆಂದು ಸ್ಮರಿಸಿದರು.  ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ವೈ.ಎಸ್.ವಿ.ದತ್ತ ಮಾತನಾಡಿ, ಮಹದೇವಪ್ರಸಾದ್ ಅವರು ನಿಗರ್ವಿ ರಾಜಕಾರಣಿಯಾಗಿದ್ದು, ಬದ್ಧತೆಯಿಂದ ಕೆಲಸ ಮಾಡಿದ್ದರು. ನಾಗಪ್ಪ ಅವರನ್ನು ವೀರಪ್ಪನ್ ಅಪಹರಿಸಿ ಹತ್ಯೆ ಮಾಡಿದ್ದ ಸಂದರ್ಭದಲ್ಲಿ ಅವರ ಕುಟುಂಬದ ಜೊತೆಗಿದ್ದು, ಹಗಲಿರುಳು ಶ್ರಮಿಸಿದ್ದರು ಎಂದು ಸ್ಮರಿಸಿದರು.

ಆಡಳಿತ ಪಕ್ಷದ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರು ಕೂಡ ಅಗಲಿದ ಗಣ್ಯರಿಗೆ, ಹುತಾತ್ಮ ಯೋಧರಿಗೆ ಸಂತಾಪ ವ್ಯಕ್ತಪಡಿಸಿದರು. ನಂತರ ಮೃತರ ಗೌರವಾರ್ಥ ಸದನದಲ್ಲಿ ಒಂದು ನಿಮಿಷ ಮೌನಾಚರಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin