ವಿವಾದಕ್ಕೊಳಗಾಗಿದ್ದ ಮೆಗ್ಗಾನ್ ಆಸ್ಪತ್ರೆಗೆ ಸಚಿವದ್ವಯರ ಭೇಟಿ
ಶಿವಮೊಗ್ಗ, ಜೂ.10-ಸಿಬ್ಬಂದಿಯ ನಿರ್ಲಕ್ಷ್ಯದಿಂದ ಇತ್ತೀಚೆಗೆ ತೀವ್ರ ವಿವಾದಕ್ಕೆ ಎಡೆಮಾಡಿಕೊಟ್ಟಿದ್ದ ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕಾಗೋಡು ತಿಮ್ಮಪ್ಪ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಸಚಿವದ್ವಯರ ಭೇಟಿಯ ವೇಳೆ ಎಲ್ಲ ಸಿಬ್ಬಂದಿ ಸಮಯಕ್ಕೆ ಸರಿಯಾಗಿ ಕರ್ತವ್ಯಕ್ಕೆ ಹಾಜರಾಗಿದ್ದುದು ಕಂಡುಬಂತು. ಬೆಳ್ಳಂಬೆಳಗ್ಗೆ ಆಸ್ಪತ್ರೆಗೆ ಇಬ್ಬರು ಸಚಿವರು ಭೇಟಿ ನೀಡಿ ಆಸ್ಪತ್ರೆಯಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲನೆ ನಡೆಸಿದರು.
ಕಳೆದ ವಾರ ಆಸ್ಪತ್ರೆಯ ಸಿಬ್ಬಂದಿ ರೋಗಿ ಅಮೀರ್ಸಾಬ್ ಎಂಬುವರನ್ನು ಎಕ್ಸ್ರೇ ಕೊಠಡಿಗೆ ಕರೆದೊಯ್ಯಲು ವೀಲ್ಹ್ ಚೇರ್ ಅಥವಾ ಸ್ಟ್ರೆಚರ್ ಒದಗಿಸದ ಹಿನ್ನೆಲೆಯಲ್ಲಿ ಅಮಿರ್ಸಾಬ್ ಪತ್ನಿ ತನ್ನ ಪತಿಯನ್ನು ಕಾಲು ಹಿಡಿದು ಎಕ್ಸ್ರೇ ಕೊಠಡಿಗೆ ಎಳೆದೊಯ್ಯುತ್ತಿದ್ದ ದೃಶ್ಯ ಇಡೀ ರಾಜ್ಯ ತಲೆ ತಗ್ಗಿಸುವಂತೆ ಮಾಡಿತ್ತು. ಮಾಧ್ಯಮಗಳಲ್ಲಿ ಬಿತ್ತರಿಸಲಾದ ಈ ದೃಶ್ಯ ಮತ್ತು ಪ್ರತಿಷ್ಠಿತ ಮೆಗಾನ್ ಆಸ್ಪತ್ರೆ ಸಿಬ್ಬಂದಿಯ ಹೊಣೆಗೇಡಿತನ ಮತ್ತು ಅಮಾನವೀಯತೆಗಳ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಮುಂಗಾರು ಅಧಿವೇಶನದಲ್ಲೂ ಕೂಡ ಸಾಕಷ್ಟು ಚರ್ಚೆಯಾಗಿತ್ತು.
ಆಸ್ಪತ್ರೆ ಸಿಬ್ಬಂದಿಯ ಈ ಅಮಾನುಷ ವರ್ತನೆಯನ್ನು ಇಡೀ ರಾಜ್ಯದ ಜನತೆ ಒಕ್ಕೋರಲಿನಿಂದ ಅತ್ಯಂತ ಕಟುವಾಗಿ ಖಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಹಿರಿಯ ನರ್ಸ್ ಸೇರಿದಂತೆ ನಾಲ್ವರನ್ನು ವೈದ್ಯಾಧಿಕಾರಿಗಳು ಅಮಾನತು ಮಾಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇಂದು ಉಸ್ತುವಾರಿ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಮೆಗಾನ್ ಆಸ್ಪತ್ರೆಗೆ ಭೇಟಿ ನೀಡಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS