ವಿಮಾನಯಾನಕ್ಕೂ ಆಧಾರ್ ಕಡ್ಡಾಯ : 3 ತಿಂಗಳಲ್ಲಿ ಹೊಸ ವ್ಯವಸ್ಥೆ ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Adhaar--01

ನವದೆಹಲಿ, ಏ.9-ಸುರಕ್ಷತೆ ಮತ್ತು ಭದ್ರತೆ ದೃಷ್ಟಿಯಿಂದ ಏಕರೂಪದ ಗುರುತು ವ್ಯವಸ್ಥೆಯಾದ ಆಧಾರ್ ಅಥವಾ ಪಾಸ್‍ಪೋರ್ಟ್‍ನ್ನು ದೇಶದೊಳಗಿನ ವಿಮಾನಯಾನಕ್ಕೂ ಸದ್ಯದಲ್ಲೇ ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಭಾರತದ ಯಾವುದೇ ಸ್ಥಳಗಳಿಗೆ ವಿಮಾನದಲ್ಲಿ ತೆರಳಬೇಕಾದರೆ ಪ್ರಯಾಣಿಕರು ಆದಾರ್ ಅಥವಾ ಪಾಸ್‍ಪೋರ್ಟ್ ಸಂಖ್ಯೆಯನ್ನು ನೀಡಬೇಕಾಗುತ್ತದೆ.   ನಕಲಿ ಮತ್ತು ವಂಚನೆ ಹಾವಳಿಯನ್ನು ತಡೆಗಟ್ಟಲು ಮೊಬೈಲ್ ಪೋನ್ ಮತ್ತು ಡ್ರೈವಿಂಗ್ ಲೈಸನ್ಸ್‍ಗಳಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಿರುವ ಬೆನ್ನಲ್ಲೇ ಈಗ ವಿಮಾನಯಾನಕ್ಕೂ ಇದನ್ನು ಅನ್ವಯಿಸಲು ಸಿದ್ದತೆಗಳು ನಡೆಯುತ್ತಿವೆ.

ವಿಮಾನ ಪ್ರಯಾಣದ ವೇಳೆ ಇತ್ತೀಚೆಗೆ ಕೆಲವು ಪ್ರಯಾಣಿಕರಿಗೆ ಗಗನಸಖಿಯರು ಮತ್ತು ಸಿಬ್ಬಂದಿಗೆ ಕಿರಕುಳದಂಥ ಅಹಿತಕರ ಘಟನೆಗಳು ಹೆಚ್ಚಾಗುತ್ತಿರುವುದರಿಂದ ಇಂಥ ಕೃತ್ಯಗಳಲ್ಲಿ ಮೂಲ ಹಂತದಲ್ಲೇ ಕಡಿವಾಣ ಹಾಕುವುದು ಹಾಗೂ ಅನಧಿಕೃತ ವ್ಯಕ್ತಿಗಳಿಂದ ವಿಮಾನ ಸಂಚಾರದ ವೇಳೆ ಆಗುವ ತೊಂದರೆಯನ್ನು ತಪ್ಪಿಸುವುದು ಕೇಂದ್ರ ಸರ್ಕಾರದ ಉದ್ದೇಶಗಳಾಗಿವೆ. ವಿಮಾನ ಪ್ರಯಾಣಕ್ಕಾಗಿ ಟೆಕೆಟ್‍ಗಳನ್ನು ಬುಕ್ ಮಾಡುವಾಗ ಪ್ರಯಾಣಿಕರು ಇವೆರಡರಲ್ಲಿ ಯಾವುದಾರೂ ಒಂದರ ಸಂಖ್ಯೆಯನ್ನು ನಮೂದಿಸುವುದು ಕಡ್ಡಾಯ. ಇನ್ನು ಮೂರು ತಿಂಗಳ ಒಳಗೆ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿಮಾನಯಾನ ಸಚಿವಾಲಯದ ಉನ್ನತ ಮೂಲಗಳು ತಿಳಿಸಿದೆ.

ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರ ಸೂಚನೆ ಮೇರೆಗೆ ಈ ನಿಟ್ಟಿನಲ್ಲಿ ರಾಜ್ಯ ಸಚಿವ ಜಯಂತ್ ಸಿನ್ಹಾ ಕಾರ್ಯೋನ್ಮುಖರಾಗಿದ್ದು, ಹೊಸ ವಿಧಾನವು ಜೂನ್ ಅಥವಾ ಜುಲೈ ವೇಳೆಗೆ ಜಾರಿಗೆ ಬರುವ ನಿರೀಕ್ಷೆ ಇದೆ.  ಈ ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲು ಪ್ರಯಾಣಿಕರ ಗುರುತು ಮತ್ತು ವಿವರಗಳನ್ನು ಪಡೆದುಕೊಳ್ಳುವುದು ಅಗತ್ಯ. ವಿಮಾನದಲ್ಲಿ ಪ್ರಯಾಣಿಸಲು ಸ್ಥಳ ಕಾಯ್ದಿರಿಸುವ ವೇಳೆ ಆಧಾರ್ ಅಥವಾ ಪಾಸ್‍ಪೋರ್ಟ್ ಸಂಖ್ಯೆಯನ್ನು ತಿಳಿಸುವಂತೆ ಕೇಳಲಾಗುವುದು. ಇವೆರಡರಲ್ಲಿ ಯಾವುದಾದರೂ ಒಂದರ ಮಾಹಿತಿಯನ್ನು ನೀಡಿ ಪ್ರಯಾಣಿಕರು ಟಿಕೆಟ್‍ಗಳನ್ನು ಬುಕ್ ಮಾಡಬಹುದಾಗಿದೆ ಎಂದು ವಿಮಾನಯಾನ ಸಂಸ್ಥೆ ಮೂಲಗಳು ತಿಳಿಸಿವೆ.

ನಾಗರಿಕ ವಿಮಾನಯಾನ ಅಗತ್ಯಗಳು (ಸಿಎಆರ್) ಕರಡನ್ನು ಇದಕ್ಕಾಗಿ ಸಿದ್ದಪಡಿಸಲಾಗಿದೆ. ಈ ಕುರಿತಂತೆ ಮುಂದಿನ ವಾರ ಸಂಬಂಧಪಟ್ಟ ಇಲಾಖೆಗಳು ಮತ್ತು ಉನ್ನತಾಧಿಕಾರಿಗಳ ಸಭೆ ನಡೆಯಲಿದ್ದು, 30 ದಿನಗಳ ಒಳಗೆ ಈ ಬಗ್ಗೆ ಸಲಹೆ ಮತ್ತು ಅಭಿಪ್ರಾಯಗಳನ್ನು ತಿಳಿಸುವಂತೆ ಕೋರಲಾಗುತ್ತದೆ. ಇದರ ಆಧಾರದ ಮೇಲೆ ಆದಷ್ಟು ಶೀಘ್ರ ಈ ನೂತನ ಉಪಕ್ರಮ ಅನುಷ್ಠಾನಗೊಳ್ಳಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸಲು ಪಾಸ್‍ಪೋರ್ಟ್ ಕಡ್ಡಾಯಗೊಳಿರುವಂತೆ ದೇಶೀಯ ವಿಮಾನಯಾನಕ್ಕೂ ಇದನ್ನು ಕಡ್ಡಾಯವಾಗಿ ಅಳವಡಿಸಲು ಉದ್ದೇಶಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin