ವಿವಾದ ಮೈ ಮೇಲೆ ಎಳೆದುಕೊಂಡ ಪದ್ಮನಾಭರೆಡ್ಡಿ
ಬೆಂಗಳೂರು,ಅ.11- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ದ ಅವಹೇಳನಕಾರಿ ಪದ ಬಳಕೆ ಮತ್ತು ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ.ಜಾರ್ಜ್ ಕಮೀಷನ್ ಏಜೆಂಟ್ ಎಂಬ ಹೇಳಿಕೆಗಳನ್ನು ನೀಡುವ ಮೂಲಕ ಬಿಬಿಎಂಪಿ ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಹೊಸ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಕಳೆದ ಎರಡೂವರೆ ವರ್ಷದ ಆಡಳಿತ ವೈಫಲ್ಯ ಖಂಡಿಸಿ ಹಾಗೂ ರಸ್ತೆ ಗುಂಡಿ ಕಸದ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿ ಬಿಜೆಪಿ ಹಮ್ಮಿ ಕೊಂಡಿದ್ದ ಪ್ರತಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಹಾಗೂ ಜಾರ್ಜ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೆ.ಜೆ.ಜಾರ್ಜ್ ಭವ್ಯ ಬಂಗಲೆಯಲ್ಲಿ ವಾಸ ಮಾಡುತ್ತಾರೆ. ಜನ ರಸ್ತೆ ಗುಂಡಿಗೆ ಬಿದ್ದು ಸಾಯುತ್ತಿದ್ದಾರೆ. ಇದು ಅವರಿಗೆ ತಿಳಿಯುತ್ತಿಲ್ಲ. ಕಮೀಷನ್ ಪಡೆಯುತ್ತಾರೆ ಎಂದು ಏಕವಚನ ಬಳಕೆ ಮಾಡಿ ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಅವರು ಮಾಡಿರುವ ಭ್ರಷ್ಟಾಚಾರ ಕೋಟಿ ಕೋಟಿ ಇದೆ. ಈಗ ಬಿಡುಗಡೆ ಆಗಿರುವ ದಾಖಲೆ ಸ್ವಲ್ಪ ಮಾತ್ರ. ಯಾವುದೇ ಸಮಸ್ಯೆಯನ್ನು ಬಗೆಹರಿಸದ ನೀವು ಅಸಂವಿಧಾನಿಕ ಪದ ಬಳಕೆ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜರಿದರು. ಜನತೆಗೆ ಬರೀ ಗುಂಡಿ ಭಾಗ್ಯ ನೀಡಿ ಕಾಂಗ್ರೆಸಿಗರು ಹುಂಡಿ ಭಾಗ್ಯ ಮಾಡಿಕೊಂಡಿದ್ದಾರೆ. ಇದೇ ಅವರು ಮಾಡಿರುವ ಸಾಧನೆ ಎಂದು ಪದ್ಮನಾಭ ರೆಡ್ಡಿ ಲೇವಡಿ ಮಾಡಿದರು.