ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಲಾರಿ ಮುಷ್ಕರ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

Lorry-Strike

ಬೆಂಗಳೂರು, ಅ.9- ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಭಾರೀ ಮುಷ್ಕರ ಆರಂಭವಾಗಿ ಸರಕು-ಸಾಗಾಣಿಕೆಯಲ್ಲಿ ವ್ಯತ್ಯಯ ಉಂಟಾಗಿದೆ. ಅವೈಜ್ಞಾನಿಕ ಸರಕು-ಸಾಗಾಣಿಕೆ ಸೇವೆ ಜಾರಿ ವಿರೋಧಿಸಿ ಮತ್ತು ಡೀಸೆಲ್ ದರ ಕಡಿಮೆ ಮಾಡಲು ಆಗ್ರಹಿಸಿ ಟೋಲ್ ರದ್ದುಪಡಿಸಲು ಒತ್ತಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಮತ್ತು ನಾಳೆ ರಾಷ್ಟ್ರಾದ್ಯಂತ ಲಾರಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ರಾಜ್ಯ ಲಾರಿ ಮಾಲೀಕರು ಬೆಂಬಲ ನೀಡಿ ಮುಷ್ಕರಕ್ಕಿಳಿದಿರುವ ಹಿನ್ನೆಲೆಯಲ್ಲಿ ಹೆದ್ದಾರಿಗಳಲ್ಲಿ ಲಾರಿ ಸಂಚಾರ ಸ್ಥಗಿತಗೊಂಡಿದೆ.

ಇಂದು ಬೆಳಗ್ಗೆ 6 ರಿಂದಲೇ ಲಾರಿಗಳ ಓಡಾಟ ವಿರಳವಾಗಿತ್ತು. ಹೆದ್ದಾರಿಗಳಲ್ಲಿ ಮಾತ್ರ ಲಾರಿಗಳ ಓಡಾಟ ಸ್ಥಗಿತಗೊಳಿಸಲಾಗಿದ್ದು, ನಗರ ಸಂಚಾರ ಎಂದಿನಂತೆ ಇತ್ತು. ಒಂದು ದಿನ ದೇಶಾದ್ಯಂತ ಲಾರಿ ಮುಷ್ಕರ ಮಾಡಿದರೆ ಸುಮಾರು 5 ಸಾವಿರ ಕೋಟಿ ರೂ.ಗಳಷ್ಟು ವಹಿವಾಟು ನಷ್ಟವಾಗುತ್ತದೆ. ಕರ್ನಾಟಕದಲ್ಲಿ 120 ಕೋಟಿ ರೂ.ಗಳಷ್ಟು ನಷ್ಟ ಉಂಟಾಗಿದೆ. ಸರಕು-ಸಾಗಾಣಿಕೆಯಲ್ಲಿ ವ್ಯತ್ಯಯವಾಗುತ್ತದೆ ಎಂದು ದಕ್ಷಿಣ ಭಾರತ ಮೋಟೋ ಟ್ರಾನ್ಸ್‍ ಪೋರ್ಟ್ ಅಸೋಸಿಯೇಷನ್ ಸಂಘಟನೆ ಪ್ರಧಾನ ಕಾರ್ಯದರ್ಶಿ ಷಣ್ಮುಗಪ್ಪ ತಿಳಿಸಿದರು.

ಟೋಲ್‍ಗಳಲ್ಲಿ ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಟೋಲ್ ಕಟ್ಟಲು ನಾವು ಹಿಂದೇಟು ಹಾಕುವುದಿಲ್ಲ. ವಾರ್ಷಿಕ ಟೋಲ್ ನಿಯಮ ಜಾರಿಗೊಳಿಸಿ ನಮಗೆ ಸರಾಗವಾಗಿ ಓಡಾಡಲು ಅನುಕೂಲ ಕಲ್ಪಿಸಬೇಕು. ಈ ರೀತಿ ಮುಂಗಡವಾಗಿ ಟೋಲ್ ಸಂಗ್ರಹಿಸಿದರೆ ಸರ್ಕಾರಕ್ಕೆ ಲಾಭ ಬರುತ್ತದೆ. ಲಾರಿಯವರಿಗೆ ಅನುಕೂಲವಾಗುತ್ತದೆ ಮತ್ತು ಡೀಸೆಲ್ ಉಳಿತಾಯವಾಗುತ್ತದೆ ಎಂದು ಅವರು ಹೇಳಿದರು. ಜಿಎಸ್‍ಟಿ ಅವೈಜ್ಞಾನಿಕವಾಗಿದ್ದು, ತೆರಿಗೆ ಭಾರದಿಂದ ಲಾರಿ ಸಾಗಾಣಿಕೆದಾರರು ತತ್ತರಗೊಂಡಿದ್ದಾರೆ. ತೆರಿಗೆಯಲ್ಲಿ ಎರಡು ಬಾರಿ ತೆರಿಗೆ ಸಂಗ್ರಹ ಮಾಡಲಾಗುತ್ತಿದೆ. ಅಲ್ಲದೆ, ಕೂಡಲೇ ನೋಂದಣಿಗೆ ಒತ್ತಾಯಿಸಲಾಗುತ್ತಿದೆ ಎಂದು ಹೇಳಿದ ಅವರು, ಡೀಸೆಲ್ ದರವನ್ನು ಜಿಎಸ್‍ಟಿ ವ್ಯಾಪ್ತಿಗೆ ತರಬೇಕು. ಇಲ್ಲವೆ ದರ ಕಡಿಮೆ ಮಾಡಬೇಕು ಎಂದು ಹೇಳಿದರು. ಹಳೆ ಲಾರಿ ಮಾರಾಟಕ್ಕೆ ಜಿಎಸ್‍ಟಿ ವಿಧಿಸುವುದನ್ನು ಕೈಬಿಡಬೇಕು ಎಂದು ಅವರು ತಿಳಿಸಿದರು.

ನೋಟು ನಿಷೇಧ ಸಂದರ್ಭದಲ್ಲಿ ಸುಮಾರು 20 ದಿನಗಳ ಕಾಲ ಎಲ್ಲ ಟೋಲ್‍ಗಳನ್ನು ಫ್ರೀ ಬಿಡಲಾಗಿತ್ತು. ಆಗ ಸರಕು-ಸಾಗಾಣಿಕೆಗೆ ಸಾಕಷ್ಟು ಅನುಕೂಲವಾಗಿತ್ತು. ಅದೇ ರೀತಿ ವರ್ಷಕ್ಕೊಂದು ಬಾರಿ ಟೋಲ್ ಸಂಗ್ರಹಿಸಿ ಟೋಲ್‍ನಲ್ಲಿ ಲಾರಿಗಳಿಗೆ ಮುಕ್ತ ಅವಕಾಶ ನೀಡಲಿ ಎಂದು ಅವರು ಹೇಳಿದರು.
ದೇಶಾದ್ಯಂತ ಈಗಾಗಲೇ 1627 ಚೆಕ್‍ಪೋಸ್ಟ್‍ಗಳನ್ನು ಹಿಂಪಡೆಯಲಾಗಿದೆ. ಅದೇ ರೀತಿ 347 ಹೆದ್ದಾರಿ ಟೋಲ್‍ಗಳನ್ನು ಕೂಡ ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ನಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವ ಭರವಸೆಯನ್ನು ರಾಜ್ಯ ಸರ್ಕಾರ ಈ ಹಿಂದೆ ನೀಡಿತ್ತಾದರೂ ಈವರೆಗೆ ಯಾವುದೇ ಬೇಡಿಕೆ ಈಡೇರಿಸಿಲ್ಲ. ಹಾಗಾಗಿ ಎರಡು ದಿನಗಳ ಕಾಲ ಸಾಂಕೇತಿಕ ಮುಷ್ಕರ ನಡೆಸುತ್ತೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಹೇಳಿದರು.

Facebook Comments

Sri Raghav

Admin