ವಿರೋಧದ ನಡುವೆಯೇ ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆ : ಪ್ರತಿಭಟಿಸಿದವರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Tipu-Arrestn

ಬೆಂಗಳೂರು, ನ.10-ವ್ಯಾಪಕ ವಿರೋಧ ಮತ್ತು ಅಪಸ್ವರಗಳ ನಡುವೆ ಪೊಲೀಸ್ ಸರ್ಪಗಾವಲಿನಲ್ಲಿ ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಿಸಲಾಯಿತು. ತುಮಕೂರು, ಮಡಿಕೇರಿ, ಕೋಲಾರ, ಬೆಂಗಳೂರು, ಮಂಗಳೂರು, ದಕ್ಷಿಣ ಕನ್ನಡ, ಉಡುಪಿ ಮುಂತಾದೆಡೆ ತೀವ್ರ ವಿರೋಧ ವ್ಯಕ್ತಪಡಿಸಲಾಯಿತು. ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆ ನಡೆಸಲು ಮುಂದಾದ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಕರಾಳ ದಿನಾಚರಣೆಗೆ ಕರೆ ಕೊಟ್ಟಿದ್ದು, ಕೊಡಗು ಮತ್ತಿತರೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೊಡಗು ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಖಾಸಗಿ ಬಸ್‍ಗಳು, ಆಟೋ ರಿಕ್ಷಾಗಳು ರಸ್ತೆಗಿಳಿಯಲಿಲ್ಲ. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದು, ಕೆಎಸ್‍ಆರ್‍ಟಿಸಿ ಸಂಚಾರ ವಿರಳವಾಗಿತ್ತು. ಎಲ್ಲೆಡೆ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಹಿಂದೂಪರ ಸಂಘಟನೆಗಳಿಂದ ಕರಾಳ ದಿನಾಚರಣೆ ಆಚರಿಸಿ ಕಳೆದ ಬಾರಿ ಟಿಪ್ಪು ಜಯಂತಿ ಸಂದರ್ಭದಲ್ಲಿ ಮೃತಪಟ್ಟ ಕುಟ್ಟಪ್ಪ ಅವರ ಹುತಾತ್ಮ ದಿನಾಚರಣೆ ಮಾಡಲಾಯಿತು.
ಈ ನಡುವೆಯೂ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಯಿತು.  ತುಮಕೂರಿನಲ್ಲಿ ಟಯರ್‍ಗಳಿಗೆ ಬೆಂಕಿ ಹಚ್ಚಿ ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸಲಾಯಿತಾದರೂ ಹೆಚ್ಚಿನ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರದ ಜನಪ್ರತಿನಿಧಿಗಳು ಟಿಪ್ಪು ಜಯಂತಿ ನಡೆಸಿಕೊಟ್ಟರು. ಟಿಪ್ಪು ಜಯಂತಿಗೆ ಎಸ್‍ಟಿಪಿಐ ಹಾಗೂ ಪಿಎಫ್‍ಐ ಮುಖಂಡರನ್ನು ಮುಖ್ಯ ಅತಿಥಿಗಳಾಗಿ ಕರೆದಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

ಹಾಸನ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಭಾರ ಡಿಸಿ ವೆಂಕಟೇಶ್‍ಮೂರ್ತಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನಾಳೆ ಬೆಳಗ್ಗೆ 6 ಗಂಟೆವರೆಗೆ ನಿಷೇಧಾಜ್ಞೆ ಮುಂದುವರೆಯಲಿದೆ. ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಎಸ್ಪಿ ರಾಹುಲ್ ನೀಡಿದ್ದಾರೆ. ಟಿಪ್ಪು ಜಯಂತಿ ವಿರೋಧಿಸಿ ಮೈಸೂರಿನಲ್ಲಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸಂಸದ ಪ್ರತಾಪ್‍ಸಿಂಹ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಪ್ಪು ಪಟ್ಟಿ ಧರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕೊಪ್ಪಳ ಬಹಾರ್‍ಪೇಟೆ ಬಳಿಯಿರುವ ಟಿಪ್ಪು ಸರ್ಕಲ್‍ನಲ್ಲಿ ಟಿಪ್ಪು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಟಿಪ್ಪು ಜಯಂತಿಗೆ ಚಾಲನೆ ನೀಡಿದರು.

ಜಿಲ್ಲಾಧಿಕಾರಿ ಎಂ.ಕನಗವಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ತ್ಯಾಗರಾಜನ್ ಭಾಗವಹಿಸಿದ್ದರು. ಯಾವುದೇ ಪ್ರತಿಭಟನೆ, ಅಹಿತಕರ ಘಟನೆ ನಡೆಯಲಿಲ್ಲ. ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ರಾಯಚೂರು, ಬೀದರ್, ದಾವಣಗೆರೆ, ಚಿತ್ರದುರ್ಗ ಮುಂತಾದ ಕಡೆ ಜಿಲ್ಲಾಡಳಿತ ವತಿಯಿಂದ ಟಿಪ್ಪು ಜಯಂತಿಯನ್ನು ಆಚರಿಸಲಾಯಿತು. ಸಾಂಕೇತಿಕ ಪ್ರತಿಭಟನೆಗಳು ನಡೆದವಾದರೂ ಪೊಲೀಸರ ಮುಂಜಾಗ್ರತಾ ಕ್ರಮದಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ.  ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಜಿ.ಪಂ.ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಅವರನ್ನು ತಡೆಯಲು ಹರಸಾಹಸಪಟ್ಟರು. ಸಂಸದ ನಳೀನ್‍ಕುಮಾರ್ ಕಟೀಲು ಸೇರಿದಂತೆ ನೂರಾರು ಮಂದಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಸಂದರ್ಭದಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಮುನ್ಸೂಚನೆ ಅರಿತು ಪೊಲೀಸರು 100ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin