ವಿನೋದ್ ಪ್ರಭಾಕರ್ ಚಿತ್ರಕ್ಕೆ ದರ್ಶನ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

vinodh-Prabakar
ಚಂದನವನದಲ್ಲಿ ಸ್ಟಾರ್ ನಟರುಗಳ ಚಿತ್ರಗಳು ಒಂದರ ಹಿಂದೆ ಒಂದರಂತೆ ಬರುತ್ತಲೇ ಇವೆ. ಆ ನಿಟ್ಟಿನಲ್ಲಿ ಒಬ್ಬ ಸ್ಟಾರ್ ನಟನಿಗೆ ಮತ್ತೊಬ್ಬ ಸ್ಟಾರ್ ನಟ ಬಂದು ಶುಭ ಕೋರುವುದು ಸರ್ವೆ ಸಾಮಾನ್ಯ. ಆದರೆ, ವಿಶೇಷವಾಗಿ ಪ್ರೀತಿಯ ಗೆಳೆಯ ವಿನೋದ್ ಪ್ರಭಾಕರ್ ಅಭಿನಯಿಸುತ್ತಿರುವ ನೂತನ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಆಗಮಿಸಿದ್ದು ವಿಶೇಷವಾಗಿತ್ತು. ಕನಕದುರ್ಗ ಚಲನಚಿತ್ರ ಹಾಗೂ ಬೆಂಗಳೂರು ಕುಮಾರ್ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಇನ್ನೂ ಹೆಸರಿಡದ ಹೊಸ ಚಿತ್ರದ ಮುಹೂರ್ತ ಸಮಾರಂಭ ಕಳೆದ ಶುಕ್ರವಾರ ಬೆಂಗಳೂರಿನ ದೊಡ್ದ ಗಣಪತಿ ದೇವಸ್ಥಾನದಲ್ಲಿ ನೆರವೇರಿತು.

ಇಲ್ಲಿಯವರೆಗೂ ಐದು ವರ್ಷದ ಸಿ.ಎಂ ನೋಡಿದಿರಾ, ಎರಡು, ಮೂರ್ ವರ್ಷದ ಸಿ.ಎಂ ನೋಡಿದಿರಾ, ಒಂದು ದಿನದ ಸಿಎಂ ನು ನೋಡಿದಿರಾ ಆದ್ರೆ ಲೈಫ್ ಟೈಮ್ ಸಿ.ಎಂ ನ ನೋಡಿಲ್ಲ ಅಲ್ವಾ? ನೋಡ್ತಿರಾ.. A Cm With out Protocol ಎಂದು ನಾಯಕ ವಿನೋದ್ ಪ್ರಭಾಕರ್ ಹೇಳುವ ಪ್ರಥಮ ಸಂಭಾಷಣೆಗೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಆರಂಭ ಫಲಕ ತೋರಿದರು. ದೇವೇಂದರ್ ಕ್ಯಾಮೆರಾ ಚಾಲನೆ ಮಾಡಿದರು.

ಕನ್ನಡ ಚಿತ್ರರಂಗದಲ್ಲಿ ಮರಿ ಟೈಗರ್ ಎಂದೇ ಖ್ಯಾತರಾಗಿರುವ ನಟ ವಿನೋದ್ ಪ್ರಭಾಕರ್ ಈ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವವರು ರವಿಗೌಡ. ಕಳೆದ ಐದು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿರುವ ರವಿಗೌಡ ಈ ಹಿಂದೆ ಪೂರಿ ಜಗನ್ನಾಥ್, ಬಹದ್ದೂರ್ ಚೇತನ್ ಅವರ ಬಳಿ ಕೆಲಸ ಮಾಡಿ ಅನುಭವ ಹೊಂದಿದ್ದಾರೆ. ಈ ಚಿತ್ರವನ್ನು ಚಕ್ರವರ್ತಿ ಸಿ.ಹೆಚ್. ಹಾಗೂ ಕುಮಾರ್ ಬಿ. ಸೇರಿ ನಿರ್ಮಾಣ ಮಾಡುತ್ತಿದ್ದಾರೆ.

ದರ್ಶನ್ ಆತ್ಮೀಯ ಸ್ನೇಹಿತರಲ್ಲಿ ವಿನೋದ್ ಪ್ರಭಾಕರ್ ಕೂಡ ಒಬ್ಬರು. ಅವರ ಅಭಿನಯದ ಬಹುತೇಕ ಚಿತ್ರಗಳಿಗೆ ದರ್ಶನ್ ಅವರೇ ಕ್ಲಾಪ್ ಮಾಡುತ್ತಾರೆ. ಅದೇ ರೀತಿ ಈ ಚಿತ್ರದ ಮುಹೂರ್ತಕ್ಕೂ ಬಂದು ಶುಭ ಹಾರೈಸಿದ್ದಾರೆ. ಔಟ್ ಅಂಡ್ ಔಟ್ ಕಮರ್ಷಿಯಲ್ ಚಿತ್ರವಾಗಿದ್ದು, ಹೆಸರಾಂತ ನಾಯಕಿ ವಿನೋದ್ ಪ್ರಭಾಕರ್‍ಗೆ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಸಂಭಾಷಣೆಯನ್ನು ರವಿಗೌಡ ಹಾಗೂ ವಿಜಯ್ ರಚಿಸಿದ್ದಾರೆ. ಮನೋಹರ್ ಜೋಶಿ ಅವರ ಛಾಯಾಗ್ರಹಣ, ಅಚು ಅವರ ಸಂಗೀತ ನಿರ್ದೇಶನ, ಮೋಹನ್ ನೃತ್ಯ ನಿರ್ದೇಶನ, ವಿನೋದ್ ಅವರ ಸಾಹಸ ಈ ಚಿತ್ರಕ್ಕಿದೆ. ವಿನೋದ್ ಪ್ರಭಾಕರ್, ಕುರಿ ಪ್ರತಾಪ್, ವಿಜಯ್ ಚೆಂಡೂರ್, ತಬಲ ನಾಣಿ ಮತ್ತಿತರರು ತಾರಾಬಳಗದಲ್ಲಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin