ವಿಪಕ್ಷಗಳನ್ನು ಪಾಕಿಸ್ತಾನಕ್ಕೆ ಹೋಲಿಸಿದ ಪ್ರಧಾನಿ ನರೇಂದ್ರ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

NJarednra--------modiu

ವಾರಣಾಸಿ,ಡಿ.22-ಕಾಳಧನ ಮತ್ತು ಭ್ರಷ್ಟಾಚಾರ ನಿರ್ಮೂಲನೆಗಾಗಿ ಕೇಂದ್ರ ಸರ್ಕಾರ ಕೈಗೊಂಡಿರುವ ನೋಟು ರದ್ದತಿಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷಗಳ ವರ್ತನೆಯನ್ನು ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಹೋಲಿಸಿ ವಾಗ್ದಾಳಿ ನಡೆಸಿದ್ದಾರೆ. ಭಯೋತ್ಪಾದಕರಿಗೆ ರಕ್ಷಣೆ ನೀಡಲು ಪಾಕಿಸ್ತಾನವು ರಕ್ಷಣಾತ್ಮಕವಾಗಿ ಗುಂಡು ಹಾರಿಸುವಂತೆ ವಿರೋಧ ಪಕ್ಷಗಳು ನೋಟು ರದ್ಧತಿ ವಿರುದ್ಧ ಸಂಸತ್‍ನಲ್ಲಿ ವಿನಾಕಾರಣ ಗದ್ದಲ ಸೃಷ್ಟಿಸಿದವು ಎಂದು ಕಿಡಿಕಾರಿದರು. ವಾರಣಾಸಿಯಲ್ಲಿಂದು ಬನಾರಸ್ ಹಿಂದು ವಿಶ್ವವಿದ್ಯಾನಿಲಯದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ರದ್ದತಿಗೆ ವಿರುದ್ಧವಾಗಿ ವಿರೋಧಪಕ್ಷಗಳು ನಿಲ್ಲುತ್ತವೆ ಎಂದು ನಾನು ಭಾವಿಸಿರಲಿಲ್ಲ. ಕೆಲ ಜನಪ್ರತಿನಿಧಿಗಳು ಮತ್ತು ರಾಜಕಾರಣಿಗಳು, ಭ್ರಷ್ಟಾಚಾರಿಗಳ ಪರವಾಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.

ಕಾಂಗ್ರೆಸ್ ಪಕ್ಷ ಬಡವರ ಪರವಾಗಿ ಯಾವುದೇ ಉತ್ತಮ ಕಾರ್ಯಗಳನ್ನು ಕೈಗೊಂಡಿಲ್ಲ. ಮನಮೋಹನ್‍ಸಿಂಗ್ ಪ್ರಧಾನಮಂತ್ರಿಯಾಗಿದ್ದಾಗ ದೇಶಕ್ಕೆ ಬಡತನವನ್ನು ಉಡುಗೊರೆಯಾಗಿ ನೀಡಿದರು ಎಂದು ಆರೋಪಿಸಿದರು.  ನಾನು ಮಾಡುತ್ತಿರುವ ಉತ್ತಮ ಕೆಲಸದ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಆದರೆ ವಿರೋಧ ಪಕ್ಷಗಳು ಇದನ್ನು ಮನಗಾಣದೆ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವಂತೆ ವಿರೋಧ ವ್ಯಕ್ತಪಡಿಸುತ್ತಿವೆ ಎಂದು ಟೀಕಿಸಿದರು.  ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿ ಅವರಿಗೆ ತಿರುಗೇಟು ನೀಡಿದ ಮೋದಿ, ರಾಹುಲ್‍ಗಾಂಧಿ ಈಗಷ್ಟೇ ಮಾತನಾಡುವುದನ್ನು ಕಲಿಯುತ್ತಿದ್ದಾರೆ. ಇದು ನನಗೆ ತುಂಬ ಸಂತೋಷ ನೀಡಿದ ಸಂಗತಿಯಾಗಿದೆ ಎಂದು ವ್ಯಂಗ್ಯವಾಡಿದರು.

ಸಹರಾ, ಬಿರ್ಲಾ ಗ್ರೂಪ್ ಉದ್ಯಮಿಗಳಿಂದ ಮೋದಿಯವರಿಗೆ ಈ ಹಿಂದೆ ದೊಡ್ಡ ಪ್ರಮಾಣದಲ್ಲಿ ಲಂಚ ನೀಡಲಾಗಿತ್ತು ಎಂದು ರಾಹುಲ್‍ಗಾಂಧಿ ಆರೋಪಿಸಿದ್ದರು. ಈ ಆರೋಪಕ್ಕೆ ವ್ಯಂಗ್ಯಮಿಶ್ರಿತ ತಿರುಗೇಟು ನೀಡಿದ ಮೋದಿ, ರಾಹುಲ್ ತಾವು ಮಾತನಾಡಿದರೆ ಭೂಕಂಪವಾಗುತ್ತದೆ ಎಂದು ಹೇಳಿದ್ದರು. ಈಗ ಭೂಕಂಪವಾಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ ಎಂದು ಲೇವಡಿ ಮಾಡಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin